ಕಾಸರಗೋಡು: ಕೋವಿಡ್-19 ಹಿನ್ನೆಲೆಯಲ್ಲಿ ಕೇರಳ – ಕರ್ನಾಟಕ ಗಡಿ ಗ್ರಾಮಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳನ್ನು ಮಣ್ಣು ಹಾಕಿ ಮುಚ್ಚಿದ್ದು, ಪ್ರಸ್ತುತ ಅವುಗಳನ್ನು ತೆರವುಗೊಳಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆದೇಶಿಸಿದ್ದಾರೆ.
ಕಾಸರಗೋಡು,ದಕ್ಷಿಣ ಕನ್ನಡ ಜಿಲ್ಲೆಗಳ ಬಿಜೆಪಿ ನೇತಾರರ ಬೇಡಿಕೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ. ಶ್ರೀಕಾಂತ್ ತಿಳಿಸಿದ್ದಾರೆ.
ಕರ್ನಾಟಕ ಗಡಿ ಹೊಂದಿರುವ ದೇಲಂಪಾಡಿಯ ಬೆಳ್ಳಿಪ್ಪಾಡಿ, ಪನತ್ತಡಿಯ ಕಲ್ಲಾಪಳ್ಳಿ, ಎಣ್ಮಕಜೆ ಗ್ರಾ.ಪಂ.ನ ಗಡಿ ಹೊಂದಿರುವ ಸಾರಡ್ಕ ಸಹಿತ ಕಾಸರಗೋಡು ಜಿಲ್ಲೆಯ ಪ್ರಧಾನ ರಸ್ತೆಗಳಲ್ಲಿನ ಮಣ್ಣು ತೆರವುಗೊಳಿಸಿ ಅಂತಾರಾಜ್ಯ ಸಂಚಾರಕ್ಕೆ ಅನುಮತಿ ನೀಡಲು ಆದೇಶ ನೀಡಿದ್ದಾರೆ. ಸದ್ಯದಲ್ಲೇ ರಸ್ತೆಗಳು ಸಂಚಾರಕ್ಕೆ ಮುಕ್ತವಾ ಗಲಿವೆ ಎಂದು ಅವರು ಹೇಳಿದ್ದಾರೆ.
ಗಡಿ ರಸ್ತೆಗಳನ್ನು ತೆರವುಗೊಳಿಸಿ ಗಡಿ ಗ್ರಾಮಗಳಲ್ಲಿನ ಜನರಿಗೆ ಸಂಚಾರಕ್ಕೆ ಅನುಮತಿ ನೀಡಬೇಕೆಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ದ.ಕ. ಶಾಸಕರು ಹಾಗೂ ಅಧಿಕಾರಿಗಳ ಜತೆ ಚರ್ಚೆ ನಡೆಸಿ ದ್ದಲ್ಲದೆ ಇತ್ತೀಚೆಗೆ ತಲಪಾಡಿಯಲ್ಲಿ ಪ್ರತಿಭಟನೆಯನ್ನೂ ನಡೆಸಲಾಗಿತ್ತು.