Advertisement

ಟ್ರೈನಿ ಟೆಕ್ಕಿಯಿಂದ ಸಿಇಒವರೆಗೆ…

12:30 AM Feb 12, 2022 | Team Udayavani |

ಇದು ಟಾಟಾ ಗ್ರೂಪ್‌ನಲ್ಲಿ ಎನ್‌.ಚಂದ್ರಶೇಖರನ್‌ ಅವರ ದಾರಿ. ತಮಿಳುನಾಡಿನ ಮೂಲದವರಾದ ಇವರು, 1987ರಲ್ಲಿ ಟಿಸಿಎಸ್‌ಗೆ ಟ್ರೈನಿ ಟೆಕ್ಕಿಯಾಗಿ ಸೇರ್ಪಡೆಯಾಗಿದ್ದರು. ಅಲ್ಲಿಂದ ಇಲ್ಲಿವರೆಗೂ ಟಾಟಾ ಗ್ರೂಪ್‌ನಲ್ಲೇ ವೃತ್ತಿಜೀವನ ಸವೆಸಿರುವ ಚಂದ್ರಶೇಖರನ್‌ ಅವರು, 2017ರಲ್ಲಿ ಗ್ರೂಪ್‌ನ ಸಿಇಒ ಆಗಿ ನೇಮಕವಾದರು. ವಿಶೇಷವೆಂದರೆ ಆಗ ಸೈರಸ್‌ ಮಿಸ್ತ್ರಿ ವಿಚಾರದಲ್ಲಿ ಟಾಟಾ ಗ್ರೂಪ್‌ ಕಾನೂನಿನ ಸಮಸ್ಯೆಗಳಿಂದ ನರಳುತ್ತಿತ್ತು. ಆಗ ಟಾಟಾ ಗ್ರೂಪ್‌ ಕೈಹಿಡಿದ ಇವರು, ಗ್ರೂಪ್‌ನ ಅಧ್ಯಕ್ಷ ರತನ್‌ ಟಾಟಾ ಅವರ ಅತ್ಯಂತ ಸಮೀಪವರ್ತಿ.

Advertisement

154 ವರ್ಷಗಳ ಇತಿಹಾಸವಿರುವ ಮತ್ತು 8,00,000 ಮಂದಿ ಉದ್ಯೋಗಿಗಳು ಇರುವ ಟಾಟಾ ಸಂಸ್ಥೆಗೆ ಸದೃಢವಾದ ನಾಯಕತ್ವ ಬೇಕಾಗಿತ್ತು. ಸೈರಸ್‌ ಮಿಸ್ತ್ರಿ ಅವರನ್ನು ದಿಢೀರನೇ ಟಾಟಾ ಗ್ರೂಪ್‌ ಸಿಇಒ ಹುದ್ದೆಯಿಂದ ಕಿತ್ತು ಹಾಕಿತ್ತು. ಬಳಿಕ ಅವರ ಸ್ಥಾನಕ್ಕೆ ಎನ್‌.ಚಂದ್ರಶೇಖರನ್‌ ಅವರನ್ನು ನೇಮಕ ಮಾಡಲಾಗಿತ್ತು. ಒಂದು ಹಂತದಲ್ಲಿ ಎನ್‌ಸಿಎಲ್‌ಎಟಿ ಚಂದ್ರಶೇಖರನ್‌ ಅವರ ನೇಮಕ ಅಸಿಂಧು ಹೇಳಿದ್ದರೂ ಕಡೆಗೆ ಸುಪ್ರೀಂ ಕೋರ್ಟ್‌ ಚಂದ್ರಶೇಖರನ್‌ ಅವರ ನೇಮಕವನ್ನು ಸಿಂಧುಗೊಳಿಸಿತ್ತು. ಅಲ್ಲಿಗೆ ಟಾಟಾ ಗ್ರೂಪ್‌ನಲ್ಲಿ ತಲೆದೋರಿದ್ದ ಸಮಸ್ಯೆ ನಿವಾರಣೆಯಾಗಿತ್ತು. ಅಂದಹಾಗೆ ಚಂದ್ರಶೇಖರನ್‌ ಅವರು ಪತ್ನಿ ಲಲಿತಾ ಅವರ ಜತೆ  ಮುಂಬಯಿಯಲ್ಲೇ ವಾಸವಾಗಿದ್ದಾರೆ. ಇವರಿಗೆ ಫೋಟೋಗ್ರಫಿ ಎಂದರೆ ಅಚ್ಚುಮೆಚ್ಚಂತೆ. ಹಾಗೆಯೇ, ಸಂಗೀತವೆಂದರೆ ಪಂಚಪ್ರಾಣ. ಮ್ಯಾರಥಾನ್‌ ಎಂದರೂ ಚಂದ್ರಶೇಖರನ್‌ ಅವರಿಗೆ ಇಷ್ಟ.

ಚಂದ್ರಶೇಖರನ್‌ ಅವರು ತಿರುಚ್ಚಿಯ ರೀಜನಲ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ವೃತ್ತಿಪರ ವ್ಯಾಸಂಗ ಮಾಡಿದ್ದಾರೆ. 1987ರಲ್ಲಿ ಟ್ರೈನಿ ಟೆಕ್ಕಿಯಾಗಿ ಟಿಸಿಎಸ್‌ಗೆ ಸೇರಿದರು. ಅಲ್ಲಿಂದ ಟಾಟಾ ಸನ್ಸ್‌ ಕಂಪೆನಿಯಲ್ಲಿ ಹಲವಾರು ಜವಾಬ್ದಾರಿ ನಿರ್ವಹಿಸಿದ್ದರು. 2016ರಲ್ಲಿ ಇವರನ್ನು ನಿರ್ದೇಶಕ ಮಂಡಳಿಗೆ ಸೇರಿಸಿಕೊಳ್ಳಲಾಯಿತು. 2017ರಲ್ಲಿ ಅಧಿಕೃತವಾಗಿ ಟಾಟಾ ಸನ್ಸ್‌ನ ಸಿಇಒ ಆದರು. ಸದ್ಯ ಇವರ ನೇತೃತ್ವದಲ್ಲಿ 29 ಕಂಪೆನಿಗಳಿವೆ. 2021ರ ಅಂತ್ಯದ ಹೊತ್ತಿಗೆ ಈ ಗುಂಪಿನ ಒಟ್ಟಾರೆ ಮಾರುಕಟ್ಟೆ ಮೌಲ್ಯ 314 ಬಿಲಿಯನ್‌ ಡಾಲರ್‌ ಆಗಿದೆ. ಚಂದ್ರಶೇಖರನ್‌ ಅವರು ಕಂಪೆನಿಯ ಸಿಇಒ ಹುದ್ದೆ ವಹಿಸಿಕೊಂಡ ಅನಂತರ ಮೊದಲು ಮಾಡಿದ ಕೆಲಸ ನಷ್ಟದಲ್ಲಿದ್ದ ಟಾಟಾ ಟೆಲಿಸರ್ವೀಸಸ್‌ ಅನ್ನು ಏರ್‌ಟೆಲ್‌ಗೆ ಮಾರಾಟ ಮಾಡಿದ್ದು. ಇದು ಕಂಪೆನಿಯ ಮೊಬೈಲ್‌ ಫೋನ್‌ ವ್ಯಾಪಾರ ನಡೆಸುತ್ತಿತ್ತು. 2018ರಲ್ಲಿ ಟಾಟಾ ಸನ್ಸ್‌ 35,200 ಕೋಟಿ ರೂ.ಗಳಿಗೆ ಭೂಷಣ್‌ ಸ್ಟೀಲ್‌ ಕಂಪೆನಿಯನ್ನು ಖರೀದಿ ಮಾಡಿದರು. ಇದು ಭಾರತದ ಕಾರ್ಪೋರೆಟ್‌ ವಲಯದಲ್ಲೇ ಅತ್ಯಂತ ದೊಡ್ಡ ವ್ಯಾಪಾರವಾಗಿದೆ.  2021ರ ಅಕ್ಟೋಬರ್‌ನಲ್ಲಿ ಟಾಟಾ ಕಂಪೆನಿ, ತನ್ನಿಂದಲೇ ದೂರವಾಗಿದ್ದ ಸರಕಾರಿ ಸ್ವಾಮ್ಯದ ಏರ್‌ ಇಂಡಿಯಾ ಅನ್ನು ಖರೀದಿಸಿತು. ಚಂದ್ರಶೇಖರನ್‌ ಅವರ ನೇತೃತ್ವದಲ್ಲಿ ಆದ ಬಹು ಪ್ರಾಮುಖ್ಯದ ಡೀಲ್‌ ಇದು. ಏರ್‌ ಇಂಡಿಯಾ ಖರೀದಿ ಮಾಡಿದ ಅನಂತರ ಈಗ ಟಾಟಾ ಗ್ರೂಪ್‌, ಒಟ್ಟು 3 ವಿಮಾನಯಾನ ಕಂಪೆನಿಗಳನ್ನು ಹೊಂದಿದಂತೆ ಆಗಿದೆ. ಇದರ ಜತೆಗೆ ಕಳೆದ ವರ್ಷವಷ್ಟೇ ಬಿಗ್‌ಬಾಸ್ಕೆಟ್‌ ಅನ್ನು 9,500 ಕೋಟಿ ರೂ.ಗಳಿಗೆ ಖರೀದಿ ಮಾಡಿತು. ಜತೆಗೆ ಟಾಟಾ ಸ್ಟೀಲ್‌ ಕಂಪೆನಿ ಹೊಂದಿದ್ದ ಸಾಲದ ಮೊತ್ತವನ್ನು ಕಡಿಮೆ ಮಾಡಿದ್ದು ಚಂದ್ರಶೇಖರನ್‌ ಅವರ ಅಸಾಮಾನ್ಯ ಸಾಧನೆ.

Advertisement

Udayavani is now on Telegram. Click here to join our channel and stay updated with the latest news.

Next