ಸಾಮಾಜಿಕ ಜಾಲತಾಣದಲ್ಲಿ ಈಗ ರಾನು ಮೊಂಡಲ್ ಯಶೋಗಾಥೆಯದ್ದೇ ಚರ್ಚೆ. ಕೆಲವೇ ದಿನಗಳ ಹಿಂದೆ ರೈಲು ನಿಲ್ದಾಣದಲ್ಲಿ ಹಾಡು ಹೇಳುತ್ತಾ, ಭಿಕ್ಷೆ ಬೇಡುತ್ತಿದ್ದ ರಾನು, ಇದೀಗ ಬಾಲಿವುಡ್ ಸಿನಿಮಾವೊಂದರ ಗಾಯಕಿ!
ಅದೊಂದು ಗಡಿಬಿಡಿಯ ದಿನ. ಪಶ್ಚಿಮ ಬಂಗಾಳದ ರಾಣಾಘಾಟ್ ರೈಲ್ವೆ ನಿಲ್ದಾಣದಲ್ಲಿ ಜನ ಗಡಿಬಿಡಿಯಿಂದ ಓಡಾಡುತ್ತಿದ್ದರು. ಆ ಗುಂಪಿನಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಅತೀಂದ್ರ ಚಕ್ರವರ್ತಿ ಎಂಬವರೂ ಇದ್ದರು. ಆಗ ಎಲ್ಲಿಂದಲೋ, ಏಕ್ ಪ್ಯಾರ್ ಕಾ ನಗಮಾ ಹೇ… ಎಂಬ ಹಾಡು ತೂರಿ ಬಂತು. ಅದನ್ನು ಕೇಳಿಸಿಕೊಂಡವರೆಷ್ಟೋ, ನಿರ್ಲಕ್ಷಿಸಿ ಮುಂದೆ ನಡೆದವರೆಷ್ಟೋ. ಆದರೆ, ಅತೀಂದ್ರ ಅವರಿಗೆ ಆ ಸುಮಧುರ ಕಂಠವನ್ನು ನಿರ್ಲಕ್ಷಿಸಲು ಸಾಧ್ಯವಾಗಲಿಲ್ಲ. ಯಾರಪ್ಪಾ ಇದು, ಲತಾ ಮಂಗೇಶ್ಕರ್ ಥರಾನೇ ಹಾಡ್ತಾ ಇದ್ದಾರಲ್ಲ ಅಂದುಕೊಳ್ಳುತ್ತ ಅಂತ ತಿರುಗಿ ನೋಡಿದಾಗ, ಕಂಡದ್ದು ಐವತ್ತರ ವಯಸ್ಸಿನ ಭಿಕ್ಷುಕಿ! ಹಾಡು ಹೇಳಿ, ಭಿಕ್ಷೆ ಬೇಡುವುದು ಸಾಮಾನ್ಯವಾದರೂ, ಆ ಹೆಂಗಸಿನ ದನಿಯಲ್ಲಿ ಜಾದೂ ಇದೆ ಅಂತ ಅವರಿಗನ್ನಿಸಿತು.
ರಾನು ಮೊಂಡಲ್ ಎಂಬ ಆ ಭಿಕ್ಷುಕಿಯ ಭವಿಷ್ಯ ಬದಲಾದ ದಿನವದು. ಆಕೆ ಹಾಡುತ್ತಿರುವುದನ್ನು ವಿಡಿಯೊ ಮಾಡಿದ ಅತೀಂದ್ರ ಅದನ್ನು ಫೇಸ್‌ಬುಕ್, ಟ್ವಿಟರ್‌ನಲ್ಲಿ ಹಂಚಿಕೊಂಡರು. “ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿರೋ ಈಕೆಯ ಗಾಯನ ಪ್ರತಿಭೆಗೆ ಸೂಕ್ತ ಅವಕಾಶ ಸಿಗಲಿ’ ಅಂತ ಬರೆದು, ಹಾರೈಸಿದರು.
ಸುದ್ದಿಯೊಂದು ಫೇಸ್‌ಬುಕ್‌ನ ಸಾಗರಕ್ಕೆ ಬಿತ್ತೆಂದರೆ ಗೊತ್ತಲ್ಲ, ಎಷ್ಟು ವೇಗವಾಗಿ ಜನರನ್ನು ತಲುಪತ್ತೆಂದು! ರಾತ್ರಿ ಕಳೆಯುವುದರೊಳಗೆ ಆಕೆಯ ಹಾಡು ಕೋಟ್ಯಂತರ ಜನರನ್ನು ತಲುಪಿತು. ಸಾಮಾನ್ಯರಷ್ಟೇ ಅಲ್ಲ, ಸೆಲೆಬ್ರಿಟಿಗಳೂ, ಹೆಸರಾಂತ ಗಾಯಕರೂ ರಾನು ಹಾಡಿಗೆ ತಲೆದೂಗಿದರು. ಅಷ್ಟೇ ವೇಗವಾಗಿ, ಅವಕಾಶಗಳೂ ಅವರನ್ನು ಹುಡುಕಿಬಂದವು. ಟಿವಿ ವಾಹಿನಿಗಳು, ಸಂಗೀತ ನಿರ್ದೇಶಕರು, ರಿಯಾಲಿಟಿ ಶೋಗಳು ರಾನು ಅವರಿಂದ ಹಾಡು ಹಾಡಿಸಲು ತುದಿಗಾಲಲ್ಲಿ ನಿಂತವು. ಆದರೆ, ರೈಲು ಅಥವಾ ವಿಮಾನದಲ್ಲಿ ಮುಂಬೈ ತಲುಪುವಷ್ಟು ಹಣವಾಗಲಿ, ಅಧಿಕೃತ ಗುರುತಿನ ಚೀಟಿಯಾಗಲಿ ಆಕೆಯ ಬಳಿ ಇರಲಿಲ್ಲ. ಯಾವಾಗಲೋ ಮಾಡಿಸಿದ್ದ ಚುನಾವಣಾ ಗುರುತು ಚೀಟಿಯಷ್ಟೇ ಅವಳ ಅಸ್ತಿತ್ವಕ್ಕಿದ್ದ ದಾಖಲೆ! ಕೋಲ್ಕತ್ತಾದ ಸಂಸ್ಥೆಯೊಂದು, ದುರ್ಗಾಪೂಜೆಯ ಹಾಡನ್ನು ಹಾಡಿಸಲು ಕರೆದಾಗಲೇ ಗೊತ್ತಾಗಿದ್ದು, ರಾನು ಅನಕ್ಷರಸ್ಥೆ, ಅವಳಿಗೆ ಹಾಳೆಯಲ್ಲಿ ಬರೆದುಕೊಟ್ಟ ಹಾಡನ್ನು ಓದಲೂ ಬರುವುದಿಲ್ಲ ಅಂತ. ಆದರೂ, ಅದೆಷ್ಟೋ ಹಾಡುಗಳನ್ನು ಕೇಳಿ, ನೆನಪಿಟ್ಟುಕೊಂಡು ಹಾಡಬಲ್ಲಳು!
ಇಂತಿಪ್ಪ ರಾನು ಮೊಂಡಲ್, ಈಗ ಮುಂಬೈ ಮಹಾನಗರ ಸೇರಿದ್ದಾಳೆ. ಖ್ಯಾತ ಗಾಯಕ ಹಿಮೇಶ್ ರೇಷಮಿಯಾ ಸಂಗೀತ ನಿರ್ದೇಶನದ “ಹ್ಯಾಪಿ ಹಾರ್ಡಿ ಅಂಡ್ ಹೀರ್ ‘ ಎಂಬ ಸಿನಿಮಾದಲ್ಲಿ “ತೇರಿ ಮೇರಿ ಕಹಾನಿ…’ ಎಂಬ ಹಾಡೊಂದನ್ನು ಹಾಡಿದ್ದಾರೆ. ಹಾಡಿನ ರೆಕಾರ್ಡಿಂಗ್‌ನ ವಿಡಿಯೊವನ್ನು ಹಿಮೇಶ್ ಶೇರ್ ಮಾಡಿದ ನಂತರ, ಆಕೆಯ ಜನಪ್ರಿಯತೆ ಮತ್ತಷ್ಟು ಹೆಚ್ಚಿದೆ. ಸೋನಿ ಎಂಟರ್‌ಟೇನ್‌ಮೆಂಟ್‌ನ ಸಿಂಗಿಂಗ್ ರಿಯಾಲಿಟಿ ಶೋ ಸೇರಿದಂತೆ, ಅನೇಕ ಅದ್ಧೂರಿ ವೇದಿಕೆಗಳು ರಾನು ಹಾಡು ಕೇಳಲು ಸಜ್ಜಾಗಿವೆ. ತಡವಾಗಿಯಾದರೂ ರಾನುಗೆ ಒಲಿದ ಅದೃಷ್ಟ, ಅವರಿಗೆ ಕೈ ತುಂಬಾ ಅವಕಾಶಗಳನ್ನು ನೀಡಲಿ.. ನೀವಿನ್ನೂ ಆಕೆಯ ಹಾಡು ಕೇಳಿಲ್ಲ ಅಂತಾದರೆ, ಯುಟ್ಯೂಬ್‌ನಲ್ಲಿ ರಾನು ಮಂಡಲ್ ಅಂತ ಹುಡುಕಿ ಅಥವಾ https://youtu.be/tZgX94_ahtc ಕ್ಲಿಕ್ ಮಾಡಿ.