Advertisement

ನಾಳೆಯಿಂದ 2 ದಿನ ಹಲಸಿನ ಹಬ್ಬ

12:28 PM Aug 02, 2019 | Suhan S |

ಮೈಸೂರು: ಬಡವರ ಹಣ್ಣು ಎಂದೇ ಜನಪ್ರಿಯವಾಗಿರುವ ಹಲಸಿನ ಮಹತ್ವವನ್ನು ಗ್ರಾಹಕರಿಗೆ ಮತ್ತು ರೈತರಿಗೆ ತಿಳಿಸಿಕೊಡುವ ಉದ್ದೇಶದಿಂದ ಸಹಜ ಸಮೃದ್ಧ ಸಂಸ್ಥೆ ಮತ್ತು ರೋಟರಿ ಕ್ಲಬ್‌ ಮೈಸೂರು ಪಶ್ಚಿಮದ ಆಶ್ರಯದಲ್ಲಿ ಆ.3 ಮತ್ತು 4ರಂದು ಹಲಸಿನ ಹಬ್ಬ ವನ್ನು ನಗರದ ನಂಜರಾಜ ಬಹದ್ದೂರ್‌ ಛತ್ರದಲ್ಲಿ ಏರ್ಪಡಿಸಲಾಗಿದೆ.

Advertisement

ಹಲಸು ಖಾದ್ಯ: ಹಲಸಿನ ಮಹತ್ವ ಸಾರುವ ಮೇಳದಲ್ಲಿ, ಕೆಂಪು, ಹಳದಿ ಮತ್ತು ಬಿಳಿ ಹಲಸಿನ ತಳಿ ಹಣ್ಣುಗಳು ತಿನ್ನಲು ಸಿಗಲಿವೆ. ಹಲಸಿನ ಐಸ್‌ಕ್ರೀಂ, ಚಿಪ್ಸ್ಸ್, ಚಾಕೋಲೇಟ್, ಹಪ್ಪಳ, ಹಲ್ವ, ಕಬಾಬ್‌,ಹೋಳಿಗೆ, ವಡೆ, ದೋಸೆ, ಪಲ್ಯ , ಬಿರಿಯಾನಿಯ ಮಳಿಗೆಗಳು ಇರಲಿವೆ. ಹಲಸಿನ ಬೀಜದ ಪೇಯ ‘ಜಾಫಿ’ ಕುಡಿಯಲು ಸಿಗಲಿದೆ. 14 ಜಾತಿಯ ಹಲಸಿನ ತಳಿಗಳು ವಿಶೇಷವಾಗಿ ಕೆಂಪು ಹಲಸಿನ ತಳಿಯ ಗಿಡಗಳು ಮಾರಾಟಕ್ಕೆ ಬರಲಿವೆ. ಹಲಸಿನ ಸಾಗುವಳಿ ಮತ್ತು ಮೌಲ್ಯವರ್ಧನೆ ಕುರಿತ ಪುಸ್ತಕಗಳು ಸಿಗಲಿವೆ. ಹಲಸು ಹಚ್ಚುವ ಯಂತ್ರವೂ ಸಿಗಲಿದೆ.

ಹಲಸಿನ ಹಬ್ಬವನ್ನು ಜಿಲ್ಲಾ ರೋಟರಿ ಗೌರ್ನರ್‌ ರೊ.ಜೋಸೆಫ್ ಮ್ಯಾಥ್ಯು ಉದ್ಘಾಟಿಸಲಿದ್ದಾರೆ. ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಎಂ.ಆರ್‌. ದಿನೇಶ್‌, ಎ.ಪಿ. ಚಂದ್ರಶೇಖರ್‌ ರಚಿಸಿರುವ ‘ಹಲಸು ಬಿಡಿಸಿದಾಗ’ ಪುಸ್ತಕ ಬಿಡುಗಡೆ ಮಾಡಲಿ ದ್ದಾರೆ. ‘ಸಿದ್ದು’ ಕೆಂಪು ಹಲಸಿನ ಖ್ಯಾತಿಯ ತುಮಕೂರಿನ ಪರಮೇಶ್‌, ದೊಡ್ಡಬಳ್ಳಾಪುರದ ಹಲಸು ಬೆಳೆಗಾರರ ಸಂಘದ ಅಧ್ಯಕ್ಷ ರವಿಕುಮಾರ್‌ ಮತ್ತು ಹಿರೇಹಳ್ಳಿ ಫಾರಂನ ವಿಜ್ಞಾನಿ ಡಾ. ಕರುಣಾಕರನ್‌ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ

ಭಾನುವಾರ ಮಧ್ಯಾಹ್ನ 12ಗಂಟೆಗೆ ಹಲಸಿನ ಅಡುಗೆ ಸ್ಪರ್ಧೆ, 2 ಗಂಟೆಗೆ ಹಲಸಿನ ಹಣ್ಣು ತಿನ್ನುವ ಸ್ಪರ್ಧೆ ಏರ್ಪಡಿಸಲಾಗಿದೆ.

ತರಬೇತಿ: ಆ.3ರಂದು ಬೆಳಗ್ಗೆ 11ಗಂಟೆಗೆ ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ ರೈತರಿಗಾಗಿ ಹಲಸು ನೆಟ್ಟು-ಬರ ಅಟ್ಟು ತರಬೇತಿ ಕಾರ್ಯಕ್ರಮ ಏರ್ಪಡಿಸಲಾಗಿದೆ.

Advertisement

ಹಲಸಿನ ವಿವಿಧ ತಳಿಗಳ ಬಗ್ಗೆ ಭಾರತೀಯ ತೋಟಗಾರಿಕಾ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ.ಕರುಣಾಕರ್‌, ಸಿದ್ದು ಕೆಂಪು ಹಲಸಿನ ತಳಿಯ ವಿಶೇಷತೆಗಳ ಬಗ್ಗೆ ತುಮಕೂರು ಜಿಲ್ಲೆಯ ಚೇಳೂರಿನ ಎಸ್‌.ಎಸ್‌. ಪರಮೇಶ್‌, ಒಣಭೂಮಿ ತೋಟಗಾರಿಕೆಯಲ್ಲಿ ಹಲಸಿನ ಕೃಷಿ ಮಾಡುವ ಬಗ್ಗೆ ಮೈಸೂರಿನ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜಿ.ಡಿ.ದಿನೇಶ್‌ಕುಮಾರ್‌, ಅತಿ ಸಾಂದ್ರ ಪದ್ಧತಿ ಯಲ್ಲಿ ಹಲಸು ಬೆಳೆವ ಬಗ್ಗೆ ದೇವನಹಳ್ಳಿಯ ಶಿವನಾಪುರದ ರಮೇಶ್‌ ಮತ್ತು ಹಲಸು ಬೆಳೆಗಾರರ ಸಂಘಟನೆಯ ಯಶಸ್ಸಿನ ಬಗ್ಗೆ ದೊಡ್ಡಬಳ್ಳಾಪುರದ ತೂಬನ ಗೆರೆಯ ರವಿಕುಮಾರ್‌ ಮಾಹಿತಿ ನೀಡಲಿದ್ದಾರೆ. ಆಸಕ್ತರು ಹೆಸರು ನೋಂದಾಯಿಸಿಕೊಳ್ಳಲು ಮೊ. 8867252979 ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next