ಬೆಂಗಳೂರು: ಅಂತಾರಾಷ್ಟ್ರೀಯ ಕೃಷಿ ಮೇಳಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಗಾಂಧಿ ಕೃಷಿ ವಿಜ್ಞಾನ ಕೇಂದ್ರ ಸಜ್ಜಾಗಿದೆ. ಇಂದು (ನ.16) ಬೆಳಗ್ಗೆ 11ಗಂಟೆಗೆ ಮುಖ್ಯವೇದಿಕೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ರಾಜ್ಯಪಾಲ ವಜೂಭಾಯಿ ವಾಲಾ ಅವರು ಕೃಷಿ ಮೇಳದ ಉದ್ಘಾಟನೆ ನೆರವೇರಿಸುವರು. ನಂತರ ಸಿ.ಬೈರೇಗೌಡ ರಾಜ್ಯ ಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿ, ಡಾ.ಎಂ.ಎಚ್. ಮರೀಗೌಡ ರಾಜ್ಯ ಮಟ್ಟದ ಅತ್ಯುತ್ತಮ ತೋಟಗಾರಿಕ ರೈತ ಪ್ರಶಸ್ತಿಯನ್ನ ಅವರು ಪ್ರದಾನ ಮಾಡಲಿದ್ದಾರೆ.
ಕೃಷಿ ಸಚಿವ ಕೃಷ್ಣಬೈರೇಗೌಡ ಅಧ್ಯಕ್ಷೀಯ ಭಾಷಣ ಮಾಡುವರು. ಅತಿಥಿಗಳಾಗಿ ಕೃಷಿ ವಿವಿ ವ್ಯವಸ್ಥಾಪನಾ ಮಂಡಳಿ ಸದಸ್ಯ ಕೆ.ಪ್ರತಾಪ್‌ಚಂದ್ರಶೆಟ್ಟಿ, ಸರ್ಕಾರ ಮುಖ್ಯ ಕಾರ್ಯದರ್ಶಿ ಸುಭಾಷ್‌ಚಂದ್ರ ಖುಂಟಿಯಾ ತೋಟಗಾರಿಕೆ ಸರ್ಕಾರದ ಕಾರ್ಯದರ್ಶಿ ಎಂ.ಮಹೇಶ್ವರ್‌ರಾವ್, ಕೃಷಿ ಆಯುಕ್ತ ಜಿ.ಸತೀಶ್ ಮತ್ತಿತರರು ಭಾಗವಹಿಸಲಿದ್ದಾರೆ.
ಮೇಳದ ಮತ್ತೂಂದು ವೇದಿಕೆಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದ್ದು, ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ಪ್ರಶಸ್ತಿ ವಿತರಿಸುವರು. ಅತಿಥಿಗಳಾಗಿ ಇಂಧನ ಸಚಿವ ಡಿ.ಕೆ.ಶಿವಕುಮಾರ್, ಸಂಸದರಾದ ಆರ್.ಧೃವನಾರಾಯಣ್, ಎಸ್.ಪಿ.ಮುದ್ದಹನುಮೇಗೌಡ, ಡಿ.ಕೆ.ಸುರೇಶ್, ಮೇಯರ್ ಸಂಪತ್ ರಾಜ್, ರಾಜ್ಯ ರೈತ ಸಂಘ(ಹಸಿರು ಸೇನೆ)ದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ರಾಜ್ಯ ಕಬ್ಬು ಬೆಳಗಾರರ ಸಂಘ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಭಾಗವಹಿಸುವರು. ಕೃಷಿ ವಿವಿ ಕುಲಪತಿ ಡಾ.ಎಚ್. ಶಿವಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ.
ರೈತ ಪ್ರಶಸ್ತಿ ಪ್ರದಾನ: ಬೆಂಗಳೂರು ಗ್ರಾಮಾಂತರ, ನಗರ ಮತ್ತು ರಾಮನಗರ ಜಿಲ್ಲೆಗಳ ಜಿಲ್ಲಾ ಮಟ್ಟದ ಅತ್ಯುತ್ತಮ ರೈತ ಹಾಗೂ ರೈತ ಮಹಿಳಾ ಪ್ರಶಸ್ತಿ ಮತ್ತು ತಾಲೂಕು ಮಟ್ಟದ ಅತ್ಯುತ್ತಮ ಯುವ ರೈತ, ಯುವ ರೈತ ಮಹಿಳೆ ಪ್ರಶಸ್ತಿ ಪ್ರದಾನ ನಡೆಯಲಿದೆ.
ಜೈವಿಕ ಇಂಧನ ಬಳಕೆ: ಹೊಂಗೆ, ಬೇವು, ಹಿಪ್ಪೆ, ಸಿಮರೂಬಾ, ಅಮೂರ, ಸುರಹೊನ್ನೆ, ಜತ್ರೋಪ ಮುಂತಾದ ವಿವಿಧ ಜಾತಿಯ ಸಸ್ಯಗಳ ಬೆಳೆಯುವ, ಸಂಸ್ಕರಿಸುವ ಮತ್ತು ಬಳಕೆ ಮಾಡುವ ಕುರಿತು ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕಾರ್ಯಕ್ರಮ ನಡೆಯಲಿದೆ. ಜತೆಗೆ ಇಡೀ ದೇಶದಲ್ಲಿ ಹಸಿರು ತಂತ್ರಜ್ಞಾನದವಾದ ಬಯೋಗ್ಯಾಸ್ ಘಟಕದಿಂದ ವಿದ್ಯುತ್ ಉತ್ಪಾದನಾ ತಂತ್ರಜ್ಞಾನವನ್ನು ಬಳಸಿಕೊಂಡ ಪ್ರಪ್ರಥಮ ವಿಶ್ವವಿದ್ಯಾಲಯವಾಗಿದ್ದು, ಐದು ಟನ್ ಸಾಮರ್ಥ್ಯದ ಬಯೋಗ್ಯಾಸ್ ಘಟಕದಿಂದ ಪ್ರತಿ ದಿನ 200 ಘನ ಮೀಟರ್ ಅನಿಲ ಉತ್ಪಾದನೆ, 300ರಿಂದ 320 ಯುನಿಟ್ ವಿದ್ಯುತ್ ಉತ್ಪಾದನೆ ಮತ್ತು ಮೂರು ಟನ್ ಸಾವಯವ ಗೊಬ್ಬರ ಉತ್ಪಾದಿಸುತ್ತಿದ್ದು, ಘಟಕ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ವಿಸ್ತರಣಾ ಪದ್ಧತಿ, ಸುಧಾರಿತ ಕೃಷಿ, ಹೈನುಗಾರಿಕೆ ಪದ್ಧತಿಗಳನ್ನು ಆಚರಣೆಗೆ ತಂದು ಪ್ರತ್ಯಕ್ಷವಾಗಿ ಅವುಗಳ ಲಾಭವನ್ನು ರೈತರಿಗೆ ಪ್ರಾತ್ಯಕ್ಷಿಕೆ ಮೂಲಕ ತೋರಿಸುವ ವ್ಯವಸ್ಥೆ ಮಾಡಲಾಗಿದೆ.
ಕೃಷಿ ಮೇಳದ ಆಕರ್ಷಣೆ
ಇತ್ತೀಚೆಗೆ ಬಿಡುಗಡೆಯಾದ ಸೂರ್ಯಕಾಂತಿ, ತೊಗರಿ, ಹುಚ್ಚೆಳ್ಳು, ಬೀಜದ ದಂಟು, ಹುರುಳಿ, ಅವರೆ, ರಾಗಿ ಮತ್ತು
ಸಿರಿಧಾನ್ಯಗಳ ತಳಿಗಳು, ಅಧಿಕ ಇಳುವರಿ ನೀಡುವ ಹುಲ್ಲುಗಾವಲು, ಅಲಸಂದೆ ಸೇರಿದಂತೆ ವಿವಿಧ ಸುಧಾರಿತ ತಳಿಗಳ ಪ್ರಾತ್ಯಕ್ಷಿಕೆ, ಸಿರಿಧಾನ್ಯಗಳ ಮಹತ್ವ ಮತ್ತು ಅವುಗಳಿಂದ ತಯಾರಿಸಬಹುದಾದಿ ತಿಂಡಿ, ತಿನಿಸುಗಳ ಮಾಹಿತಿ. ಹವಾಮಾನ ವೈಪರೀತ್ಯ ಮತ್ತು ಕೃಷಿ ಕುರಿತು ವಿಜ್ಞಾನಿಗಳಿಂದ ಸಂವಾದ , ಪಶುಸಂಗೋಪನೆ, ಹೈನುಗಾರಿಕೆ, ಕುರಿ, ಕೋಳಿ ಸಾಕಣೆ ಹಾಗೂ ಮೀನು ಸಾಕಣೆ ಕುರಿತು ಮಾಹಿತಿ ಕಾರ್ಯಕ್ರಮ ನಡೆಯಲಿದೆ. ಸುಧಾರಿತ ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಸುಮಾರು 175 ಮಳಿಗೆಗಳಲ್ಲಿ ನಡೆಯಲಿದೆ. ಹನಿ ಮತ್ತು ತುಂತುರು ನೀರಾವರಿ ಪದ್ಧತಿ ಬಗ್ಗೆ ಪ್ರಾತ್ಯಕ್ಷಿಕೆ ನಡೆಯಲಿದೆ. ಮಳೆ ಮತ್ತು ಮೇಲ್ಛಾವಣಿ ನೀರಿನ ಕೊಯ್ಲು ಬಗ್ಗೆ ಮಾಹಿತಿ ಪೂರ್ಣ ಕಾರ್ಯಕ್ರಮ ನಡೆಯಲಿದೆ.
ತೋಟಗಾರಿಕೆ ಬೆಳೆಗಳ ಪ್ರಾತ್ಯಕ್ಷಿಕೆ
ನಿಖರ ಬೇಸಾಯದಲ್ಲಿ ವಿವಿಧ ತರಕಾರಿ ಮತ್ತು ಹೂವಿನ ಬೆಳೆಗಳು, ತರಕಾರಿ ಬೆಳೆಗಳಲ್ಲಿ ಉತ್ತಮ ತಳಿಗಳು ಹಾಗೂ ಹೊಸ ತಾಂತ್ರಿಕತೆಗಳು, ಟೊಮ್ಯಾಟೊ, ಬದನೆ, ಮೆಣಸಿನಕಾಯಿ, ಹೀರೆಕಾಯಿ, ಪಡವಲ, ಬಳ್ಳಿ ಹುರುಳಿ ಮತ್ತು ಮೀಟರ್ ಅಲಸಂದೆಯ ಸಂಕರಣ ಹಾಗೂ ಉತ್ತಮ ತಳಿಗಳು, ಹೆಚ್ಚಿನ ಸಾಂದ್ರತೆಯಲ್ಲಿ ಮಾವಿನ ಬೆಳೆ, ಮೇಲ್ಛಾವಣಿ ತೋಟಗಾರಿಕೆ ಮತ್ತು ವರ್ಟಿಕಲ್ ಗಾರ್ಡನ್ ಕುರಿತು ಪ್ರಾತ್ಯಕ್ಷಿಕೆ ನಡೆಯಲಿ.