ಕೋಟ: ಕಾವಡಿ ಸ.ಹಿ.ಪ್ರಾ. ಶಾಲೆಯಲ್ಲಿ ಡಿ. 23, 24ರಂದು ಶತಮಾನೋತ್ಸವ ಕಾರ್ಯಕ್ರಮ ಜರಗಲಿದೆ. ವಿವಿಧ ಸಾಂಸ್ಕೃತಿಕ, ಮನೋರಂಜನೆ ಮತ್ತು ಸಭಾ ಕಾರ್ಯಕ್ರಮ ಹಾಗೂ ಶಾಲೆಯಲ್ಲಿ ಸೇವೆ ಸಲ್ಲಿಸಿದ ಮುಖ್ಯ ಶಿಕ್ಷಕರು, ಶಿಕ್ಷಕರು ಹಾಗೂ ಶಾಲೆ ಅಭಿವೃದ್ಧಿಗೆ ಶ್ರಮಿಸಿದವರು, ದಾನಿಗಳಿಗೆ ಗೌರವಾರ್ಪಣೆ ನಡೆಯಲಿದೆ.
ಡಿ. 23ರಂದು ಬೆಳಗ್ಗೆ 8ಕ್ಕೆ ಶಾಲೆ ಪ್ರಥಮವಾಗಿ ಆರಂಭಗೊಂಡ ಕಾವಡಿ ಗರಡಿಯಿಂದ ಶಾಲೆ ತನಕ ಪುರ ಮೆರವಣಿಗೆ ನಡೆಯಲಿದೆ. 9ಕ್ಕೆ ಧ್ವಜಸ್ತಂಭ ಉದ್ಘಾಟನೆ, ದ್ವಜಾರೋಹಣ, ಬಹುಮಾನ ವಿತರಣೆ ನಡೆಯಲಿದೆ. ಮೋಹನ್ ಕಾಂಚನ್ ಧ್ವಜಸ್ತಂಭ ಉದ್ಘಾಟಿಸಲಿದ್ದಾರೆ ಹಾಗೂ ವಡ್ಡರ್ಸೆ ಗ್ರಾ.ಪಂ. ಅಧ್ಯಕ್ಷ ಲೋಕೇಶ್ ಕಾಂಚನ್ ಧ್ವಜಾರೋಹಣ ನೆರವೇರಿಸಲಿದ್ದಾರೆ.
ಸಂಜೆ 6ಕ್ಕೆ ಶತಮಾನೋತ್ಸವ ಉದ್ಘಾಟನೆ ನೆರವೇರಲಿದ್ದು, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಕಿರಣ್ ಕುಮಾರ್ ಕೊಡ್ಗಿ ಅಧ್ಯಕ್ಷತೆ ವಹಿಸುವರು. ಹವರಾಲು ಮಹಾಲಿಂಗೇಶ್ವರ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆ. ಉದಯಚಂದ್ರ ಶೆಟ್ಟಿ ಹಾಗೂ ಸ್ಥಳೀಯ ದಾನಿಗಳಾದ ಚಾಂಪಾಡಿ ಪ್ರಪುಲ್ಲ ಜೆ. ಶೆಟ್ಟಿಯವರು ಬಾಲವನ ಉದ್ಘಾಟಿಸುವರು. ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ವರದರಾಜ್ ಶೆಟ್ಟಿ ಸ್ವಸ್ತಿವಾಚನ ಮಾಡುವರು. 8.30ಕ್ಕೆ ವಿದ್ಯಾರ್ಥಿಗಳಿಂದ ಮನೋರಂಜನೆ ಹಳೆ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಡಿ. 24ರಂದು ಬೆಳಗ್ಗೆ 9ಕ್ಕೆ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ನಡೆಯಲಿದೆ. ಸಂಜೆ 6ಕ್ಕೆ ಗುರುವಂದನೆ ನಡೆಯಲಿದ್ದು, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಉಪಸ್ಥಿತರಿರುವರು. ಅಪರಾಹ್ನ 2ಕ್ಕೆ ಕುಂದಾಪುರ ರೂಪಕಲಾ ತಂಡದಿಂದ ನಾಟಕ, ವಿದ್ಯಾರ್ಥಿಗಳಿಂದ ಮನೋರಂಜನೆ, ಹಳೆ ವಿದ್ಯಾರ್ಥಿಗಳಿಂದ ನಾಟಕ ಪ್ರದರ್ಶನ ನಡೆಯಲಿದೆ.
ಶತಮಾನೋತ್ಸವ ಸಮಿತಿ ಅಧ್ಯಕ್ಷ ಕೆ. ಚಂದ್ರಶೇಖರ ಶೆಟ್ಟಿ ಮತ್ತು ಸದಸ್ಯರು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗುರುರಾಜ್ ಕಾಂಚನ್ ಮತ್ತು ಸದಸ್ಯರು, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ. ಪದ್ಮನಾಭ ಕಾಂಚನ್ ಮತ್ತು ಸದಸ್ಯರು, ಮುಖ್ಯ ಶಿಕ್ಷಕಿ ಉಷಾ ಶೆಟ್ಟಿ ಮತ್ತು ಶಿಕ್ಷಕರು, ಶಾಲಾ ನಾಯಕಿ ಮೇಘನಾ ಮತ್ತು ಊರಿನವರು, ಶಿಕ್ಷಣಾಭಿಮಾನಿಗಳು ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ ಎಂದು ಸಂಸ್ಥೆ ಪ್ರಕಟನೆಯಲ್ಲಿ ತಿಳಿಸಿದೆ.