Advertisement

ನಾಳೆಯಿಂದ ಶಾಲೆಗಳಲ್ಲಿ ‘ವೆರಿಗುಡ್‌ 10/10’ತೆರೆಗೆ

04:50 PM Aug 26, 2018 | Team Udayavani |

ಹುಬ್ಬಳ್ಳಿ: ಬಾಲಿವುಡ್‌ ತಾರೆ ಜೂಹಿ ಚಾವ್ಲಾ ನಟಿಸಿರುವ ಮಕ್ಕಳ ಆಧಾರಿತ ಕನ್ನಡ ಚಿತ್ರ ‘ವೆರಿಗುಡ್‌ 10/10’ ಚಿತ್ರ ಹ್ಯಾಂಗ್ಯೋ ಐಸ್‌ಕ್ರೀಂ ಕಂಪೆನಿ ಪ್ರಾಯೋಜಕತ್ವದಲ್ಲಿ ಆ. 27ರಿಂದ ರಾಜ್ಯದ ಸರಕಾರಿ ಶಾಲೆಗಳಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಚಿತ್ರದ ನಿರ್ದೇಶಕ ಯಶವಂತ ಸರದೇಶಪಾಂಡೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Advertisement

ಮಕ್ಕಳ ಕಿಡಿಗೇಡಿತನ, ಅದನ್ನು ಸಹಿಸಿಕೊಳ್ಳದ ಪಾಲಕರು ಸೇರಿದಂತೆ ಮಕ್ಕಳ ಮನೋವಿಕಾಸದ ಮೇಲೆ ಚಿತ್ರ ನಿರ್ಮಿಸಲಾಗಿದೆ. ಚಿತ್ರಮಂದಿರಗಳಲ್ಲಿ ಪ್ರದರ್ಶನ ಸಾಧ್ಯವಾಗದ ಕಾರಣ ಶಾಲೆಗಳಲ್ಲಿ ಪ್ರದರ್ಶಿಸಲು ಚಿಂತಿಸಲಾಯಿತು. ಇದಕ್ಕೆ ಪೂರಕವಾಗಿ ಶಿಕ್ಷಣ ಇಲಾಖೆಯಿಂದ ಅನುಮತಿ ಕೂಡ ದೊರೆತಿದೆ. ಪ್ರದರ್ಶನಕ್ಕೆ ತಗಲುವ ವೆಚ್ಚದ ಪ್ರಾಯೋಜಕತ್ವವನ್ನು ಹ್ಯಾಂಗ್ಯೋ ಐಸ್‌ಕ್ರೀಂ ಕಂಪನಿ ವಹಿಸಿಕೊಂಡಿದೆ ಎಂದು ತಿಳಿಸಿದರು.

ಬಾಲಿವುಡ್‌ ತಾರೆ ಜೂಹಿ ಚಾವ್ಲಾ ಶಿಕ್ಷಕಿ ಪಾತ್ರದಲ್ಲಿ ನಟಿಸಿದ್ದಾರೆ. ಅಬ್ರಹಾಂ ಲಿಂಕನ್‌ ಬರೆದಿರುವ ಪತ್ರದ ಸಾರಾಂಶದ ಹಾಡಿಗೆ ಜೂಹಿ ಚಾವ್ಲಾ ಧ್ವನಿ ನೀಡಿದ್ದು, ಸಾಕಷ್ಟು ಜನಪ್ರಿಯತೆ ಗಳಿಸಿದೆ. ಗುರುಬಲ ಎಂಟರ್‌ಟೇನರ್ ಹಾಗೂ ಬಾಲಾಜಿ ಕ್ರಿಯೇಶನ್‌ ಅಡಿಯಲ್ಲಿ ನಿರ್ಮಾಣವಾಗಿರುವ ಚಿತ್ರ 90 ನಿಮಿಷದ್ದಾಗಿದೆ. ಬಾಲ ಎಕ್ಸ್‌ಪ್ರೆಸ್‌ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳೇ ಪ್ರಮುಖ ಪಾತ್ರದಲ್ಲಿದ್ದಾರೆ. ಅವರ ಪಾಲಕರಿಗೂ ಅಭಿನಯಿಸಲು ಅವಕಾಶ ನೀಡಲಾಗಿದೆ ಎಂದರು.

124 ವಿದ್ಯಾರ್ಥಿಗಳು ಚಿತ್ರದಲ್ಲಿ ನಟಿಸಿದ್ದು, ಬಾಲ್ಯದ ತುಂಟಾಟ, ತಂದೆ-ತಾಯಿ ಹಾಗೂ ಶಿಕ್ಷಕರ ಅಗತ್ಯತೆ ಕೇಂದ್ರೀಕರಿಸಿ ಚಿತ್ರಿಸಲಾಗಿದೆ. ಈಗಾಗಲೇ ಅಮೆರಿಕ, ಕತಾರ, ಇಟಲಿ, ಮಾಸ್ಕೋದಲ್ಲಿ ಚಿತ್ರ ತೆರೆಕಂಡಿದೆ. ಆದರೆ ರಾಜ್ಯದ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲು ಸಾಧ್ಯವಾಗದ ಕಾರಣ ಪ್ರತಿಯೊಂದು ಶಾಲೆಗೆ ಮುಟ್ಟಿಸುವ ಕಾರ್ಯಕ್ಕೆ ಮುಂದಾಗಲಾಗಿದೆ ಎಂದರು. 

ಆರಂಭದಲ್ಲಿ 100 ಶಾಲೆಗಳ ಪ್ರಾಯೋಜಕತ್ವ ದೊರೆತಿದ್ದು, ಸರಕಾರಿ ಶಾಲೆಗಳನ್ನು ಕೇಂದ್ರೀಕರಿಸಲಾಗಿದೆ. ವಿದ್ಯಾರ್ಥಿಯಿಂದ 10 ರೂ. ಸಂಗ್ರಹಿಸುವಂತೆ ಶಿಕ್ಷಣ ಇಲಾಖೆಯಿಂದ ನಿರ್ದೇಶನವಿದ್ದರೂ ಇದರಲ್ಲಿ ಯಾವುದೇ ಒತ್ತಾಯವಿಲ್ಲ. ಪ್ರದರ್ಶನಕ್ಕೆ ಅಗತ್ಯವಾದ ವಾಹನ, ದೊಡ್ಡ ಪರದೆಯ ಟಿವಿ, ಜನರೇಟರ್‌ ಸೇರಿದಂತೆ ಇತರೆ ಸಾಮಗ್ರಿ ನಮ್ಮಲ್ಲಿವೆ. ಖಾಸಗಿ ಶಾಲೆಗಳಿಂದ ಬೇಡಿಕೆ ಬಂದರೆ ಅಲ್ಲಿಯೂ ಪ್ರದರ್ಶಿಸಲಾಗುವುದು ಎಂದರು.

Advertisement

ಸಾಹಿತ್ಯ ಪ್ರಕಾಶನದ ಎಂ.ಎ. ಸುಬ್ರಹ್ಮಣ್ಯ ಮಾತನಾಡಿ, ಮಕ್ಕಳಿಗಾಗಿ ವಿಭಿನ್ನವಾಗಿ ನಿರ್ಮಾಣವಾಗಿರುವ ಚಿತ್ರವನ್ನು ಮಕ್ಕಳಿಗೆ ಮುಟ್ಟಿಸಬೇಕು ಎನ್ನುವ ಏಕೈಕ ಕಾರಣಕ್ಕೆ ಹ್ಯಾಂಗ್ಯೋ ಐಸ್‌ ಕ್ರೀಂ ಸಂಸ್ಥೆ ಪ್ರಾಯೋಜಕತ್ವ ತೆಗೆದುಕೊಂಡಿದೆ. ಈ ಚಿತ್ರವನ್ನು ವೀಕ್ಷಿಸಿದ ಹ್ಯಾಂಗ್ಯೋ ಐಸ್‌ ಕ್ರೀಂ ಸಂಸ್ಥೆ ಕಾರ್ಯನಿರ್ವಾಹಕ ಚೇರ್ಮ ನ್‌ ದಿನೇಶ ಪೈ ಅವರು ಚಿತ್ರ ಗ್ರಾಮೀಣ ಭಾಗದ ಮಕ್ಕಳಿಗೂ ತಲುಪಲಿ ಎನ್ನುವ ಉದ್ದೇಶದಿಂದ ಪ್ರಾಯೋಜಕತ್ವ ನೀಡಲು ಮುಂದೆ ಬಂದಿದ್ದಾರೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next