ಕಲಬುರಗಿ: ಮೂಗಿನಲ್ಲಿ ಸಣ್ಣದಾಗಿ ಕ್ಯಾನ್ಸರ್ ಗಡ್ಡೆ ಬೆಳೆದು ಮದುಳಿಗೆ ಹರಡಿ ಬೆÅçನ್ ಟ್ಯೂಮರ್ ಆಗಿದ್ದ 16 ವರ್ಷದ ಬಾಲಕಿಗೆ ಕಲಬುರಗಿ ವೈದ್ಯರು “ಆಲ್‌ಫ್ಯಾಕ್ಟರಿ ನ್ಯೂರೋಬ್ಲಾಸ್ಟೊಮಾ’ ಶಸ್ತ್ರಚಿಕಿತ್ಸೆಯನ್ನು ಆರೋಗ್ಯ ಕರ್ನಾಟಕ ಮತ್ತು ಆಯುಷ್ಮಾನ್ ಭಾರತ ಯೋಜನೆಯಡಿ ಉಚಿತ ವಾಗಿ ಮಾಡಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ಬಸವೇಶ್ವರ ಆಸ್ಪತ್ರೆಯ 30 ವೈದ್ಯರ ತಂಡ ಸತತ 11 ಗಂಟೆಗಳ ಕಾಲ ಈ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಬೀದರ್ ಜಿಲ್ಲೆಯ ಹುಮನಾಬಾದ ತಾಲೂ ಕಿನ ಹುಡಗಿ ಗ್ರಾಮದ ಬಾಲಕಿ ನೀಲಾಂಬಿಕಾ ಭಾಗಿರಥಿಗೆ ಒಂದು ವರ್ಷ ದಿಂದ ಉಸಿರಾಟ ಸಮಸ್ಯೆ ಎದುರಿಸುತ್ತಿದ್ದಳು. ಅಲ್ಲದೇ, ಆಕೆಯ ಕಣ್ಣು ಗುಡ್ಡೆಗಳು ಮುಂದೆ ಬಂದಿದ್ದವು.
ಹೀಗಾಗಿ ಇದೇ ಮೇ 31ರಂದು ಪೋಷಕರು ಆಕೆಯನ್ನು ಕಿವಿ, ಮೂಗು ಮತ್ತು ಗಂಟಲು (ಇಎನ್‌ಟಿ) ತಜ್ಞರಿಗೆ ತೋರಿಸಲೆಂದು ಬಸವೇಶ್ವರ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಆಗ ಮೂಗಿನಲ್ಲಿ ಗಡ್ಡೆ ಬೆಳೆದಿರುವುದನ್ನು ಕಿವಿ, ಮೂಗು ಮತ್ತು ಗಂಟಲು ವಿಭಾಗದ ಮುಖ್ಯಸ್ಥ ಡಾ| ಸಿ.ಬಿ. ನಂದ್ಯಾಳ ಪತ್ತೆ ಹೆಚ್ಚಿಸಿದ್ದರು. ಆಗ ಸಿಟಿ ಸ್ಕ್ಯಾನ್ ಮತ್ತು ಎಂಆರ್‌ಐ ಸ್ಕಾನ್ ಮಾಡಿದಾಗ ಗಡ್ಡೆ ಬಾಲಕಿಯ ಮೂಗಿನ ಮೂಲಕ ಕಣ್ಣುಗಳ ಎಡ ಭಾಗದಿಂದ ಮದುಳಿಗೆ ವ್ಯಾಪಿಸಿರು ವುದು ಕಂಡು ಬಂದಿತ್ತು. ಮೂಗಿನ ಭಾಗದಲ್ಲಿ 4×4 ಸೆಮೀ ಹಾಗೂ ಮೆದಳಿನಲ್ಲಿ 6×8 ಸೆ.ಮೀ ಗಡ್ಡೆ ಬೆಳೆದಿತ್ತು.
ಮೆದುಳಿನ ಎಡ ಭಾಗದಲ್ಲಿ ಶೇ.30ರಷ್ಟು ಆವರಿಸಿತ್ತು. ಹೀಗಾಗಿ ಬಾಲಕಿಗೆ ಉಸಿರಾಟದ ತೊಂದರೆ, ಕಣ್ಣು ಗುಡ್ಡೆಗಳು ಮುಂದೆ ಬಂದಿದ್ದವು. ಇದರಿಂದ ವಾಸನೆ ಕಂಡು ಹಿಡಿಯಲೂ ಸಾಧ್ಯವಾಗುತ್ತಿರಲಿಲ್ಲ. ಮೂಗಿನಿಂದ ರಕ್ತಸ್ರಾವ ಕೂಡ ಆಗುತ್ತಿತ್ತು ಎಂದು ಡಾ| ಸಿ.ಬಿ.ನಂದ್ಯಾಳ ತಿಳಿಸಿದರು. ಮೂಗು, ಕಣ್ಣು ಮತ್ತು ಮೆದುಳಿಗೆ ಗಡ್ಡೆ ವ್ಯಾಪಿಸಿದ್ದರಿಂದ ನರರೋಗ ವಿಭಾಗದ ಮುಖ್ಯಸ್ಥ ಡಾ| ಸತೀಶ ಮೇಳಕುಂದಿ ಅವರನ್ನು ಸಂಪರ್ಕಿಸಲಾಗಿತ್ತು. ತದನಂತರ ಡಾ| ಸತೀಶ ಮೇಳಗುಂದಿ, ಡಾ| ಸಿ.ಬಿ. ನಂದ್ಯಾಳ ಮತ್ತು ನೇತ್ರ ತಜ್ಞ ಡಾ| ಮಲ್ಲಿ ಕಾರ್ಜುನ ತೆಗನೂರ, ಅರವಳಿಕೆ ತಜ್ಞ ಡಾ| ಗಜೇಂದ್ರ ಸಿಂಗ್ ಎಲ್ಲರೂ ಆಲ್‌ಫ್ಯಾಕ್ಟರಿ ನ್ಯೂರೋಬ್ಲಾಸ್ಟೊಮಾ ಶಸ್ತ್ರ ಚಿಕಿತ್ಸೆ ಮಾಡುವ ನಿರ್ಧಾರಕ್ಕೆ ಬಂದಿದ್ದರು. ಮೂಗಿನ ಮೂಲಕ ಎಡ ಭಾಗದ ಮೆದುಳಿಗೆ ಡೆಂಬಲ್ ರೀತಿಯ ಆಕಾರದಲ್ಲಿ ಗಡ್ಡೆ ಆವರಿಸಿತ್ತು.
ಮೆದುಳಿಗೆ ಗಡ್ಡೆ ಹೊಕ್ಕಿರುವುದಿಂದ ಮೆದುಳಿಗೆ ಯಾವ ಹಾನಿಯಾಗದಂತೆ ಎಚ್ಚರ ವಹಿಸುವುದು ಅಗತ್ಯವಾಗಿತ್ತು. ತಜ್ಞರು ಮತ್ತು ಪರಿಣಿತ ವೈದ್ಯರ ತಂಡದೊಂದಿಗೆ ಜೂನ್ 8 ರಂದು ಸತತವಾಗಿ ಸುದೀರ್ಘ 11 ಗಂಟೆ ಕಾಲ ಈ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಬಾಲಕಿ ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ಡಾ| ಸತೀಶ ಮೇಳಕುಂದಿ ತಿಳಿಸಿದ್ದಾರೆ. ವೈದ್ಯರಾದ ಡಾ| ಶಶಾಂಕ್ ರಾಮದುರ್ಗ, ಡಾ| ಕಿರಣ ದೇಶಮುಖ, ಡಾ| ಶಿವಾನಂದ ಮೇಳಕುಂದಿ ಡಾ.ಟೆಂಗಳಿ, ಇಎನ್‌ಟಿ ತಜ್ಞರು, ನೇತ್ರ ತಜ್ಞರು, ರೆಡಿಯಾಲಜಿಸಿಸ್ಟ್, ಪ್ಯಾಥಾಲಜಿಸ್ಟ್ ತಜ್ಞರು ಒಳಗೊಂಡಂತೆ ಒಟ್ಟು 30 ಜನರ ಸರ್ಜನ್‌ಗಳು ಮತ್ತು 10 ಜನ ಸಿಬ್ಬಂದಿ ಶಸ್ತ್ರಚಿಕಿತ್ಸೆ ತಂಡದಲ್ಲಿ ಇದ್ದರು. ಈ ಶಸ್ತ್ರಚಿಕಿತ್ಸೆಗೆ ಒಟ್ಟು 4ರಿಂದ 5 ಲಕ್ಷ ರೂ. ವೆಚ್ಚವಾಗುತ್ತದೆ. ಬಾಲಕಿ ಬಿಪಿಎಲ್ ಕುಟುಂಬಕ್ಕೆ ಸೇರಿದ್ದು, ಉಚಿತವಾಗಿಯೇ ಶಸ್ತ್ರ ಚಿಕಿತ್ಸೆ ನೆರವೇರಿಸಲಾಗಿದೆ.