Advertisement

ಇಂದಿನಿಂದ ಸುರಕ್ಷಾ ಯಾತ್ರೆ: ಶೋಭಾ

02:55 PM Mar 03, 2018 | Harsha Rao |

ಉಡುಪಿ: ನಿರಂತರವಾಗಿ ಹಿಂದೂ ಯುವಕರ ಕೊಲೆಗಳು ನಡೆಯುತ್ತಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಈ ಹಿನ್ನೆಲೆಯಲ್ಲಿ ಜನರಲ್ಲಿ ಧೈರ್ಯ ತುಂಬುವ ಉದ್ದೇಶದಿಂದ ಬಿಜೆಪಿ ವತಿಯಿಂದ ಮಾ. 3ರಿಂದ 6ರ ವರೆಗೆ “ಮಂಗಳೂರು ಚಲೋ – ಜನ ಸುರಕ್ಷಾ ಯಾತ್ರೆ’ ಹಮ್ಮಿಕೊಳ್ಳಲಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

Advertisement

ರಾಜ್ಯದ ಇತರ ಭಾಗಗಳಲ್ಲಿಯೂ ಹಿಂದೂ ಕಾರ್ಯಕರ್ತರು, ಬಿಜೆಪಿ ಕಾರ್ಯಕರ್ತರ ಕೊಲೆ ನಡೆಯುತ್ತಿದೆ. ಅಧಿಕಾರಿಗಳ ಮೇಲೆ ಹಲ್ಲೆ ನಡೆಯುತ್ತಿವೆ. ದಕ್ಷ ಅಧಿಕಾರಿಗಳು ಕಾರ್ಯನಿರ್ವಹಿಸಲು ಸಾಧ್ಯ ವಾಗುತ್ತಿಲ್ಲ. ಜನರಲ್ಲಿ ಭಯ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಜನರಲ್ಲಿ ಧೈರ್ಯ ತುಂಬಲು, ಸಮಾಜ ಘಾತಕ ಶಕ್ತಿಗಳ ಮೇಲೆ ನಿಗಾ ಇಡುವಂತೆ ಜಾಗೃತಿ ಮೂಡಿಸಲು ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮಾ. 3ರಂದು ಅಂಕೋಲ, ಕುಮಟಾ, ಮಾ. 4ರಂದು ಹೊನ್ನಾವರ, ಭಟ್ಕಳ, ಮಾ. 5ರಂದು ಬೈಂದೂರು, ಕುಂದಾಪುರ, ಉಡುಪಿಯಲ್ಲಿ ಪಾದಯಾತ್ರೆ, ಸಾರ್ವಜನಿಕ ಸಭೆಗಳು ನಡೆಯಲಿವೆ. ಅಂಕೋಲದಿಂದ ಹೊರಡುವ ಸುರಕ್ಷಾ ಯಾತ್ರೆಗೆ ಸಚಿವ ಪ್ರಕಾಶ್‌ ಜಾಬ್ಡೇಕರ್‌ ಚಾಲನೆ ನೀಡಲಿದ್ದು, ಸಚಿವ ಅನಂತ್‌ ಕುಮಾರ್‌ ಹೆಗಡೆ ಉಪಸ್ಥಿತರಿರುತ್ತಾರೆ.

ಕುಶಾಲನಗರದಲ್ಲಿ ಸಚಿವ ಸದಾನಂದ ಗೌಡ ಚಾಲನೆ ನೀಡಲಿದ್ದು, ಸಂಸದ ಪ್ರತಾಪ ಸಿಂಹ ಉಪಸ್ಥಿತರಿರುತ್ತಾರೆ ಎಂದವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

“ಉಜ್ವಲ ರಥ’ಕ್ಕೆ ಚಾಲನೆ
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಆರಂಭವಾದ ಅನಂತರ ದೇಶದಲ್ಲಿ 6 ಕೋಟಿ ಹೊಸ ಎಲ್‌ಪಿಜಿ ಸಂಪರ್ಕಗಳಾಗಿದ್ದು, ಅವುಗಳಲ್ಲಿ 3 ಕೋಟಿ “ಉಜ್ವಲ ಯೋಜನೆ’ಯಡಿ ಉಚಿತ ಸಂಪರ್ಕಗಳು. ಈ ಪೈಕಿ ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆ ಗಳಲ್ಲಿ ಒಟ್ಟು 22,637 ಕುಟುಂಬಗಳಿಗೆ ಉಚಿತ ಗ್ಯಾಸ್‌ ಸಂಪರ್ಕ ನೀಡಲಾಗಿದೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

Advertisement

“ಉಜ್ವಲ’ ಉಚಿತ ಗ್ಯಾಸ್‌ ಸಂಪರ್ಕ ಮಾಹಿತಿ- ಜಾಗೃತಿಗಾಗಿ ಹಮ್ಮಿಕೊಳ್ಳಲಾಗಿರುವ “ಉಜ್ವಲ ರಥಯಾತ್ರೆ’ಗೆ ಉಡುಪಿ ಜಿಲ್ಲಾ ಬಿಜೆಪಿ ಕಚೇರಿ ಆವರಣದಲ್ಲಿ ಮಾ. 2ರಂದು ಚಾಲನೆ ನೀಡಿದರು.

“ಸಖೀ’ ಕೇಂದ್ರ
ದೌರ್ಜನ್ಯಕ್ಕೊಳಗಾದ ಹೆಣ್ಮಕ್ಕಳಿಗೆ ಸಾಂತ್ವನ, ಚಿಕಿತ್ಸೆ, ತಾತ್ಕಾಲಿಕ ವಸತಿ, ನೆರವು ಒದಗಿಸುವ “ಸಖೀ’ ವನ್‌ ಸೆಂಟರ್‌ ಉಡುಪಿ ನಿಟ್ಟೂರಿನಲ್ಲಿ ನಿರ್ಮಾಣ ಗೊಂಡಿದ್ದು, ಇದನ್ನು ಮಾ. 5ರಂದು ಮಧ್ಯಾಹ್ನ 2 ಗಂಟೆಗೆ ಕೇಂದ್ರ ಸಚಿವೆ ಮೇನಕಾ ಗಾಂಧಿ ಅವರು ಉದ್ಘಾಟಿಸಲಿದ್ದಾರೆ ಎಂದು ಶೋಭಾ ತಿಳಿಸಿದರು.

ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮಂಗಳೂರು ವಿಭಾಗದ ಪ್ರಭಾರಿ ಕೆ. ಉದಯ ಕುಮಾರ್‌ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್‌ ಸುವರ್ಣ, ವಕ್ತಾರ ಕಟಪಾಡಿ ಶಂಕರ ಪೂಜಾರಿ, ಉಪಾಧ್ಯಕ್ಷ ಸುಪ್ರಸಾದ್‌ ಶೆಟ್ಟಿ, ಹಿಂದುಳಿದ ಮೋರ್ಚಾ ರಾಜ್ಯ ಉಪಾಧ್ಯಕ್ಷ ಕಿರಣ್‌ ಕುಮಾರ್‌, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಶ್ಯಾಮಲಾ ಕುಂದರ್‌, ಜಿ.ಪಂ. ಸದಸ್ಯೆ ರೇಷ್ಮಾ ಉದಯ್‌ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಧ್ಯಾ ರಮೇಶ್‌ ಉಪಸ್ಥಿತರಿದ್ದರು.

ಬ್ರಹ್ಮಾವರದಲ್ಲಿ ಪಾಸ್‌ಪೋರ್ಟ್‌ ಕೇಂದ್ರ
ಬ್ರಹ್ಮಾವರದಲ್ಲಿ ಮಾ. 5ರಂದು ಮಧ್ಯಾಹ್ನ 2.30ಕ್ಕೆ ಪಾಸ್‌ಪೋರ್ಟ್‌ ಸೇವಾ ಕೇಂದ್ರ ಉದ್ಘಾಟನೆಗೊಳ್ಳಲಿದೆ ಎಂದು ಶೋಭಾ ತಿಳಿಸಿದರು.

ಮಾ. 6: ಮಂಗಳೂರಿಗೆ ಯೋಗಿ ಆದಿತ್ಯನಾಥ್‌
ಜನಸುರಕ್ಷಾ ಯಾತ್ರೆ ಮಾ. 6ರಂದು ಮಂಗಳೂರು ತಲಪಲಿದ್ದು, ಅಪರಾಹ್ನ 3ಕ್ಕೆ ಮಂಗಳೂರು ಜ್ಯೋತಿ ವೃತ್ತದಲ್ಲಿ ಸಾರ್ವಜನಿಕ ಸಭೆ ಜರಗಲಿದ್ದು, ಉ.ಪ್ರ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಮಾತನಾಡಲಿದ್ದಾರೆ. ಉಡುಪಿ ಪಾದಯಾತ್ರೆಯಲ್ಲಿ ಕೇಂದ್ರ ಸಚಿವೆ ಮೇನಕಾ ಗಾಂಧಿ ಪಾಲ್ಗೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next