Advertisement

ಕೋಮಲ್‌ ಎಂಬ ಒರಿಜಿನಲ್‌ ಪೊಲೀಸ್‌ ಕಾಮಿಡಿಯಿಂದ ಆ್ಯಕ್ಷನ್‌ಗೆ

03:44 PM Sep 19, 2017 | Team Udayavani |

ಹೀರೋ ಅಂದಮೇಲೆ ಸ್ಲಿಮ್‌ ಆಗಿರಬೇಕು, ಫಿಸಿಕ್‌ ಮೆಂಟೇನ್‌ ಮಾಡಬೇಕು ಎಂಬುದು ಸಿನಿಪ್ರಿಯರ ಮಾತು. ಆದರೆ, ಈ ವಿಚಾರದಲ್ಲಿ ಕೋಮಲ್‌ ಬಗ್ಗೆ ಕೆಲವರು ಬೇಜಾರಾಗಿದ್ದರು. ಕಾಮಿಡಿ ನಟನಿಂದ ಹೀರೋ ಆದ ಕೋಮಲ್‌ ತಮ್ಮ ಫಿಸಿಕ್‌ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ, ದಪ್ಪವಾಗುತ್ತಲೇ ಹೋಗುತ್ತಿದ್ದಾರೆ, ಸ್ಲಿಮ್‌ ಆಗೋ ಬಗ್ಗೆ ಯೋಚನೆ ಮಾಡುತ್ತಿಲ್ಲ ಎನ್ನುತ್ತಿದ್ದರು. ಈ ಮಾತು ಕೋಮಲ್‌ ಕಿವಿಗೂ ಬಿದ್ದಿದೆ. ಬಿದ್ದಿದ್ದಷ್ಟೇ ಅಲ್ಲ, ಸೀರಿಯಸ್‌ ತಗೊಂಡಿದ್ದಾರೆ ಕೂಡಾ. ಅದರ ಪರಿಣಾಮವಾಗಿ ಕೋಮಲ್‌ ಈಗ ಸ್ಲಿಮ್‌ ಆಗಿದ್ದಾರೆ. ಬರೋಬ್ಬರಿ 21 ಕೆಜಿ ತೂಕ ಇಳಿಸಿಕೊಂಡು ಸ್ಲಿಮ್‌ ಅಂಡ್‌ ಟ್ರಿಮ್‌ ಆಗಿ ಬಂದಿದ್ದಾರೆ. ಒಂದೂವರೆ ವರ್ಷ ಚಿತ್ರರಂಗದಿಂದ ದೂರವಿದ್ದ ಕೋಮಲ್‌ ಈಗ ಮತ್ತೆ ಬಂದಿದ್ದಾರೆ. ಈ ಬಾರಿ ಅವರ ಜಾನರ್‌ ಕೂಡಾ ಬದಲಾಗಿದೆ. ಕೇವಲ ಕಾಮಿಡಿ ಹೀರೋ ಆಗಿ ನಗಿಸುತ್ತಿದ್ದ ಕೋಮಲ್‌ ಈ ಬಾರಿ ಆ್ಯಕ್ಷನ್‌ನತ್ತ ಹೊರಳಿದ್ದಾರೆ. ಅದು “ಕೆಂಪೇಗೌಡ-2′ ಚಿತ್ರದ ಮೂಲಕ.

Advertisement

ಹೌದು, ಕೋಮಲ್‌ ಈಗ “ಕೆಂಪೇಗೌಡ-2′ ಚಿತ್ರದಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ. ಸುದೀಪ್‌ ನಾಯಕರಾಗಿರುವ “ಕೆಂಪೇಗೌಡ’ ಚಿತ್ರ ಬಂದಿದ್ದು, ಆ ಚಿತ್ರ ಹಿಟ್‌ ಆಗಿದ್ದು ನಿಮಗೆ ಗೊತ್ತೇ ಇದೆ. ಆ ನಂತರ “ಕೆಂಪೇಗೌಡ-2′ ಚಿತ್ರ ಬರುತ್ತದೆ ಮತ್ತು ಆ ಚಿತ್ರದಲ್ಲೂ ಸುದೀಪ್‌ ನಾಯಕರಾಗಿರುತ್ತಾರೆಂದು ಹೇಳಲಾಗಿತ್ತು. ಆದರೆ ಈಗ ಎಲ್ಲವೂ ಬದಲಾಗಿದೆ. ಸುದೀಪ್‌ ಜಾಗದಲ್ಲಿ ಕೋಮಲ್‌ ಇದ್ದಾರೆ. ಸ್ಲಿಮ್‌ ಅಂಡ್‌ ಟ್ರಿಮ್‌ ಆದ ಕೋಮಲ್‌ “ಕೆಂಪೇಗೌಡ-2′ ಆಗಿದ್ದಾರೆ. ಹಾಗಂತ ಕೋಮಲ್‌ ಅಬ್ಬರಿಸುವ ಪೊಲೀಸ್‌ ಅಲ್ಲ. ನಮ್ಮ ನಡುವೆ ಇದ್ದು, ತಮ್ಮ ಶಕ್ತಿ, ಸಾಮರ್ಥ್ಯದೊಳಗೆ ಕಾರ್ಯನಿರ್ವಹಿಸುವ ಪೊಲೀಸ್‌. ಅದಕ್ಕೆ ಕಾರಣ ಒರಿಜಿನಲ್‌ ಪೊಲೀಸ್‌ ಕಾನ್ಸೆಪ್ಟ್. ಹೌದು, ಇದು ಸ್ವಮೇಕ್‌ ಚಿತ್ರ. “ಸಿಂಗಂ-2′ ಚಿತ್ರವನ್ನು ರೀಮೇಕ್‌ ಮಾಡುತ್ತಾರೆಂದು ಹೇಳಲಾಗಿತ್ತು. ಆದರೆ, ನಿರ್ದೇಶಕ ರೋಶನ್‌ ಮೋಹನ್‌ ಸ್ವಮೇಕ್‌ ಮೂಲಕ “ಕೆಂಪೇಗೌಡ-2′ ಕಟ್ಟಿಕೊಡಲು ಹೊರಟಿದ್ದಾರೆ. ಈ ಸಿನಿಮಾದಲ್ಲಿ ನೈಜತೆಗೆ ಹೆಚ್ಚು ಒತ್ತುಕೊಡಲಿದ್ದಾರಂತೆ. ಅದು ಎಷ್ಟರ ಮಟ್ಟಿಗೆಂದರೆ ಕೋಮಲ್‌ ಮೇಕಪ್‌ ಇಲ್ಲದೇ ನಟಿಸುತ್ತಿದ್ದಾರೆ. ಚೇಸಿಂಗ್‌ ವೇಳೆ ಬರುವ ಬೆವರು ಕೂಡಾ ನ್ಯಾಚುರಲ್‌ ಆಗಿರಬೇಕೆಂದು ಕೋಮಲ್‌ ಅವರನ್ನು ಓಡಿಸುತ್ತಿದ್ದಾರೆ. ಇದು ಕೋಮಲ್‌ಗ‌ೂ ಖುಷಿಕೊಟ್ಟಿದೆ. 

ಸುಮಾರು ಒಂದೂವರೆ ವರ್ಷ ಗ್ಯಾಪ್‌ನಲ್ಲಿ ಕೋಮಲ್‌ ಏನು ಮಾಡಿದರು, “ಕೆಂಪೇಗೌಡ-2′ ಹೇಗಾಯಿತು ಎಂಬೆಲ್ಲಾ ಪ್ರಶ್ನೆಗಳಿಗೆ ಕೋಮಲ್‌ ಉತ್ತರಿಸಿದ್ದಾರೆ. “ನನ್ನ ಮನೆ ಕೆಲಸದಲ್ಲೂ ನಾನು ಬಿಝಿ ಇದ್ದೆ. ಈಗ ಕೆಲಸ ಪೂರ್ಣಗೊಂಡಿದೆ. ಜೊತೆಗೆ ಸಾಕಷ್ಟು ವಕೌìಟ್‌ ಮಾಡಿ ಫಿಟ್‌ ಆದೆ. ಸುಮಾರು 21 ಕೆಜಿ ತೂಕ ಇಳಿಸಿಕೊಂಡೆ. ಅದೊಂದು ದಿನ ಶಂಕರೇ ಗೌಡ್ರು, ಶಂಕರ್‌ ರೆಡ್ಡಿ ಸಿಕ್ಕಿದ್ರು. ನನ್ನನ್ನು ನೋಡಿ ಅವರಿಗೆ ಶಾಕ್‌ ಆಯಿತು. ಆ ವೇಳೆ ಸಿನಿಮಾ ಮಾಡುವ ಮಾತುಕತೆಯಾಗಿ ಸುಮಾರು ಆರೇಳು ತಿಂಗಳು ಕಥೆಯಲ್ಲಿ ಕುಳಿತುಕೊಂಡೆವು. ಕಥೆ ತುಂಬಾ ಚೆನ್ನಾಗಿ ಬಂತು. ಇದು ಸ್ವಮೇಕ್‌ ಸಿನಿಮಾ. ಪಕ್ಕಾ ಒರಿಜಿನಲ್‌ ಎಂಬ ಟ್ಯಾಗ್‌ಲೈನ್‌ ಬೇರೆ ಇದೆ’ ಎಂದು ಸಿನಿಮಾ ಆರಂಭವಾದ ಬಗ್ಗೆ ಹೇಳುತ್ತಾರೆ ಕೋಮಲ್‌. ಇನ್ನು, “ಕೆಂಪೇಗೌಡ-2′ ಚಿತ್ರದ ಒನ್‌ಲೈನ್‌ ಹಾಗೂ ನೈಜತೆಯ ಬಗ್ಗೆ ಹೇಳಲು ಕೋಮಲ್‌ ಮರೆಯುವುದಿಲ್ಲ. “ಚಿತ್ರವನ್ನು ತುಂಬಾ ಸಹಜವಾಗಿ, ನೈಜತೆಯೊಂದಿಗೆ ಕಟ್ಟಿಕೊಡಲು ಪ್ರಯತ್ನಿಸುತ್ತಿದ್ದೇವೆ. ಅದು ನಟನೆಯಿಂದ ಹಿಡಿದು ಕಾನೂನು ಅಂಶಗಳವರೆಗೂ. ಹಾಗಾಗಿಯೇ ಪೊಲೀಸ್‌ ಆಫೀಸರ್‌ಗಳಲ್ಲಿ ಮಾತನಾಡಿ, ಚಿತ್ರಕ್ಕೆ ಪೂರಕವಾದ ಕಾನೂನಿನ ಅರಿವು, ಕೇಸ್‌ಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದೇವೆ. ಯಾವುದೇ ಒಂದು ಅಂಶದಲ್ಲೂ ತಪ್ಪು ಕಾಣಬಾರದು. ಈಗ ಪ್ರೇಕ್ಷಕರು ತುಂಬಾ ಬುದ್ಧಿವಂತರು. ಏನೇ ತಪ್ಪಾದರೂ ಬೇಗನೇ ಗುರುತಿಸುತ್ತಾರೆ. ಹಾಗಾಗಿ, ಯಾವುದೇ ಆಭಾಸ ಆಗಬಾರದು ಎಂದು ಎಚ್ಚರ ವಹಿಸುತ್ತಿದ್ದೇವೆ. ಸಿಂಪಲ್‌ ಲೈನ್‌ ಇಟ್ಟುಕೊಂಡು ಕಥೆ ಮಾಡಿದ್ದೇವೆ. ಡಿಜಿಟಲ್‌ ಇಂಡಿಯಾದಲ್ಲಿ ಸೈಬರ್‌ ಕ್ರಿಮಿನಲ್‌ಗ‌ಳು ಕೂಡಾ ಜಾಸ್ತಿಯಾಗುತ್ತಿದ್ದಾರೆ. ಬೇರೆ ಕ್ರಿಮಿನಲ್‌ಗ‌ಳಿಗಿಂತ ಆ ತರಹದ ಕ್ರಿಮಿನಲ್‌ಗ‌ಳನ್ನು ಹಿಡಿಯೋದು ಪೊಲೀಸ್‌ ಇಲಾಖೆಗೆ ಸವಾಲಿನ ಕೆಲಸ. ಇಂತಹ ಸಂದರ್ಭದಲ್ಲಿ ನಾಯಕ ಯಾವ ತರಹ ಸೈಬರ್‌ ಕ್ರಿಮಿನಲ್‌ ಸೇರಿದಂತೆ ಇತರ ಕ್ರಿಮಿನಲ್‌ಗ‌ಳನ್ನು ಮಟ್ಟ ಹಾಕುತ್ತಾನೆ ಎಂಬ ಲೈನ್‌ನೊಂದಿಗೆ ಕಥೆ ಸಾಗುತ್ತದೆ. ಇದು ಔಟ್‌ ಅಂಡ್‌ ಔಟ್‌ ಕಾಪ್‌ ಸಿನಿಮಾ. ಪೊಲೀಸ್‌ ಆಫೀಸರ್‌ನ ಕಥೆ. ತುಂಬಾ ಸಹಜವಾಗುತ್ತದೆ. ನಾವು ದಿನನಿತ್ಯ ನೋಡುವ ಪೊಲೀಸ್‌ ಅಧಿಕಾರಿ ಹೇಗಿರುತ್ತಾನೆ ಅದೇ ರೀತಿ ಇಲ್ಲೂ ಇದೆ. ಸುಖಾಸುಮ್ಮನೆ ಚೇಸಿಂಗ್‌, ಹೊಡೆದಾಟವಿಲ್ಲ. ಒಬ್ಬ ಪೊಲೀಸ್‌, ಕ್ರಿಮಿನಲ್‌ನ ಹಿಡಿಯಲು ಏನು ಮಾಡುತ್ತಾನೆ, ಹಿಡಿದ ನಂತರ ಹೇಗೆ ಹ್ಯಾಂಡಲ್‌ ಮಾಡುತ್ತಾನೆಂಬುದನ್ನು ತುಂಬಾ ಸಹಜವಾಗಿ ತೋರಿಸಲಿದ್ದೇವೆ’ ಎನ್ನುವುದು ಕೋಮಲ್‌ ಮಾತು. 

ಸಹಜವಾಗಿಯೇ ಒಂದು ಪ್ರಶ್ನೆ ಬರುತ್ತದೆ. ಕೋಮಲ್‌ ಮೂಲತಃ ಕಾಮಿಡಿ ನಟ. ಹಾಗಾಗಿ, ಈ ಸಿನಿಮಾದಲ್ಲಿ ಕಾಮಿಡಿ ಇರಲ್ವಾ ಎಂದು. “ನಾವು ಉದ್ದೇಶಪೂರ್ವಕವಾಗಿ ಕಾಮಿಡಿ ಟ್ರ್ಯಾಕ್‌ ಇಟ್ಟಿಲ್ಲ. ಪೊಲೀಸರು ಕೂಡಾ ಮನುಷ್ಯರೇ. ಅವರಲ್ಲೂ ಹಾಸ್ಯಪ್ರಜ್ನೆ ಇರುತ್ತದೆ. ಅವರು ತಮ್ಮ ಕುಟುಂಬದ ಜೊತೆ ದೇವಸ್ಥಾನ, ಕಾರ್ಯಕ್ರಮಗಳಿಗೆ ಹೋಗುತ್ತಾರೆ, ಫ್ರೆಂಡ್ಸ್‌ ಜೊತೆ ಪಾರ್ಟಿ ಮಾಡುತ್ತಾರೆ.ಆ ಸಂದರ್ಭದಲ್ಲಿ ಎಷ್ಟೋ ಜೋಕ್‌ ಹುಟ್ಟಿಕೊಳ್ಳುತ್ತವೆ. ಆ ತರಹದ ಕಾಮಿಡಿ ಸನ್ನಿವೇಶಗಳು ಚಿತ್ರದಲ್ಲಿರುತ್ತವೆ. ಕಾಮಿಡಿ ಮಾಡಬೇಕೆಂಬ ಕಾರಣಕ್ಕೆ ಕಾಮಿಡಿ ಇಲ್ಲ’ ಎನ್ನುವುದು ಕೋಮಲ್‌ ಉತ್ತರ. 

Advertisement

Udayavani is now on Telegram. Click here to join our channel and stay updated with the latest news.

Next