ಶಹಾಬಾದ: ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಯಾವತ್ತಿಗೂ ನಿಷ್ಪ್ರಯೋಜಕ ಆಗುವುದಿಲ್ಲ. ಆದ್ದರಿಂದ ಮಕ್ಕಳು ಹೆಚ್ಚು ಕಲಿತು ಜ್ಞಾನಿಗಳಾಗಬೇಕು ಎಂದು ಗ್ರೇಡ್ -2 ತಹಶೀಲ್ದಾರ್ ಗುರುರಾಜ ಸಂಗಾವಿ ಹೇಳಿದರು.
ನಗರದ ಲಕ್ಷ್ಮೀ ಗಂಜ್‌ನಲ್ಲಿ ಆಯೋಜಿಸಲಾಗಿದ್ದ ಪ್ರಜ್ಞಾ ನವೋದಯ ಕೋಚಿಂಗ್ ಕೇಂದ್ರದ ಉದ್ಘಾಟನೆ ನೆರವೇರಿಸಿದ ಅವರು ಮಾತನಾಡಿದರು.
ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕಲಿಕಾ ಮನೋಭಾವ ಇಟ್ಟುಕೊಂಡು ಸತತ ಪರಿಶ್ರಮದಿಂದ ಅಭ್ಯಾಸ ಮಾಡಿದರೆ ಮಾತ್ರ ನಿರ್ದಿಷ್ಟ ಗುರಿ ಮುಟ್ಟಲು ಸಾಧ್ಯ. ಬದುಕಿನ ಕೊನೆ ಉಸಿರು ಇರುವರೆಗೂ ವಿದ್ಯೆ ಸಂಪಾದಿಸುತ್ತಲೇ ಇರಬೇಕು. ಕಲಿತ ವಿದ್ಯೆಯನ್ನು ಸಮಾಜದ ಹಿತಕ್ಕೆ ಬಳಸಬೇಕು. ಆಗ ಮಾತ್ರ ಬದುಕಿಗೆ ಸಾರ್ಥಕತೆ ದೊರೆಯುತ್ತದೆ ಎಂದರು.
ಈ ಭಾಗದ ಮಕ್ಕಳ ನವೋದಯ ಪರೀಕ್ಷೆ ಸಿದ್ಧತೆಗೆ ತಾಲೂಕಿನಲ್ಲಿ ಕೋಚಿಂಗ್ ಕೇಂದ್ರ ಪ್ರಾರಂಭವಾಗಿದೆ. ಇದರ ಲಾಭವನ್ನು ವಿದ್ಯಾರ್ಥಿಗಳು, ಪಾಲಕರು ಪಡೆದುಕೊಳ್ಳಬೇಕು ಎಂದು ಹೇಳಿದರು.
ಶಿಕ್ಷಕ ಗಿರಿಮಲ್ಲಪ್ಪ ವಳಸಂಗ ಮಾತನಾಡಿ, ಹಿಂದುಳಿದ ಕಲ್ಲಿನ ಗಣಿಗಾರಿಕೆ ಪ್ರದೇಶದಲ್ಲಿ ಉತ್ತಮ ವಿದ್ಯಾಭ್ಯಾಸ ಮಾಡುವ ಮೂಲಕ ಎಲ್ಲರನ್ನು ಹುಬ್ಬೇರಿಸವಂತೆ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಕೋಚಿಂಗ್ ಕೇಂದ್ರ ತೆರೆಯಲಾಗಿದೆ ಎಂದರು.
ಶಿಕ್ಷಕ ಅಖೀಲೇಶ ಕುಲಕರ್ಣಿ, ಉಪನ್ಯಾಸಕ ಮರೆಪ್ಪ ಮೇತ್ರೆ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ಸಂಯಮ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸುರೇಖಾ ಪಿ. ಮೇತ್ರೆ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಪ್ರವೀಣ ರಾಜನ್, ಪಿ.ಎಸ್.ಮೇತ್ರೆ, ರಸಿಕಾ ಎಸ್., ದೇವೆಂದ್ರಪ್ಪ ಕಾರೊಳ್ಳಿ, ಲೋಹಿತ ಕಟ್ಟಿ, ಶಂಕರಜಾನಾ, ಮಹ್ಮದ್ ಖದೀರ್, ಶಿವಶಾಲ ಕುಮಾರ ಪಟ್ಟಣಕರ್, ಜೈಭೀಮ ರಸ್ತಾಪುರ, ಸಿದ್ಧು ವಾರಕರ್, ಮಲ್ಲಣ್ಣ ಕಾರೊಳ್ಳಿ, ಅಲ್ಲಮ ಪ್ರಭು, ರವಿ ಬೆಳಮಗಿ ಇತರರು ಇದ್ದರು.