Advertisement

ಇಂದಿನಿಂದ ರಾಷ್ಟ್ರೀಯ ತೋಟಗಾರಿಕೆ ಮೇಳ

06:27 AM Jan 23, 2019 | Team Udayavani |

ಬೆಂಗಳೂರು: ರಾಷ್ಟ್ರೀಯ ತೋಟಗಾರಿಕೆ ಮೇಳ-2019ಕ್ಕೆ ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಆವರಣ ಸಜ್ಜಾಗಿದ್ದು, ಬುಧವಾರದಿಂದ ಮೂರು ದಿನಗಳ ಕಾಲ ಮೇಳ ನಡೆಯಲಿದೆ.

Advertisement

“ಗ್ರಾಮೀಣ ಸಮೃದ್ಧಿಗಾಗಿ ತೋಟಗಾರಿಕೆ’ ಘೋಷವಾಕ್ಯದಡಿ ಈ ಬಾರಿ ಮೇಳ ಆಯೋಜಿಸಲಾಗಿದ್ದು, ಇದಕ್ಕೆ ಪೂರಕವಾದ ಸಂಶೋಧನೆಗಳು, ಸಂಕರಣ ತಳಿಗಳು, ಮೌಲ್ಯವರ್ಧನೆ, ವಿಜ್ಞಾನಿಗಳು ಮತ್ತು ರೈತರೊಂದಿಗೆ ಸಂವಾದ, ಕ್ಷೇತ್ರೋತ್ಸವ ಸೇರಿದಂತೆ ವಿವಿಧ ಪ್ರಕಾರದ ಪ್ರದರ್ಶನಗಳು ಮೇಳದ ಪ್ರಮುಖ ಆಕರ್ಷಣೆ ಆಗಿರಲಿವೆ. ಬುಧವಾರ ಬೆಳಗ್ಗೆ  10.30ಕ್ಕೆ ರಾಜ್ಯಪಾಲ ವಜೂಭಾಯಿ ವಾಲಾ ಚಾಲನೆ ನೀಡಲಿದ್ದಾರೆ. ಕೃಷಿ ಸಚಿವ ಎನ್‌.ಎಚ್‌. ಶಿವಶಂಕರರೆಡ್ಡಿ, ಸಂಸದ ಡಾ.ಎಂ. ವೀರಪ್ಪ ಮೊಯಿಲಿ ಮತ್ತಿತರರು ಭಾಗವಹಿಸಲಿದ್ದಾರೆ.

ವಿಜ್ಞಾನಿಗಳಿಂದ ಮಾಹಿತಿ: 135ಕ್ಕೂ ಅಧಿಕ ಮಳಿಗೆಗಳು, ಸುಮಾರು 60 ತರಕಾರಿ ತಳಿಗಳು, 21ಕ್ಕೂ ಹೆಚ್ಚು ಸಂಕರಣ ತರಕಾರಿ ತಾಕುಗಳ ಪ್ರದರ್ಶನ ಇದರಲ್ಲಿ ಕಾಣಬಹುದು. ಹೊಸ ತರಕಾರಿ, ಹಣ್ಣು, ಹೂವಿನ ಬೆಳೆಗಳ ಪರಿಚಯ, ರೋಗ ನಿರೋಧಕ ಶಕ್ತಿ ಹೊಂದಿರುವ ತಳಿಗಳ ಬಗ್ಗೆ ವಿಜ್ಞಾನಿಗಳು ಮಾಹಿತಿ ನೀಡಲಿದ್ದಾರೆ.

ತೋಟಗಾರಿಕಾ ಬೆಳೆ ಬೆಳೆಯಲು ರೈತರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿಯೇ ರೈತರು-ವಿಜ್ಞಾನಿಗಳೊಂದಿಗೆ ಚರ್ಚೆ ಏರ್ಪಡಿಸಲಾಗಿದೆ. ಯುವಕರು ಪಟ್ಟಣಗಳತ್ತ ಮುಖಮಾಡುತ್ತಿದ್ದಾರೆ. ಅಂತಹವರಿಗೆ ತೋಟಗಾರಿಕೆ ಲಾಭದಾಯಕ ಉದ್ಯಮ ಹೇಗೆ ಎಂಬುದರ ಬಗ್ಗೆ ತಿಳಿವಳಿಕೆ ನೀಡಲಾಗುವುದು. ಜತೆಗೆ ಪ್ರಗತಿಪರ ಕೃಷಿಕರಿಗೆ ಮಾರುಕಟ್ಟೆ ಜಾಲ ಕುರಿತು ತಿಳಿವಳಿಕೆ ನೀಡಲಾಗುವುದು ಎಂದು ಐಐಎಚ್‌ಆರ್‌ ನಿರ್ದೇಶಕ ಎಂ.ಆರ್‌. ದಿನೇಶ್‌ ತಿಳಿಸಿದರು.  

ಕೃಷಿ ಪರಿಕರಣಗಳು: ಸಮಗ್ರ ಬೇಸಾಯಕ್ಕೂ ಇಲ್ಲಿ ಒತ್ತು ನೀಡಲಾಗಿದೆ. ಹಣ್ಣಿನ ಗಿಡಗಳ ಜತೆಗೆ, ಮೇವಿನ ಬೆಳೆ, ತರಕಾರಿ, ಹೂವಿನ ಗಿಡಗಳನ್ನು ಬೆಳೆಯಬಹುದು. ನೀರಿನ ಕೊರತೆ ಇರುವ ರೈತರು, ಕೃಷಿ ಹೊಂಡದ ನೆರವಿನಿಂದ ಹೇಗೆ ತರಕಾರಿ ಬೆಳೆಯಬಹುದು ಎಂದು ತೋರಿಸುವುದಕ್ಕಾಗಿ ಒಂದು ಎಕರೆಯಲ್ಲಿ ಸಮಗ್ರ ಕೃಷಿ ಪದ್ಧತಿ’ ಅಳವಡಿಸಿರುವ ತಾಕನ್ನು ಸಿದ್ಧಪಡಿಸಲಾಗಿದೆ.

Advertisement

ಇದರಲ್ಲಿ ಹೈನುಗಾರಿಕೆ, ಕೋಳಿ,ಕುರಿ ಸಾಕಾಣೆ, ಹಣ್ಣಿನ ಗಿಡಗಳು, ತರಕಾರಿ ಬೆಳೆ, ಮೇವಿನ ಬೆಳೆ ಬೆಳೆಯುವ ಜತೆಗೆ, ಕೃಷಿ ಹೊಂಡವನ್ನು ಮಾಡಿ ತೋರಿಸಲಾಗಿದೆ. ಮೇಳದಲ್ಲಿ  ನೂರಕ್ಕೂ ಹೆಚ್ಚು ಮಳಿಗೆಗಳಿವೆ. ಇದರಲ್ಲಿ ಬೀಜ, ಗೊಬ್ಬರ, ಹಣ್ಣಿನ ಗಿಡಗಳು ಸೇರಿದಂತೆ ರೈತರಿಗೆ ಅಗತ್ಯವಾದ ಕೃಷಿ ಪರಿಕರಗಳು ಲಭ್ಯವಿರುತ್ತವೆ ಎಂದರು. 

ರೈತರಿಗೆ ಅಗತ್ಯ ವ್ಯವಸ್ಥೆ: ಕಾಶ್ಮೀರ್‌, ಆಸ್ಸಾಂ, ಹರಿಯಾಣ, ಗೋವಾ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ರೈತರು ಆಗಮಿಸಲಿದ್ದು, ಪ್ರತಿ ದಿನ ಸುಮಾರು 10ರಿಂದ 20 ಸಾವಿರ ರೈತರು ಆಗಮಿಸುವ ನಿರೀಕ್ಷೆ ಇದೆ. ಹೀಗೆ ಭೇಟಿ ನೀಡುವ ರೈತರಿಗೆ ಹೆಸರಘಟ್ಟದ ಟಿ.ಬಿ. ಕ್ರಾಸ್‌ನಿಂದ ಐಐಎಚ್‌ಆರ್‌ಗೆ ಉಚಿತ ವಾಹನ ವ್ಯವಸ್ಥೆ ಕಲ್ಪಿಸಲಾಗಿದೆ. ಜತೆಗೆ ಬಿಎಂಟಿಸಿಗೂ ಹೆಚ್ಚು ಬಸ್‌ಗಳ ಕಾರ್ಯಾಚರಣೆಗೆ ಮನವಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. 

ಸೀಡ್‌ ವಿಲೇಜ್‌ ಪರಿಕಲ್ಪನೆ: ರೈತರು ತರಕಾರಿ ಬೀಜಗಳನ್ನು ಉತ್ಪಾದಿಸಿ, ತೋಟಗಾರಿಕಾ ಸಂಶೋಧನಾ ಕೇಂದ್ರಕ್ಕೆ ಮಾರಾಟ ಮಾಡುವಂತಹ “ಸೀಡ್‌ ವಿಲೇಜ್‌’ ಪರಿಕಲ್ಪನೆ ಪರಿಚಯಿಸಲಾಗಿದೆ. ಈ ಪರಿಕಲ್ಪನೆಯಿಂದ ರೈತರ ಆದಾಯ ದುಪ್ಪಟ್ಟಾಗಲಿದೆ. ತರಕಾರಿ ಜತೆಗೆ ಬೀಜಗಳನ್ನು ಬೆಳೆಯಬಹುದು. ಇದರ ಬಗ್ಗೆ ತರಬೇತಿ ಜತೆಗೆ ಕಡಿಮೆ ದರದಲ್ಲಿ ಬೀಜಗಳನ್ನು ಸಂಸ್ಥೆಯಿಂದ ವಿತರಿಸಲಾಗುವುದು ಎಂದು ಎಂ.ಆರ್‌. ದಿನೇಶ್‌ ತಿಳಿಸಿದರು.

ಹೊಸ ತಳಿಗಳ ತಾಕುಗಳು: ಮಾವಿನಲ್ಲಿ ಅರ್ಕಾ ಉದಯ, ಪಪ್ಪಾಯದಲ್ಲಿ ಅರ್ಕಾ ಪ್ರಭಾತ್‌, ಟೊಮೆಟೋದಲ್ಲಿ ಅರ್ಕಾ ರಕ್ಷಕ್‌ ಎಂಬ ರೋಗ ನಿರೋಧಕ ತಳಿಗಳನ್ನು ಈ ಮೊದಲೇ ಐಐಎಚ್‌ಆರ್‌ ಬಿಡುಗಡೆ ಮಾಡಿದೆ. ಅರ್ಕಾ ರಕ್ಷಕ್‌ ಮೂರು ರೋಗಗಳನ್ನು ವಿರೋಧಿಸುವಂತಹ ಶಕ್ತಿ ಹೊಂದಿದ್ದು, ಒಂದು ಗಿಡದಲ್ಲಿ 19 ಕೆಜಿವರೆಗೂ ಹಣ್ಣು ಬಿಡುತ್ತದೆ! ಇದರ ಮುಂದುವರಿದ ಭಾಗವಾಗಿ ಅರ್ಕಾ ಅಬೇದ್‌ ಎಂಬ ಟೊಮೆಟೋ ತಳಿ ಹೊಸದಾಗಿ ಸೇರ್ಪಡೆಯಾಗಿದ್ದು,  ಇದು ನಾಲ್ಕು ರೋಗವನ್ನು ತಡೆಯುವ ಶಕ್ತಿ ಹೊಂದಿದೆ. ಇವುಗಳ ತಾಕುಗಳನ್ನು ಮೇಳದಲ್ಲಿ ಕಾಣಬಹುದು.

Advertisement

Udayavani is now on Telegram. Click here to join our channel and stay updated with the latest news.

Next