Advertisement
ತಲೇಜು ಭವಾನಿ ನೇಪಾಳದ ಜನಪ್ರಿಯ ದೇವತೆಗಳಲ್ಲಿ ಒಬ್ಬಳು. ತಲೇಜು ಭವಾನಿಯ ಮೂಲ ಮಹಾರಾಷ್ಟ್ರದ ತುಳಜಾಪುರ. ಅಲ್ಲಿನ ಭವಾನಿ ನೇಪಾಳದ ಭಕ್ತಾಪುರಕ್ಕೆ ಬಂದು ಸೇರಿದ ಕಥೆಯೇ ರೋಚಕ. ಈ ಕಥೆ ನಮ್ಮನ್ನು ಸಾವಿರ ವರ್ಷ ಹಿಂದಕ್ಕೆ ಕರೆದೊಯ್ಯುತ್ತದೆ. ಇಲ್ಲಿನ ಇನ್ನಿತರ ಶಕ್ತಿದೇವತೆಗಳಾದ ಮನಕಾಮನಾದೇವಿ, ಜೀವಂತ ದೇವತೆಕುಮಾರಿ ದೇವಿಯ ಆರಾಧಕರು ಬಹಳ ಮಂದಿ ಇಲ್ಲಿದ್ದಾರೆ.
ನೇಪಾಳದ ಮಲ್ಲ ಅರಸರು ಕೊಂಕಣ ದೇಶದ ಕರ್ನಾಟಕಿ ವಂಶದ ನಾನ್ಯದೇವನ (ಕ್ರಿ.ಶ.1096) ವಂಶದವರಾಗಿದ್ದು ಸಿಮರೋಗಂಧವನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು. ಒಮ್ಮೆ ಜನಾಂಗದ ಪ್ರಧಾನ ಪೂರ್ವಪುರುಷ ನಾನ್ಯದೇವನ ಕನಸಿನಲ್ಲಿ ಕಂಡ ಭವಾನಿ ದೇವಿ ಯಂತ್ರವೊಂದನ್ನು ಈತನಿಗೆ ಪ್ರಸಾದಿಸಿದಳಂತೆ. ಅಂದಿನಿಂದ ತುಳಜಾಭವಾನಿ ಕರ್ನಾಟಕಿ ವಂಶದ ಕುಲದೇವತೆಯಾಗಿ ಪೂಜಿಸಲ್ಪಡುತ್ತಿದ್ದಳು. ಕ್ರಿ.ಶ. 11 ನೇ ಶತಮಾನದಲ್ಲಿ ಅಂದರೆ ನಾನ್ಯದೇವನ ಕಾಲದಲ್ಲಿ ಕರ್ನಾಟಕದ ಬಾದಾಮಿ ಚಾಲುಕ್ಯರು ಖ್ಯಾತಿಯ ಉತ್ತುಂಗದಲ್ಲಿದ್ದರು. ಇವರ ಸಾಮ್ರಾಜ್ಯ ಬಿಹಾರ, ಬಂಗಾಲದ ಕಡೆಗೂ ಹಬ್ಬಿತ್ತು. ಈ ಹಿನ್ನೆಲೆಯಲ್ಲಿ ನಾನ್ಯದೇವನ ಮುಖಾಂತರ ತುಳಜಾಭವಾನಿ ನೇಪಾಳ ತಲುಪಿರುವ ಸಾಧ್ಯತೆಗಳಿವೆ. ಕ್ರಿ. ಶ. 1326 ರಲ್ಲಿ ಯಾಸುದ್ದೀನ್ ತುಘಲಕ್ ಸಿಮರೋಗಂಧದ ಮೇಲೆ ದಾಳಿ ಮಾಡಿ ಅಂದಿನ ರಾಜ ಹರಿಸಿಂಘದೇವನನ್ನು ನೇಪಾಳದ ಪರ್ವತಗಳ ಕಡೆಗೆ ಓಡಿಸಿದ್ದ. ಹರಿಸಿಂಘದೇವ ತಾನು ಅರಮನೆ ಬಿಡುವ ಮುನ್ನ ತನಗೆ ಆನುವಂಶಿಕವಾಗಿ ಬಂದಿದ್ದ ತುಳಜಾಪುರದ ಭವಾನಿಯ ಯಂತ್ರವನ್ನು ತನ್ನೊಂದಿಗೆ ಕೊಂಡೊಯ್ದನಂತೆ. ಆತನ ವಂಶಸ್ಥ ಮಹೇಂದ್ರಮಲ್ಲ ಕ್ರಿ.ಶ.1564 ರಲ್ಲಿ ಕಾಠ್ಮಂಡು ಲಕಾಯು ಮಾರ್ಗ, ಕಾಠ್ಮಂಡು ಗೋಕರ್ಣೇಶ್ವರ, ಭಕ್ತಾಪುರದ ದರ್ಬಾರ್ ಚೌಕಗಳಲ್ಲಿ ತ್ರಿಕೋಣರೇಖೆಗಳಲ್ಲಿ ವಾಸ್ತುಪ್ರಕಾರ ಸ್ಥಾಪಿಸಿದ. ಮತ್ತೂಂದು ದೇವಾಲಯ ಗುಜರಾತಿನ ಪಟಾನ್‌ನಲ್ಲಿದೆ. ಕ್ರಮೇಣ ತುಳಜಾ ಎಂಬ ಹೆಸರು ಅಪಭ್ರಂಶಗೊಂಡು ತಲೇಜುವಾಗಿದೆ ಎನ್ನಲಾಗುತ್ತದೆ. ಮತ್ತೂಂದು ದಂತಕಥೆಯ ಪ್ರಕಾರ ಅರಸನೊಂದಿಗೆ ತಲೇಜು ಭವಾನಿ ಪಗಡೆ ಆಟಕ್ಕೆ ಬರುತ್ತಿದ್ದಳಂತೆ. ಪದೇಪದೇ ಸೋಲುತ್ತಿದ್ದ ದೇವಿ ಅರಸನ ಕೋರಿಕೆಯ ಮೇರೆಗೆ ಇಲ್ಲಿ ನೆಲೆ ನಿಂತಳು.
Related Articles
Advertisement
ಲಿಂಗರಾಜು ಡಿ. ಎಸ್.