Advertisement

ಕೊಳಚೆ ನೀರಿನಿಂದ ಲಕ್ಷ್ಮೀಸಾಗರ ಕೆರೆಯಲ್ಲೂ ನೊರೆ

09:49 AM Jul 20, 2018 | Team Udayavani |

ಬೆಂಗಳೂರು: ಕೋರಮಂಗಲ ಮತ್ತು ಚಲ್ಲಘಟ್ಟ ಕಣಿವೆಯ ಸಂಸ್ಕರಣೆಗೊಂಡ ನೀರಿಗೆ ಕೊಳಚೆ ನೀರು ಸೇರಿಕೊಂಡ
ಪರಿಣಾಮ ಕೋಲಾರದ ಲಕ್ಷ್ಮೀಸಾಗರ ಕೆರೆಯಲ್ಲಿ ನೊರೆ ಕಾಣಿಸಿಕೊಂಡಿದೆ ಎಂದು ಜಲಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಜಲಮಂಡಳಿಯು ಕೆ.ಸಿ ವ್ಯಾಲಿಯಲ್ಲಿ 55 ಎಂಎಲ್‌ಡಿ ಸಾಮರ್ಥ್ಯದ ಎರಡು ಹಾಗೂ 108 ಎಂಎಲ್‌ಡಿ ಸಾಮರ್ಥ್ಯದ ಒಂದು ಕೊಳಚೆ ನೀರು ಶುದ್ಧೀಕರಣ ಘಟಕ ಸ್ಥಾಪಿಸಿದೆ. ಇಲ್ಲಿ ಶುದ್ಧೀಕರಣಗೊಂಡ ನಂತರ ಪ್ರತಿ ದಿನ 135 ದಶಲಕ್ಷ ಲೀಟರ್‌ ನೀರನ್ನು ಪಂಪ್‌ ಮಾಡಿ ಪೈಪ್‌ ಮೂಲಕ ಕೋಲಾರದ ಲಕ್ಷ್ಮಿಸಾಗರ ಕೆರೆಗೆ ಬಿಡಲಾಗುತ್ತಿದೆ.

ದ್ವಿತೀಯ ಹಂತದಲ್ಲಿ ಸಂಸ್ಕರಣೆಯಾಗುವ ಕೊಳಚೆ ನೀರನ್ನು ಮುಂಭಾಗದ ಕೋಡಿಗೆ ಹರಿಬಿಡಲಾಗುತ್ತಿದೆ. ಇತ್ತೀಚೆಗೆ ಜೋರು ಮಳೆಯಾದ ಪರಿಣಾಮ ಕೋಡಿಯ ನೀರು ಸಂಸ್ಕರಣ ಘಟಕದ ಟ್ಯಾಂಕ್‌ಗೆ ಹರಿದು ಆ ನೀರು ಸಂಪೂರ್ಣ ಕಲುಷಿತಗೊಂಡಿದೆ.

ಕೊಳಚೆ ನೀರು ಟ್ಯಾಂಕ್‌ಗೆ ಬಂದು ಸೇರಿರುವುದು ತಿಳಿಯದೆ ಕೊಳಚೆ ಮಿಶ್ರಿತ ನೀರನ್ನು ಸಣ್ಣ ನೀರಾವರಿ ಇಲಾಖೆಯು ಪೈಪ್‌ ಮೂಲಕ ಕೋಲಾರದ ಲಕ್ಷ್ಮೀಸಾಗರ ಕೆರೆಗೆ ಹರಿಸಿದೆ. ಪೈಪ್‌ಲೈನ್‌ ಮಾರ್ಗದ ಏರಿಳಿತದ ಹಾದಿಯಲ್ಲಿ ಕೊಳಚೆ ನೀರು ಸಾಗುವಾಗ ನೊರೆ ಸೃಷ್ಟಿಯಾಗಿದೆ.

ಕೆಸಿ ವ್ಯಾಲಿಯಲ್ಲಿ ಪ್ರತಿನಿತ್ಯ ಸಂಸ್ಕರಣೆಯಾಗುವ ನೀರಿನ ಗುಣಮಟ್ಟವನ್ನು ಪರೀಕ್ಷೆ ಮಾಡಲಾಗುತ್ತದೆ. ಅಂತೆಯೇ ಟ್ಯಾಂಕಿನ ನೀರನ್ನು ಪರೀಕ್ಷೆ ಮಾಡಿದಾಗ ಪೊಟೆನ್ಶಿಯಲ್‌ ಆಫ್‌ ಹೈಡ್ರೋಜನ್‌ (ಪಿಎಚ್‌) ಹೆಚ್ಚಾಗಿರುವುದು ತಿಳಿದು ಬಂದಿದ್ದು, ಇದರಿಂದಲೇ ಲಕ್ಷ್ಮಿಸಾಗರ ಕೆರೆಯಲ್ಲಿ ನೊರೆ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಹೀಗಾಗಿ, ತಕ್ಷಣ ಕಟ್ಟೆ ನಿರ್ಮಿಸಿ ಕೊಳಚೆ ನೀರು ಸಂಸ್ಕರಿಸಿದ ನೀರು ಕೆರೆಗೆ ಸೇರದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

Advertisement

ಎಸ್‌ಟಿಪಿಯಿಂದ ಸಂಸ್ಕರಣೆಯಾದ ನೀರಿನಲ್ಲಿ ಪೊಟೆನ್ಶಿಯಲ್‌ ಆಫ್‌ ಹೈಡ್ರೋಜನ್‌ (ಪಿಎಚ್‌) 7-8.5 ಹಾಗೂ ಟಿಎಸ್‌ಎಸ್‌
(ಟೋಟಲ್‌ ಸಸ್ಪೆಂಡೆಡ್‌ ಸಾಲಿಡ್ಸ್‌) 650 ಮೈಕ್ರೊ ಗ್ರಾಂ ಇರಬೇಕು. ಕೊಳಚೆ ನೀರಿಗೆ ಮಿಶ್ರಣವಾದ ಸಂಸ್ಕರಣೆಗೊಂಡ ನೀರು ಕೋಲಾರಕ್ಕೆ ಈಗಾಗಲೇ ಹರಿದು ಹೋಗಿರುವುದರಿಂದ ಪಿಎಚ್‌ ಪ್ರಮಾಣ ಸರಿಯಾಗಿದೆ. ಬುಧವಾರ ಪರೀಕ್ಷೆ ಮಾಡಿದಾಗ 7.12 ಪಿಎಚ್‌ ಹಾಗೂ 364 ಟಿಎಸ್‌ಎಸ್‌ ಪ್ರಮಾಣ ಕಂಡುಬಂದಿದೆ. ಹೀಗಾಗಿ, ಕೋಲಾರಕ್ಕೆ ಬಿಡಲಾಗುತ್ತಿರುವ ನೀರಿನಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next