Advertisement

ಯಲಹಂಕದಲ್ಲಿ ಹಣ್ಣು, ತರಕಾರಿ ಸಂಗ್ರಹ ಕೇಂದ್ರ

11:37 AM Oct 26, 2017 | |

ಬೆಂಗಳೂರು: ರಾಜಧಾನಿಯ ಸಂಚಾರ ದಟ್ಟಣೆ ನಡುವೆಯೂ ತನ್ನ ಗ್ರಾಹಕರಿಗೆ ಸಕಾಲದಲ್ಲಿ ತಾಜಾ ಹಣ್ಣು ಹಾಗೂ ತರಕಾರಿಗಳನ್ನು ಒದಗಿಸಲು ಮುಂದಾಗಿರುವ ಹಾಪ್‌ಕಾಮ್ಸ್‌, ಅದಕ್ಕಾಗಿ ಯಲಹಂಕದಲ್ಲಿ 1.50 ಕೋಟಿ ರೂ. ವೆಚ್ಚದಲ್ಲಿ ತರಕಾರಿ-ಹಣ್ಣು ಖರೀದಿ ಮತ್ತು ಸಂಗ್ರಹಣಾ ಕೇಂದ್ರ ಆರಂಭಿಸಲು ಚಿಂತನೆ ನಡೆಸಿದೆ. ರಾಜ್ಯದ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಭಾಗದಿಂದ ಬರುವ ಹಣ್ಣು-ತರಕಾರಿಗಳನ್ನು ಈ ಕೇಂದ್ರದಲ್ಲಿ ಸಂಗ್ರಹ ಮಾಡಿ ಅಲ್ಲಿಂದ ಬೆಂಗಳೂರು ಉತ್ತರ ಮತ್ತು ಪಶ್ಚಿಮ ಭಾಗದ ಕೆ.ಆರ್‌.ಪುರದಿಂದ ಯಶವಂತಪುರದವರೆಗೆ ಬರುವ ಹಾಪ್‌ಕಾಮ್ಸ್‌ ಮಳಿಗೆಗಳಿಗೆ ಒದಗಿಸುವುದು ಸಂಗ್ರಹ ಕೇಂದ್ರ ಸ್ಥಾಪಿಸುವುದರ ಹಿಂದಿನ ಉದ್ದೇಶ. ಪ್ರಸ್ತುತ ಲಾಲ್‌ಬಾಗ್‌ ಸಮೀಪ ಹಾಪ್‌ಕಾಮ್ಸ್‌ ಕೇಂದ್ರ ಕಚೇರಿ ಇದ್ದು, ಬಹುತೇಕ ರೈತರು ಇಲ್ಲಿಗೆ ಹಣ್ಣು, ತರಕಾರಿ ತರುತ್ತಾರೆ. ಅಲ್ಲಿಂದ ನಗರ ವ್ಯಾಪ್ತಿಯ ಸುಮಾರು 250ಕ್ಕೂ ಅಧಿಕ ಹಾಪ್‌ ಕಾಮ್ಸ್‌ ಮಳಿಗೆಗಳು ಮತ್ತು ವಿವಿಧ ಕಾರ್ಖಾನೆಗಳಿಗೆ ಕಳುಹಿಸಿಕೊಡಲಾಗುತ್ತಿದೆ.

Advertisement

ಆದರೆ, ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿ ಆಗಾಗ್ಯೆ ಟ್ರಾಫಿಕ್‌ ಜಾಮ್‌ ಉಂಟಾಗುತ್ತದೆ. ಇದರಿಂದಾಗಿ ಕೇಂದ್ರ ಕಚೇರಿಯಿಂದ ನಗರದ ವಿವಿಧ ಬಡಾವಣೆಗಳಲ್ಲಿ ಇರುವ ಹಾಪ್‌ಕಾಮ್ಸ್‌ ಮಳಿಗೆಗಳಿಗೆ ತರಕಾರಿ, ಹಣ್ಣುಗಳನ್ನು ಸಕಾಲಕ್ಕೆ ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ. ಜತೆಗೆ ಸಂಸ್ಥೆಯ ಸಾಗಣೆ ವಾಹನಗಳೂ ಹಳೆಯದಾಗಿರುವುದು ಕೂಡ ಇದಕ್ಕೆ ಕಾರಣವಾಗಿದೆ.

ಮೇಲಾಗಿ ಕೇಂದ್ರ ಕಚೇರಿಯಲ್ಲಿ ಬರುವ ಎಲ್ಲಾ ತರಕಾರಿ-ಹಣ್ಣುಗಳನ್ನು ಸಂಗ್ರಹಣೆ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಗ್ರಾಹಕರಿಗೆ ತಾಜಾ ಹಣ್ಣು-ತರಕಾರಿ ಒದಗಿಸುವುದು ಕಷ್ಟವಾಗುತ್ತಿದೆ. ಸಂಗ್ರಹಣೆ ವಿಕೇಂದ್ರೀಕರಣ: ಈ ಹಿನ್ನೆಲೆಯಲ್ಲಿ ಹಣ್ಣು, ತರಕಾರಿ ಖರೀದಿ ಮತ್ತು ಸಂಗ್ರಹಣಾ ಕೇಂದ್ರವನ್ನು ವಿಕೇಂದ್ರೀಕರಿಸಿ, ಯಲಹಂಕದಲ್ಲಿ ಒಂದು ಸಂಗ್ರಹಣಾ ಕೇಂದ್ರ ಸ್ಥಾಪಿಸುವುದು ಸಂಸ್ಥೆಯ ಉದ್ದೇಶ. ಈ ರೀತಿ ಮಾಡಿದರೆ ಕೇಂದ್ರ ಕಚೇರಿ ಮೇಲಿನ ಒತ್ತಡ ಕಡಿಮೆಯಾಗುತ್ತದೆ.

ಸಂಗ್ರಹಣಾ ಸಾಮರ್ಥ್ಯ ಹೆಚ್ಚುತ್ತದೆ ಮತ್ತು ಸಂಗ್ರಹಣಾ ಕೇಂದ್ರದಿಂದ ಕಡಿಮೆ ಅವಧಿಯಲ್ಲಿ ತರಕಾರಿ-ಹಣ್ಣುಗಳನ್ನು ಮಳಿಗೆಗಳಿಗೆ ಪೂರೈಸಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ತೋಟಗಾರಿಕಾ ಇಲಾಖೆಗೆ 1.50 ಕೋಟಿ ರೂ. ವೆಚ್ಚದ ಪ್ರಸ್ತಾವನೆಯನ್ನು ಈಗಾಗಲೇ ಸಲ್ಲಿಸಲಾಗಿದೆ. ಅಧಿಕಾರಿಗಳು ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ಸಂಸ್ಥೆ ಅಧ್ಯಕ್ಷ ಎ.ಎಸ್‌.ಚಂದ್ರೇಗೌಡ “ಉದಯವಾಣಿ’ಗೆ ತಿಳಿಸಿದ್ದಾರೆ.

ಯಲಹಂಕದಲ್ಲಿ ಹಣ್ಣು, ತರಕಾರಿ ಸಂಗ್ರಹಣಾ ಕೇಂದ್ರ ಸ್ಥಾಪಿಸುವುದರಿಂದ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಭಾಗದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ಅವರು ಬೆಳೆಯನ್ನು ನಗರದ ಕೇಂದ್ರ ಭಾಗಕ್ಕೆ ತರುವ ಬದಲು ಯಲಹಂಕದಲ್ಲೇ ಮಾರಾಟ ಮಾಡಬಹುದು. ರೈತರಿಗೆ ಸಮಯದ ಜತೆಗೆ ಸಾಗಣೆ ವೆಚ್ಚವೂ ಉಳಿಯುತ್ತದೆ. ಅದೇ ರೀತಿ ರೈತರಿಂದ ಖರೀದಿಸಿದ ಹಣ್ಣು, ತರಕಾರಿಯನ್ನು ಈ ಸಂಗ್ರಹಣಾ ಕೇಂದ್ರದಲ್ಲಿಟ್ಟು, ಬೆಂಗಳೂರು ಉತ್ತರ ಮತ್ತು ಪಶ್ಚಿಮ ಭಾಗದ ಕೆ.ಆರ್‌.ಪುರದಿಂದ ಯಶವಂತ ಪುರದ ವರೆಗೆ ಬರುವಂತಹ ಸುಮಾರು 60ರಿಂದ 70ಕ್ಕೂ ಹೆಚ್ಚು ಹಾಪ್‌ಕಾಮ್ಸ್‌ ಮಳಿಗೆಗಳು, ಕಾರ್ಖಾನೆಗಳಿಗೆ ಸುಲಭವಾಗಿ ಸರಬರಾಜು ಮಾಡಲು ಸಾಧ್ಯವಾಗಲಿದೆ ಎಂದು ಅವರು ಹೇಳುತ್ತಾರೆ.

Advertisement

ಶೇ.40ರಷ್ಟು ಹೊರೆ ಕಡಿಮೆ: ಯಲಹಂಕದ ಸಂಗ್ರಹಣಾ ಕೇಂದ್ರ ನಿರ್ಮಾಣಗೊಂಡರೆ ಸಂಸ್ಥೆಗೆ ಶೇ.35ರಿಂದ 40ರಷ್ಟು ಹೊರೆ ಕಡಿಮೆಯಾಗಲಿದೆ. ಹಣ್ಣು, ತರಕಾರಿ ಸರಬರಾಜು ಸುಲಭವಾಗಲಿದೆ. ಟ್ರಾಫಿಕ್‌ ಸಮಸ್ಯೆ ನಿವಾರಣೆ ಮತ್ತು ನಿಗಧಿತ ಸಮಯದಲ್ಲಿ ತಲುಪುವುದರಿಂದ ಗ್ರಾಹಕರು ಕಚೇರಿಗಳಿಗೆ ಹೋಗುವ ಮುನ್ನವೇ ತಾಜಾ ಹಣ್ಣು, ತರಕಾರಿ ಖರೀದಿಸಲು ಸಾಧ್ಯವಾಗಲಿದೆ.” 

ಸಂಪತ್‌ ತರೀಕೆರೆ

ತರಕಾರಿ, ಹಣ್ಣು ಖರೀದಿ ಮತ್ತು ಸಂಗ್ರಹಣಾ ಕೇಂದ್ರವನ್ನು ಅತ್ಯಾಧುನಿಕ ವ್ಯವಸ್ಥೆಯಲ್ಲಿ ನಿರ್ಮಾಣ ಮಾಡಬೇಕೆಂದು ಯೋಜಿಸಲಾಗಿದೆ. ಅದಕ್ಕಾಗಿ 1.50 ಕೋಟಿ ರೂ. ವೆಚ್ಚದ ಪ್ರಸ್ತಾವನೆ ಸಲ್ಲಿಸಿದ್ದು, ತೋಟಗಾರಿಕಾ ಇಲಾಖೆಯಿಂದ ಅನುಮತಿ ಸಿಕ್ಕಿದ ಕೂಡಲೇ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ರೈತರ ಹಿತದೃಷ್ಟಿಯಿಂದ ಈ ಕೇಂದ್ರ ಆರಂಭಿಸುವುದು ಅನಿವಾರ್ಯವಾಗಿದೆ.

ಎ.ಎಸ್‌.ಚಂದ್ರೇಗೌಡ, ಹಾಪ್‌ಕಾಮ್ಸ್‌ ಅಧ್ಯಕ

Advertisement

Udayavani is now on Telegram. Click here to join our channel and stay updated with the latest news.

Next