Advertisement
ಈ ವರ್ಷ ಆಯ್ದ ಒಂದು ಸಾವಿರ ಸರಕಾರಿ ಶಾಲೆಗಳಲ್ಲಿ ಆರಂಭಿಸಿದ ಆಂಗ್ಲ ಮಾಧ್ಯಮ ಬೇಡಿಕೆ ತೀರಾ ಹೆಚ್ಚಿದೆ. ಆದರೆ 30 ಮಕ್ಕಳ ಮಿತಿ ಇರುವುದರಿಂದ ಅನೇಕ ಮಕ್ಕಳು- ಹೆತ್ತವರಿಗೆ ನಿರಾಶೆಯಾಗಿದೆ. ಇದಕ್ಕೆ ಇಲಾಖೆ ಕಂಡುಕೊಂಡಿರುವ ಸಾಂತ್ವನ ಸೂತ್ರವೇ “ನಲಿ-ಕಲಿ’ಯಲ್ಲಿ ಆಟ – ಚಟುವಟಿಕೆಗಳ ಮೂಲಕ ಇಂಗ್ಲಿಷ್ ಭಾಷೆಯನ್ನು ಹೆಚ್ಚು ಚೆನ್ನಾಗಿ ಬೋಧಿಸುವುದು.
Related Articles
Advertisement
ಶಿಕ್ಷಕರಿಗೆ ತರಬೇತಿ: ಈಗಾಗಲೇ ಆಂಗ್ಲ ಶಿಕ್ಷಣ ಬೋಧಿಸಲು ಆಯ್ಕೆಯಾದ ಒಬ್ಬ ಶಿಕ್ಷಕರಿಗೆ ಅಗತ್ಯವಿರುವ ಕೌಶಲಾಭಿವೃದ್ಧಿ ತರಬೇತಿ ನೀಡಲಾಗಿದೆ. ಅದೇ ಶಿಕ್ಷಕರು “ನಲಿ-ಕಲಿ’ಯಲ್ಲಿ ಚಟುವಟಿಕೆ ಆಧಾರಿತ ಇಂಗ್ಲಿಷ್ ಹೇಳಿಕೊಡಲಿದ್ದಾರೆ. ಕೆಲವು ಶಾಲೆಗಳಲ್ಲಿ 4 ಮತ್ತು 5ನೇ ತರಗತಿಯ ಆಂಗ್ಲ ಶಿಕ್ಷಕರನ್ನು ಇದಕ್ಕೆ ಗೊತ್ತುಪಡಿಸಲಾಗಿದೆ ಎಂದು ಸರ್ವ ಶಿಕ್ಷಾ ಅಭಿಯಾನದ ಪ್ರಮುಖರು ಮಾಹಿತಿ ನೀಡಿದ್ದಾರೆ.
ಏನಿದು ಆ್ಯಕ್ಟಿವಿಟಿ ಕಾರ್ಡ್?: ಇದು ಚಟುವಟಿಕೆ ಆಧಾರಿತ ಇಂಗ್ಲಿಷ್ ಕಲಿಕೆ ವಿಧಾನ. ಕಾರ್ಡ್ ಎಂಬುದು ಹೆಸರಷ್ಟೆ, ಕಿಟ್ ಎನ್ನಲಡ್ಡಿಯಿಲ್ಲ. 1ರಿಂದ 3ನೇ ತರಗತಿಗಳ ಮಕ್ಕಳನ್ನು ತಲಾ 30 ವಿದ್ಯಾರ್ಥಿಗಳ ಯೂನಿಟ್‌ಗಳಾಗಿ ವಿಂಗಡಿಸಲಾಗುತ್ತದೆ. ಪ್ರತಿ ಯೂನಿಟ್‌ಗೆ ಒಂದರಂತೆ ಕಲಿಕಾ ಸಾಮಗ್ರಿ ಮತ್ತು ಕಲಿಕಾ ವಿಧಾನ ಒಳಗೊಂಡ ಒಂದು ಸೆಟ್ ಆ್ಯಕ್ಟಿವಿಟಿ ಕಾರ್ಡ್ ನೀಡಲಾಗುತ್ತದೆ.
ಇದರಲ್ಲಿರುವ ಸೂಚನೆಗಳ ಅನುಸಾರ ಶಿಕ್ಷಕರು ಬೋಧಿಸಬೇಕು. ಮೊದಲ 3 ತಿಂಗಳಲ್ಲಿ ಪದ, ಉಚ್ಚಾರ, ಆಲಿಸುವಿಕೆ, ಸಂಭಾಷಣೆ, ಬರವಣಿಗೆ ಸಂಬಂಧಿತ ಆಟಗಳು, ವಿವಿಧ ಆಟಗಳ ಮೂಲಕ ಇಂಗ್ಲಿಷ್ ಕಲಿಕೆ; ಅನಂತರ ಓದುವುದು ಮತ್ತು ಬರವಣಿಗೆಗೆ ಒತ್ತು ನೀಡಲಾಗುತ್ತದೆ.
ಸರಕಾರಿ ಶಾಲೆಗಳಲ್ಲಿ ಕನ್ನಡದಷ್ಟೇ ಇಂಗ್ಲಿಷ್‌ಗೂ ಒತ್ತು ನೀಡಲು ಸರಕಾರ ಸೂಚಿಸಿದೆ. ಆಂಗ್ಲ ಮಾಧ್ಯಮ ಆರಂಭವಾಗಿರುವ 1 ಸಾವಿರ ಶಾಲೆಗಳಲ್ಲಿ “ನಲಿ-ಕಲಿ’ ವ್ಯವಸ್ಥೆಯಡಿ ಪರಿಣಾಮಕಾರಿ ಆಂಗ್ಲ ಶಿಕ್ಷಣ ಈ ವರ್ಷದಿಂದ ಆರಂಭವಾಗಲಿದೆ. ದಾಖಲಾತಿ ಪೂರ್ಣಗೊಂಡ ಬಳಿಕ ಮಕ್ಕಳ ಸಂಖ್ಯೆ ನೋಡಿಕೊಂಡು ಆ್ಯಕ್ಟಿವಿಟಿ ಕಾರ್ಡ್ ಹಂಚಲಾಗುತ್ತದೆ.-ಗುಣವತಿ, ಜೂನಿಯರ್ ಪ್ರೋಗ್ರಾಂ ಆಫೀಸರ್, ನಲಿಕಲಿ ಯೋಜನೆ, ಸರ್ವ ಶಿಕ್ಷಾ ಅಭಿಯಾನ “ನಲಿ-ಕಲಿ’ಯಲ್ಲಿ ಪರಿಚಯ ಭಾಷೆಯಾಗಿ ಇಂಗ್ಲಿಷ್ ಬೋಧನೆ ಇತ್ತು. ಆದರೆ ಪ್ರಸಕ್ತ ವರ್ಷದಿಂದ ಇಂಗ್ಲಿಷ್ ಮಾಧ್ಯಮ ಆರಂಭವಾದ್ದರಿಂದ ದಾಖಲಾತಿ ಹೆಚ್ಚುತ್ತಿದೆ. ಅಂತಹ ಮಕ್ಕಳೂ ಇಂಗ್ಲಿಷನ್ನು ಪರಿಣಾಮಕಾರಿಯಾಗಿ ಕಲಿಯಬೇಕೆಂಬ ದೃಷ್ಟಿಯಿಂದ ಚಟುವಟಿಕೆ ಆಧಾರಿತ ಬೋಧನೆ ಆರಂಭವಾಗುತ್ತಿದೆ.
-ವೈ. ಶಿವರಾಮಯ್ಯ, ಡಿಡಿಪಿಐ ದ.ಕ. * ಧನ್ಯಾ ಬಾಳೆಕಜೆ