ಪ್ರಾಥಮಿಕ ಶಾಲೆಯಲ್ಲಿದ್ದಾಗ ಸಣ್ಣಪುಟ್ಟ ವೇಷ ಮಾಡುತ್ತಿದ್ದ ಬಾಲ-ಗೋಪಾಲನಿಗೆ ವಿಟ್ಲ ರಾಮಯ ಶೆಟ್ಟರು ಆರಂಭದ ಹೆಜ್ಜೆ ಗಾರಿಕೆಗಳನ್ನು ಹೇಳಿಕೊಟ್ಟವರು. ತಮ್ಮ ತಂದೆ ಸುಬ್ರಾಯ ಭಟ್ಟರ ಭಾಗವತಿಕೆಗೆ, ಅಜ್ಜ ನಾರಾಯಣ ಭಟ್ಟರ ಮದ್ದಲೆವಾದನಕ್ಕೆ ವೇಷ ಮಾಡಿದ ಅನುಭವವೂ ಬಾಲ-ಗೋಪಾಲನಿಗಿತ್ತು. ಹವ್ಯಾಸಿಯಾಗಿ ಅನುಭವ ಸಾಲದು, ಇನ್ನಷ್ಟು ಪರಿಣತನಾಗಬೇಕೆಂದು ತವಕಿಸುತ್ತಿರು ವಾಗಲೇ ಏಳನೆಯ ತರಗತಿಯಲ್ಲಿ ಅನುತ್ತೀರ್ಣನಾದದ್ದು ಅನುಕೂಲವೇ ಆಯಿತು. ದಿನಪತ್ರಿಕೆಯಲ್ಲಿ “ಧರ್ಮಸ್ಥಳ ಯಕ್ಷಗಾನ ಕೇಂದ್ರ’ದ ಜಾಹೀರಾತು ಇರುವುದನ್ನು ಹಿರಿಯ ಸೋದರ ಗಮನಿಸಿ, ತಮ್ಮನನ್ನು ಅಲ್ಲಿಗೆ ಸೇರಿಸುವಂತೆ ತಂದೆಗೆ ಸಲಹೆ ಮಾಡಿದರು.
Advertisement
ಧರ್ಮಸ್ಥಳದ ಯಕ್ಷಗಾನ ಕೇಂದ್ರದಲ್ಲಿ ಪಡ್ರೆ ಚಂದುರವರು ನಾಟ್ಯಗುರುಗಳು. ಮೊದಲ ಬ್ಯಾಚಿಗೆ ಮಾತ್ರ ತರಬೇತಿಯ ಅವಧಿ ಎರಡು ವರ್ಷಗಳಾಗಿದ್ದವು. ಗೋಪಾಲ ಭಟ್ಟರು ಮೂರನೆಯ ಬ್ಯಾಚಿನ ವಿದ್ಯಾರ್ಥಿಯಾಗಿ ಸೇರಿಕೊಂಡರು. ಆಗ ಅವರ ಸಹಾಧ್ಯಾಯಿಗಳಾಗಿದ್ದವರು- ಸರಪಾಡಿ ಶಂಕರನಾರಾಯಣ ಕಾರಂತ, ಗೇರುಕಟ್ಟೆ ಗಂಗಯ ಶೆಟ್ಟಿ, ಡಿ. ಮನೋಹರ ಕುಮಾರ್, ಬೆಳಾಲು ಲಕ್ಷ್ಮಣ ಗೌಡ, ನಿಡ್ಲೆ ಉಮೇಶ ಹೆಬ್ಟಾರ ಮೊದಲಾದವರು. ಒಂದು ವರ್ಷದ ಯಕ್ಷಶಿಕ್ಷಣದ ಬಳಿಕ ಕೇಂದ್ರದಿಂದ ಮರಳಿದ ಗೋಪಾಲ ಭಟ್ಟರು ಸ್ವರ್ನಾಡು ಮೇಳ ಸೇರುವುದರೊಂದಿಗೆ 1975ರಲ್ಲಿ ಅವರ ವೃತ್ತಿಬದುಕು ಆರಂಭವಾಯಿತು. ಸ್ವರ್ನಾಡು ಮೇಳದಲ್ಲಿ ಮೊದಲ ದಿನವದು. ಮುಖವರ್ಣಿಕೆ ಬರೆಯಲು ಹುಡುಗನಿಗೆ ತಿಳಿಯದು. “ಮಾಣಿ, ನಾನು ಮೇಕಪ್ ಮಾಡುತ್ತೇನೆ’ ಎಂದು ಅಲ್ಲಿದ್ದ ಕಲಾವಿದರೊಬ್ಬರು ಕರೆದರು. ದೇವೇಂದ್ರನ ಪಾತ್ರಕ್ಕೆ ಬಣ್ಣ ಮಾಡಿಕೊಳ್ಳುತ್ತಿದ್ದ ಅವರು ತಮ್ಮ ಕೈಯಲ್ಲಿದ್ದ ಬಣ್ಣವನ್ನು ಹುಡುಗನ ಮುಖಕ್ಕೆ ಒರೆಸಿ, “ದೇವತೆಬಲ’ಕ್ಕೆ ಸಿದ್ಧಗೊಳಿಸಿದರು. ಆ ಕಲಾವಿದ ಯಾರೆಂದು ಕೇಳುತ್ತೀರಾ – ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟರು!
Related Articles
Advertisement
ದಿಲೀಪ ಸುವರ್ಣ ಎಂಬವರು ಸುರತ್ಕಲ್ ಆಸುಪಾಸಿನ ದೇವಸ್ಥಾನಗಳ ಆಶ್ರಯದಲ್ಲಿ ಹವ್ಯಾಸಿ ಕಲಾವಿದರ ತಂಡ ಕಟ್ಟಿಕೊಂಡು ಅಲ್ಲಲ್ಲಿ ಆಟ ಮಾಡು ತ್ತಿದ್ದರು. ಈಗ ಪ್ರಸಿದ್ಧರಾಗಿರುವ ಶಶಿಕಾಂತ ಶೆಟ್ಟಿ ಕಾರ್ಕಳ, ದೀಪಕ್ ರಾವ್ ಪೇಜಾವರ, ಲಕ್ಷ್ಮಣ ಕುಮಾರ್ ಮರಕಡ ಮೊದಲಾದವರ ಆರಂಭಿಕ ಅಭ್ಯಾಸಕ್ಕೆ ಗರಡೀಮನೆಯಂತಿದ್ದ ಮೇಳವದು. ಸುವ್ಯವಸ್ಥಿತವೆಂದು ಹೇಳಿಕೊಳ್ಳದೆ, ಸಹೃದಯತೆಯ ಬಲದಿಂದಲೇ ತಂಡವನ್ನು ನಿರ್ವಹಿಸುತ್ತಿದ್ದ ದಿಲೀಪ ಸುವರ್ಣರು, “ನಾಡಿದ್ದು ಆಟಕ್ಕೆ ಬನ್ನಿ’ ಎಂದು ಕರೆದರೆ ಗೋಪಾಲ ಭಟ್ಟರು ಬೇರೆಲ್ಲ ಆಟಗಳನ್ನು ಬಿಟ್ಟು ಬಂದಾರು! “”ಈ ಮನುಷ್ಯನಿಗೆ ಯಕ್ಷಗಾನದ ಮೇಲೆ ಇರುವ ಉತ್ಕಟ ಅಭಿಮಾನ ನೋಡಿದರೆ, ಆಗುವುದಿಲ್ಲ ಎನ್ನುವುದಕ್ಕೆ ಮನಸು ಬರುವುದಿಲ್ಲ” ಎನ್ನುತ್ತ ಗೋಪಾಲ ಭಟ್ಟರು ಸಮಯಕ್ಕೆ ಸರಿಯಾಗಿ ದಿಲೀಪರ ಚೌಕಿಯಲ್ಲಿ ಹಾಜರ್! ಒಮ್ಮೆ ಭಸ್ಮಾಸುರ ಮೋಹಿನಿಯಲ್ಲಿ ಪಾರ್ವತಿಯ ಪಾತ್ರ ಮಾಡಲು ಯಾರೂ ಇಲ್ಲವಾಗಿ, “ಈಶ್ವರನೊಬ್ಬನೇ ರಂಗಸ್ಥಳಕ್ಕೆ ಹೋಗಲಿ. ಸ್ವಲ್ಪ ಎಡೆjಸ್ಟ್ ಮಾಡಿಕೊಳ್ಳಲಿ’ ಎಂದು ಮಾತುಕತೆಯಾಯಿತು. ವಾವರ ಮೋಕ್ಷದಲ್ಲಿ ಬೆಳಗಿನ ಜಾವದ ಅಯ್ಯಪ್ಪನ ಪಾತ್ರಕ್ಕೆಂದು ಬಂದು, ಚೌಕಿಯ ಅಂಡಿನ ರಾಶಿಯ ನಡುವೆ ಮಲಗಿದ್ದ ಗೋಪಾಲ ಭಟ್ಟರಿಗೆ ಇದು ಕೇಳಿಸಿ, ಇದ್ದಕ್ಕಿದ್ದಂತೆ ಎದ್ದು, “ತಲೆಬಿಸಿ ಬೇಡ, ಅದನ್ನು ನಾನು ಮಾಡುತ್ತೇನೆ’ ಎಂದು ಮುಖಕ್ಕೆ ಬಣ್ಣ ಹಚ್ಚಿ ಪಾರ್ವತಿಯಾಗಿ ರಂಗದ ಹಿಂದೆ ಸಿದ್ಧರಾಗಿ ಬಿಟ್ಟಿದ್ದರು!
ವೃತ್ತಿಪರ ರಂಗದಲ್ಲಿ ಸುಮಾರು ಎರಡೂವರೆ ದಶಕಗಳ ಅನುಭವವಿದ್ದರೂ ಹವ್ಯಾಸಿಗಳೊಂದಿಗೆ ವಿನಯದಿಂದ ವ್ಯವಹರಿಸುವ ಗೋಪಾಲ ಭಟ್ಟರು ಯಾವ ಸಂಘಟಕನಿಗೂ “ಭಾರ’ವೆನಿಸಿದವರಲ್ಲ. ಹಿಮ್ಮೇಳದವರೊಂದಿಗೆ, ಚೌಕಿಯ ಕೆಲಸದವ ರೊಂದಿಗೆ ಸದಾ ಸ್ನೇಹಶೀಲರಾಗಿರುವ ಗೋಪಾಲಣ್ಣ ಸಂಭಾವನೆಯ ಬಗ್ಗೆಯೂ ವಿಶೇಷ ಲೆಕ್ಕ ಇಟ್ಟವರಲ್ಲ. ಸಹಕಲಾವಿದರನ್ನು ಬೇಸರಪಡಿಸಿದ ದಾಖಲೆ ಇಲ್ಲ. ಇನ್ನೊಬ್ಬ ಕಲಾವಿದನ ಬಗ್ಗೆ ಕಮೆಂಟ್ ಮಾಡುವುದು ಅವರ ಜಾಯಮಾನಕ್ಕೆ ಸಲ್ಲದ್ದು. ಅನಿವಾರ್ಯವಾದರೆ, “ಅವನ ರಂಗನಡೆ ರಜ ಸರಿಯಿಲ್ಲೆ’ ಎಂದು ಮೆತ್ತಗೆ ಹೇಳಿಯಾರು. ಚೌಕಿಯಲ್ಲಿ ಅಷ್ಟೊಂದು ಸಜ್ಜನರಾಗಿರುವ ಈ ಕಲಾವಿದ ರಂಗಸ್ಥಳವೇರುತ್ತ ಹೇಗೆ ದೈತ್ಯನಾಗಿಬಿಡುತ್ತಾರೆ ಎಂಬುದು ಚೋದ್ಯ.
“”ಮೊದಮೊದಲು ಗೋಪಾಲ ಭಟ್ರ ಚಂಡನ ಪಾತ್ರಕ್ಕೆ ಮುಂಡನಾಗಿ ಕಾಣಿಸಿಕೊಳ್ಳುವಾಗ ಅಕ್ಷರಶಃ ಕಂಪಿಸುತ್ತಿದ್ದೆ. ಈಗಲೂ ಅಷ್ಟೆ , ಮೊದಲ ಆರ್ಭಟ ದಲ್ಲಿಯೇ ರಂಗಸ್ಥಳವನ್ನು ಆವರಿಸಿಬಿಡುತ್ತಾರೆ. ಅವರ ಜತೆಗೆ ವೇಷವನ್ನು “ಮೇಲೆ ಹಾಕುವುದು’ ಇವತ್ತಿಗೂ ನನಗೊಂದು ಸವಾಲು” ಎಂದು ಮುಕ್ತಮನಸ್ಸಿನಲ್ಲಿ ಹೇಳುತ್ತಾರೆ ಗೋಪಾಲ ಭಟ್ಟರಿಗಿಂತ ಕಿರಿಯ ಪುಂಡು ವೇಷಧಾರಿಯಾಗಿರುವ ಅಮ್ಮುಂಜೆ ಮೋಹನ.
ಗೋಪಾಲ ಭಟ್ಟರದ್ದು ಅಪ್ಪಟ ಯಕ್ಷಗಾನೀಯ ವಾದ ವೇಷ. ಮಿತಿಯಿಲ್ಲದ ಕುಣಿತವಿಲ್ಲ; ಅಭಿನಯ ದಲ್ಲಿ ಅತಿ ಇಲ್ಲ. ಹೇಳಿಕೇಳಿ, ಬಲಿಪ ಭಾಗವತರ ಭಾಗವತಿಕೆಗೆ ವೇಷ ಮಾಡಿದ ಕಲಾವಿದನಲ್ಲವೆ? ಬಾಕಿಮಾರು ಗದ್ದೆಯಲ್ಲಿ ಅಕ್ಕಿಹೊಟ್ಟು ಹರಡಿದ ಕಟೀಲಿನ ಮೂರು ಮೇಳಗಳ ರಂಗಸ್ಥಳಗಳಲ್ಲಿ ಮುಂಡ್ಕೂರು ಕುಟ್ಟಿ ಶೆಟ್ಟಿ, ಗುಂಡಿಮಜಲು ಗೋಪಾಲ ಭಟ್ಟ , ರುಸ್ತುಂ ನಾರಾಯಣ ಮಣಿಯಾಣಿಯಂಥವರು “ಹಾರಿಸಿದ ಹುಡಿ’ ಯಕ್ಷಗಾನಾಕಾಶವನ್ನು ಚುಕ್ಕೆಗಳಾಗಿ ಅಲಂಕರಿಸಿದೆ! 58ರ ಹರೆಯದ ಗೋಪಾಲ ಭಟ್ಟರು ಇವತ್ತು ರಂಗ ಪ್ರವೇಶ ಮಾಡಿದಾಗಲೂ “ಬಾಕಿಮಾರು ಗದ್ದೆಯ ರಂಗಸ್ಥಳದ ಹೊಂತಕಾರಿ’ಗಳು ಮೆರೆದಾಡಿದ ಆ ದಿನ ಗಳು ಕಣ್ಣೆದುರು ಮಿಂಚಿ ರೋಮಾಂಚವಾಗುತ್ತದೆ.
ನಾಳೆ (ಆ. 5) ಗುಂಡಿಮಜಲು ಗೋಪಾಲಕೃಷ್ಣ ಭಟ್ಟರಿಗೆ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಪೇಜಾವರ ಯತಿದ್ವಯರ ದಿವ್ಯೋಪಸ್ಥಿತಿ ಯಲ್ಲಿ, “ಸರ್ಪಂಗಳ ಸುಬ್ರಹ್ಮಣ್ಯ ಭಟ್ ಸ್ಮಾರಕ ಯಕ್ಷಗಾನ ಸಾಧಕ ಪ್ರಶಸ್ತಿ’ ಪ್ರದಾನ ಮಾಡಲಾಗುತ್ತಿದೆ.
ದಿವೋದಾಸ