ಪರಭಾಷೆಯಿಂದ ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಮಂದಿ ನಾಯಕಿಯರು ಬರುತ್ತಲೇ ಇರುತ್ತಾರೆ. ಹಾಗೆ ಬಂದು ಹೋಗುವ ನಟಿಯರಲ್ಲಿ ಗಮನ ಸೆಳೆಯುವವರು, ಚಿತ್ರರಂಗದಲ್ಲಿ ನೆಲೆ ನಿಲ್ಲುವ ಲಕ್ಷಣ ತೋರುವವರು ಕೆಲವೇ ಮಂದಿ. ಆದರೆ, ವೈಭವಿ ಶಾಂಡಿಲ್ಯ ಮಾತ್ರ ಕನ್ನಡ ಚಿತ್ರರಂಗದಲ್ಲಿ ನೆಲೆಯೂರುವ ಲಕ್ಷಣವಿದೆ. ಮೊದಲ ಸಿನಿಮಾ ಬಿಡುಗಡೆಯಾಗುವ ಮುಂಚೆಯೇ ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಗಳಿಂದ ವೈಭವಿಗೆ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಎಲ್ಲಾ ಓಕೆ, ಯಾರು ಈ ವೈಭವಿ ಶಾಂಡಿಲ್ಯ ಎಂದು ನೀವು ಕೇಳಬಹುದು. ಸದ್ಯಕ್ಕೆ ನಿಮಗೆ “ರಾಜ್ ವಿಷ್ಣು’ ಸಿನಿಮಾದ ಬಗ್ಗೆ ಹೇಳಬೇಕು. ಶರಣ್ ಹಾಗೂ ಚಿಕ್ಕಣ್ಣ ಕಾಂಬಿನೇಶನ್‌ನಲ್ಲಿ ಬರುತ್ತಿರುವ “ರಾಜ್ ವಿಷ್ಣು’ ಸಿನಿಮಾದ ನಾಯಕಿಯೇ ಈ ವೈಭವಿ ಶಾಂಡಿಲ್ಯ. ಅಂದಹಾಗೆ, ವೈಭವಿಗೆ “ರಾಜ್ ವಿಷ್ಣು’ ಕನ್ನಡದಲ್ಲಿ ಮೊದಲ ಸಿನಿಮಾ. ಹಾಗಂತ ಕ್ಯಾಮರಾ ಎದುರಿಸಿದ ಅನುಭವವಿಲ್ಲ ಎಂದಲ್ಲ. ಈಗಾಗಲೇ ಮರಾಠಿಯಲ್ಲಿ ಒಂದೆರಡು ಸಿನಿಮಾ ಮಾಡಿದ್ದಾರೆ ವೈಭವಿ.
ಮುಂಬೈ ಟು ಬೆಂಗಳೂರು
ವೈಭವಿ ಶಾಂಡಿಲ್ಯ ಮರಾಠಿ ಹುಡುಗಿ. ಹಾಗಾಗಿಯೇ ಮರಾಠಿ ಚಿತ್ರರಂಗದ ನಂಟಿದೆ. ತಾನು ನಟಿಯಾಗುತ್ತೇನೆ, ಬಣ್ಣದ ಲೋಕದಲ್ಲಿ ಮಿಂಚುತ್ತೇನೆಂದು ಅನೇಕ ನಟಿಯರು ಕನಸಿನಲ್ಲೂ ಭಾವಿಸಿರೋದಿಲ್ಲ. ಆದರೆ, ಕೆಲವು ಸಮಯ-ಸಂದರ್ಭಗಳು ಅವರನ್ನು ಬಣ್ಣದ ಲೋಕದತ್ತ ಸೆಳೆದುಬಿಡುತ್ತದೆ. ವೈಭವಿ ಶಾಂಡಿಲ್ಯ ಕೂಡಾ ಇದರಿಂದ ಹೊರತಾಗಿಲ್ಲ. ವೈಭವಿ ಓದಿದ್ದು ಕಾನೂನು. ಕೋರ್ಟ್‌ನಲ್ಲಿ ಕರಿಕೋಟು ಹಾಕಿಕೊಂಡು ವಾದ ಮಾಡಬೇಕಾದ ಶಾಂಡಿಲ್ಯ ಈಗ ಟೈಟ್‌ಫಿಟ್ ಜೀನ್ಸ್‌ನಲ್ಲಿ ಸೊಂಟ ಬಳುಕಿಸಲು ಕಾರಣವಾಗಿದ್ದು, ಕಾಲೇಜು ಸ್ಕಿಟ್ ಎಂದರೆ ನೀವು ನಂಬಲೇಬೇಕು.
ಕಾಲೇಜಿನಲ್ಲಿ ನಡೆಯುತ್ತಿದ್ದ ಸ್ಕಿಟ್, ಸಣ್ಣಪುಟ್ಟ ನಾಟಕಗಳಲ್ಲಿ ವೈಭವಿ ಭಾಗವಹಿಸುತ್ತಿದ್ದರು. ವೈಭವಿಯ ಪರ್‌ಫಾರ್ಮೆನ್ಸ್ ನೋಡಿದ ಅನೇಕರು “ನೀನು ಯಾಕೆ ನಟಿಯಾಗಬಾರದು, ಧಾರಾವಾಹಿ, ಸಿನಿಮಾಕ್ಕೆ ಪ್ರಯತ್ನಿಸು’ ಎಂದರಂತೆ. ಅದಕ್ಕೆ ಸರಿಯಾಗಿ ಆರಂಭದಲ್ಲಿ ಧಾರಾವಾಹಿಯೊಂದರಿಂದ ವೈಭವಿಗೆ ಆಫರ್ ಬಂತಂತೆ. ಸರಿ, ಒಂದು ಕೈ ನೋಡೇ ಬಿಡೋಣ ಎಂದು ವೈಭವಿ, ಆಡಿಷನ್‌ನಲ್ಲಿ ಪಾಲ್ಗೊಂಡರಂತೆ. ಆದರೆ, ಮೊದಲ ಆಡಿಷನ್‌ನಲ್ಲೇ ಅವರಿಗೆ ನಿರಾಸೆ ಕಾದಿತ್ತು. ಆಡಿಷನ್‌ನಲ್ಲಿ ಆಯ್ಕೆಯಾಗದ ವೈಭವಿ ತುಂಬಾ ನೊಂದುಕೊಂಡರಂತೆ. ಆಗಲೇ ಅವರೊಂದು ನಿರ್ಧಾರ ತಗೊಂಡಿದ್ದು. ಅದು ರಂಗಭೂಮಿ. ರಂಗಭೂಮಿ ಸೇರಿ ಮೊದಲು ನಟನೆ ಕಲಿಯಬೇಕು, ಏಕಾಏಕಿ ಕ್ಯಾಮರಾ ಮುಂದೆ ಬಂದರೆ ಅದರಿಂದ ಉಪಯೋಗವಿಲ್ಲ ಎಂದು ರಂಗಭೂಮಿ ಸೇರಿದರಂತೆ ವೈಭವಿ. ಹಾಗೆ ಸೇರಿದ ವೈಭವಿ, ರಂಗಭೂಮಿಯಲ್ಲಿ ಸಾಕಷ್ಟು ನಾಟಕಗಳನ್ನು ಮಾಡಿದ್ದಾರೆ. ಹೀಗೆ ನಾಟಕ ಮಾಡುತ್ತಾ ನಟನೆಯ ಪಟ್ಟುಗಳನ್ನು ಕಲಿತುಕೊಂಡಿದ್ದಾರೆ. “ನನಗೆ ರಂಗಭೂಮಿ ಸಾಕಷ್ಟು ಕಲಿಸಿತು. ಕಲಾವಿದರನ್ನು ತಯಾರು ಮಾಡೋದು ರಂಗಭೂಮಿ ಎಂಬುದು ನನಗೆ ಅಲ್ಲಿ ಗೊತ್ತಾಯಿತು’ ಎನ್ನುವುದು ವೈಭವಿ ಮಾತು.
ರಂಗಭೂಮಿಯಲ್ಲಿ ಇರುವಾಗಲೇ ವೈಭವಿಗೆ ಧಾರಾವಾಹಿಗಳಿಂದ ಸಾಕಷ್ಟು ಅವಕಾಶಗಳು ಬಂತಂತೆ. ಆದರೆ ಕಿರುತೆರೆಗೆ ಹೋದರೆ ಮತ್ತೆ ಪರ್ಸನಲ್ ಲೈಫ್ಗೆ ಸಮಯವೇ ಸಿಗೋದಿಲ್ಲ ಎಂದು ಧಾರಾವಾಹಿ ನಿರಾಕರಿಸಿ ಸಿನಿಮಾದತ್ತ ಎದುರು ನೋಡುತ್ತಿದ್ದ ವೈಭವಿಗೆ ಮೊದಲು ಸಿಕ್ಕಿದ್ದು “ಜಾನಿವ’ ಎಂಬ ಮರಾಠಿ ಸಿನಿಮಾ. ಆಡಿಷನ್‌ನಲ್ಲಿ ಆಯ್ಕೆಯಾದ ವೈಭವಿಗೆ ಆ ಸಿನಿಮಾದಲ್ಲಿ ಒಳ್ಳೆಯ ಪಾತ್ರ ಸಿಕ್ಕಿತಂತೆ. ಈ ಮೂಲಕ ಮರಾಠಿ ಚಿತ್ರರಂಗಕ್ಕೆ ಅಧಿಕೃತ ಎಂಟ್ರಿಕೊಟ್ಟ ವೈಭವಿ, ಆ ನಂತರ “ಲಾರ್ಡ್ ಆಫ್ ಸಿಂಗಾಪೂರ್’ “ಏಕ್ ಆಲ್‌ಬೆಲಾ’ ಎಂಬ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಂದಹಾಗೆ, ವೈಭವಿಯ ಕುಟುಂಬದ ಯಾರೊಬ್ಬರಿಗೂ ಸಿನಿಮಾ ಹಿನ್ನೆಲೆ ಇಲ್ಲ. ವೈಭವಿ ಅಣ್ಣ ಕೂಡಾ ಸಿನಿಮಾದಿಂದ ದೂರ. ಅಪ್ಪ ಬಿಝಿನೆಸ್. ಅಮ್ಮ ಗೃಹಿಣಿ. ವೈಭವಿಗೆ ಚಿತ್ರರಂಗದಲ್ಲಿ ಅವಕಾಶ ಸಿಕ್ಕ ಬಗ್ಗೆ ಖುಷಿ ಇದೆ.
ಕನ್ನಡದಿಂದ ದೊಡ್ಡ ಆಫರ್
ಮರಾಠಿಯಲ್ಲಿ ನಟಿಸುತ್ತಿದ್ದ ವೈಭವಿಗೆ ದೊಡ್ಡ ಸಿನಿಮಾ ಆಫರ್ ಸಿಕ್ಕಿದ್ದು ಕನ್ನಡದಿಂದ. ನಟಿಯಾಗಿ ಎಕ್ಸ್‌ಪೋಸ್ ಆಗಿದ್ದು ಕೂಡಾ ಕನ್ನಡದಿಂದ. ಈ ಮಾತನ್ನು ಸ್ವತಃ ವೈಭವಿ ಕೂಡಾ ಒಪ್ಪಿಕೊಳ್ಳುತ್ತಾರೆ. ರಾಮು ಬ್ಯಾನರ್‌ನ “ರಾಜ್ ವಿಷ್ಣು’ ಚಿತ್ರ ಅವರಿಗೆ ಸಿಕ್ಕ ದೊಡ್ಡ ಅವಕಾಶ. ಈ ಅವಕಾಶ ಬಂದಾಗ ವೈಭವಿ ತುಂಬಾ ಎಕ್ಸೆ„ಟ್ ಆದರಂತೆ. ಅದಕ್ಕೆ ಕಾರಣ ಮಾಲಾಶ್ರೀ. “ಮಾಲಾಶ್ರೀ ಮೇಡಂ ಅವರ ಬ್ಯಾನರ್‌ನಲ್ಲಿ ಅವಕಾಶ ಸಿಕ್ಕಾಗ ತುಂಬಾ ಖುಷಿಯಾದೆ. ಅದರಂತೆ ಸಿನಿಮಾ ಕೂಡಾ ಅದ್ಧೂರಿಯಾಗಿ ಮೂಡಿಬಂದಿದೆ. ನಾನು ಕನ್ನಡಕ್ಕೆ ಹೊಸಬಳಾದರೂ ಯಾರೊಬ್ಬರು ನನ್ನನ್ನು ಹೊಸಬಳಂತೆ ನೋಡದೇ, ತುಂಬಾ ಆತ್ಮೀಯವಾಗಿ ನೋಡಿಕೊಂಡರು. ಶರಣ್ -ಚಿಕ್ಕಣ್ಣ ಇಡೀ ಸೆಟ್ ಅನ್ನು ಲವಲವಿಕೆಯಿಂದ ಇಡುತ್ತಿದ್ದರು. ಕನ್ನಡದಲ್ಲಿ ನನ್ನ ಮೊದಲ ಸಿನಿಮಾವೇ ದೊಡ್ಡ ಬ್ಯಾನರ್‌ನಲ್ಲಿ ಬರುತ್ತಿರುವ ಖುಷಿ ಇದೆ’ ಎನ್ನುತ್ತಾರೆ ವೈಭವಿ. ಕನ್ನಡದಲ್ಲಿ ನಟಿಸುತ್ತಿರುವಾಗಲೇ ವೈಭವಿಗೆ ತಮಿಳಿನಿಂದ ಅವಕಾಶ ಬರುತ್ತದೆ. ಆ ಅವಕಾಶಕ್ಕೆ ಕನ್ನಡ ಚಿತ್ರವೇ ಕಾರಣ ಎಂದರೆ ತಪ್ಪಲ್ಲ.
“ರಾಜ್ ವಿಷ್ಣು’ ಚಿತ್ರದಲ್ಲಿ ವೈಭವಿ ನಟಿಸುತ್ತಿರುವ ಬಗ್ಗೆ ಸುದ್ದಿ-ಫೋಟೋ ನೋಡಿದ ತಮಿಳಿನ ತಂಡವೊಂದು ವೈಭವಿಯನ್ನು ಸಂಪರ್ಕಿಸಿತಂತೆ. ಹಾಗೆ ಸಿಕ್ಕ ಅವಕಾಶವೇ ಸಂತಾನಂ ಸಿನಿಮಾದಲ್ಲಿ ನಾಯಕಿ ಪಟ್ಟ. ಸಂತಾನಂ ನಾಯಕರಾಗಿರುವ “ಸಕ್ಕ ಪೋಡು ಪೋಡು ರಾಜಾ’ ಚಿತ್ರದಲ್ಲಿ ವೈಭವಿ ನಟಿಸಿದ್ದಾರೆ. ಇದಲ್ಲದೇ, ವೈಭವಿ “ಸರ್ವರ್ ಸುಂದರಂ’ ಚಿತ್ರಕ್ಕೂ ನಾಯಕಿ. ಇದು ತಮಿಳಿನ ವಿಷಯವಾದರೆ ಕನ್ನಡದಿಂದಲೂ ವೈಭವಿಗೆ ಒಂದಷ್ಟು ಅವಕಾಶ ಬರುತ್ತಿವೆ. ಆದರೆ, ವೈಭವಿ ಮಾತ್ರ “ರಾಜ್ ವಿಷ್ಣು’ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. “ನನಗೆ ಕನ್ನಡದಲ್ಲೂ ಒಳ್ಳೊಳ್ಳೆ ಚಿತ್ರ ಮಾಡಬೇಕೆಂಬ ಆಸೆ ಇದೆ. ಈಗಾಗಲೇ ಒಂದಷ್ಟು ಅವಕಾಶಗಳು ಬರುತ್ತಿವೆ. ಸದ್ಯದಲ್ಲೇ ಒಂದು ಸಿನಿಮಾ ಒಪ್ಪಿಕೊಳ್ಳುತ್ತೇನೆ’ ಎನ್ನುವುದು ವೈಭವಿ ಮಾತು.
ಬರಹ: ರವಿಪ್ರಕಾಶ್ ರೈ; ಚಿತ್ರಗಳು: ಮನು ಮತ್ತು ಸಂಗ್ರಹ