Advertisement

ಇಂದಿನಿಂದ ರಾಷ್ಟ್ರೀಯ ಭಾವೈಕ್ಯ ಶಿಬಿರ 

11:35 AM Dec 28, 2018 | Team Udayavani |

ಬೆಳ್ತಂಗಡಿ : ರಾಷ್ಟ್ರೀಯ ಸೇವಾ ಯೋಜನೆಯ ರಾಷ್ಟ್ರಮಟ್ಟದ ಶಿಬಿರವೊಂದಕ್ಕೆ ಉಜಿರೆ ಎಸ್‌.ಡಿ.ಎಂ. ಕಾಲೇಜು ಸಜ್ಜಾಗುತ್ತಿದ್ದು, ಡಿ. 28ರಿಂದ ಜ. 3ರ ವರೆಗೆ ಜರಗಲಿರುವ ರಾಷ್ಟ್ರೀಯ ಭಾವೈಕ್ಯ ಶಿಬಿರಕ್ಕೆ ದೇಶದ 19 ವಿಶ್ವವಿದ್ಯಾನಿಲಯಗಳ 350ಕ್ಕೂ ವಿದ್ಯಾರ್ಥಿಗಳು ಸಾಕ್ಷಿಯಾಗಲಿದ್ದಾರೆ. ಪರಸ್ಪರ ಭಾವೈಕ್ಯವನ್ನು ಸಾರುವ ಉದ್ದೇಶದಿಂದ ಶಿಬಿರ ಸಂಘಟಿಸಲ್ಪಟ್ಟಿದ್ದು, ದೇಶದ 29 ರಾಜ್ಯಗಳು ಹಾಗೂ 7 ಕೇಂದ್ರಾಡಳಿತ ಪ್ರದೇಶಗಳ ಸಂಸ್ಕೃತಿಯ ದರ್ಶನ ಈ ಶಿಬಿರದ ಮೂಲಕ ವಿದ್ಯಾರ್ಥಿಗಳಿಗೆ ಪರಿಚಿತವಾಗಲಿದೆ.

Advertisement

ಡಿ. 28ರಂದು ಅಪರಾಹ್ನ 3ಕ್ಕೆ ಸಿದ್ಧವನ ಗುರುಕುಲ ಸಭಾಂಗಣದಲ್ಲಿ ಶಿಬಿರವನ್ನು ಎಸ್‌.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ. ಯಶೋವರ್ಮ ಅವರ ಅಧ್ಯಕ್ಷತೆಯಲ್ಲಿ ಮಂಗಳೂರು ವಿವಿ ರಿಜಿಸ್ಟ್ರಾರ್‌ ಪ್ರೊ| ಎ.ಎಂ. ಖಾನ್‌ ಉದ್ಘಾಟಿಸಲಿದ್ದಾರೆ. ಶಾಸಕ ಹರೀಶ್‌ ಪೂಂಜ, ಎನ್ನೆಸ್ಸೆಸ್‌ ಪ್ರಾದೇಶಿಕ ನಿರ್ದೇಶಕ ಕೆ.ವಿ. ಖಾದ್ರಿ ನರಸಿಂಹಯ್ಯ, ರಾಜ್ಯ ಎನ್ನೆಸ್ಸೆಸ್‌ ಅಧಿಕಾರಿ ಡಾ| ಗಣನಾಥ್‌ ಶೆಟ್ಟಿ, ಎನ್ನೆಸ್ಸೆಸ್‌ ನಿರ್ದೇಶಕಿ ಡಾ| ವಿನೀತಾ ರೈ, ಕಾಲೇಜು ಪ್ರಾಂಶುಪಾಲ ಪ್ರೊ| ಟಿ.ಎನ್‌. ಕೇಶವ್‌ ಪಾಲ್ಗೊಳ್ಳಲಿದ್ದಾರೆ.

ಶಿಬಿರದಲ್ಲಿ ಡಿ. 28ರಂದು ಸಂಜೆ 6.30ಕ್ಕೆ ಕುದ್ರೋಳಿ ಗಣೇಶ್‌ ಅವರಿಂದ ಸ್ವಚ್ಛತೆ ಕುರಿತು ಜಾದೂ, 29ರಂದು ಅಪರಾಹ್ನ 2ಕ್ಕೆ ಡಾ|ಬಿ. ಯಶೋವರ್ಮ ಅವರಿಂದ ಸಾಮಾಜಿಕ ಜವಾಬ್ದಾರಿಗಳ ಕುರಿತು ಉಪನ್ಯಾಸ, 30ರಂದು ಅಪರಾಹ್ನ 3.30ಕ್ಕೆ ಗಾಂಧೀಜಿಯವರ ಪ್ರಸ್ತುತತೆ ಕುರಿತು ಉಪನ್ಯಾಸ, 31ರಂದು ಅಪರಾಹ್ನ 3.30ಕ್ಕೆ ಉಮಾಶಂಕರ್‌ ಅವರಿಂದ ಸರಕಾರದ ಯೋಜನೆಗಳನ್ನು ತಲುಪಿಸುವಲ್ಲಿ ಯುವಕರ ಪಾತ್ರದ ಕುರಿತು ಉಪನ್ಯಾಸ,  ಜ. 1ರಂದು ಸಂಜೆ 4.45ಕ್ಕೆ ಡಾ| ದತ್ತಾತ್ರೇಯ ವೆಲಂಕರ್‌ ಅವರಿಂದ ಹರಿಕಥೆ ಜರಗಲಿದೆ. ಜ. 3ರಂದು ಎಸ್‌. ಡಿ.ಎಂ. ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ| ಎಸ್‌. ಪ್ರಭಾಕರ್‌ ಅವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಮಂಗಳೂರು ಶ್ರೀ ರಾಮಕೃಷ್ಣ ಮಠದ ಸ್ವಾಮಿ ಜಿತಕಾಮಾನಂದಜಿ ಮಹಾರಾಜ್‌ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ಡಾ| ಹೆಗ್ಗಡೆ ಜತೆ ಸಂವಾದ
ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಒಂದು ದಿನ ಧರ್ಮಸ್ಥಳಕ್ಕೆ ಭೇಟಿ ನೀಡಿ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಜತೆ ಸಂವಾದ ನಡೆಸಲಿದ್ದಾರೆ. 

ಇಂದು ವೈಭವದ ಮೆರವಣಿಗೆ 
ಡಿ. 28ರಂದು ಶಿಬಿರದ ಆರಂಭದಲ್ಲಿ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಿಂದ ಸುಮಾರು 40ಕ್ಕೂ ಅಧಿಕ ಸಾಂಸ್ಕೃತಿಕ ತಂಡಗಳನ್ನೊಳಗೊಂಡ ವೈಭವದ ಮೆರವಣಿಗೆ ನಡೆಯಲಿದೆ. ಇಲ್ಲಿ ಸಾಮಾಜಿಕ ಜಾಗೃತಿ ಸಾರುವ ಟಾಬ್ಲೊ, ವೀರಗಾಸೆ, ಭರತನಾಟ್ಯ ಮೊದಲಾದ ಸಂಸ್ಕೃತಿ ಸಾರುವ ಪ್ರದರ್ಶನಗಳಿರುತ್ತವೆ. 

Advertisement

ಡಿ. 30: ಆರೋಗ್ಯ ಶಿಬಿರ 
ಪ್ರತಿದಿನ ಸಂಜೆ 5.30ರಿಂದ ರಾತ್ರಿ 9ರ ವರೆಗೆ ವಿವಿಧ ರಾಜ್ಯಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನಡೆಯಲಿವೆ. ಶಿಬಿರಾರ್ಥಿಗಳಿಗೆ ಪ್ರತಿದಿನ ಪೌಷ್ಟಿಕಾಹಾರ ದೊರಕಲಿದೆ. ಡಿ. 30ರಂದು ಬೆಳಗ್ಗೆ ಕ್ಯಾನ್ಸರ್‌ ತಪಾಸಣೆ, ನೇತ್ರದಾನ ನೋಂದಣಿ ಸಹಿತ ಆರೋಗ್ಯ ಶಿಬಿರ ನಡೆಯಲಿದೆ.

ಸರ್ವಸಜ್ಜು 
ರಾಷ್ಟ್ರೀಯ ಭಾವೈಕ್ಯ ಶಿಬಿರಕ್ಕೆ ಕಾಲೇಜು ಪೂರ್ಣ ರೀತಿಯಲ್ಲಿ ಸಜ್ಜಾಗಿದ್ದು, ಎಸ್‌.ಡಿ.ಎಂ.ನ ತಂಡ ಇದಕ್ಕಾಗಿ ಒಂದೂವರೆ ತಿಂಗಳು ಶ್ರಮಿಸಿದೆ. ಶಿಬಿರಕ್ಕೆ ಈಗಾಗಲೇ ಕೆಲವು ತಂಡಗಳು ಆಗಮಿಸಿದ್ದು, ಇನ್ನು ಕೆಲವು ತಂಡಗಳು 28ಕ್ಕೆ ಆಗಮಿಸಲಿವೆ.
– ಗಣೇಶ್‌ ಶೆಂಡ್ಯೆ  
ಯೋಜನಾಧಿಕಾರಿ, ಎಸ್‌.ಡಿ.ಎಂ.ನ
ಎನ್‌.ಎಸ್‌.ಎಸ್‌. ಘಟಕ

Advertisement

Udayavani is now on Telegram. Click here to join our channel and stay updated with the latest news.

Next