Advertisement
ಕಳೆದ ಬುಧವಾರ ರಾತ್ರಿ ನಿರ್ಜಲೀಕರಣಕ್ಕೆ ಒಳಗಾಗಿ ಅನಾರೋಗ್ಯಕ್ಕೆ ತುತ್ತಾಗಿದ್ದ ಶ್ರೀಗಳಿಗೆ ಮಠದಲ್ಲಿಯೇ ಚಿಕಿತ್ಸೆ ನೀಡಲಾಗಿತ್ತು. ಗುರುವಾರ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯ ವೈದ್ಯರ ತಂಡದ ಬಂದು, ಮಠದಲ್ಲಿಯೇ ಚಿಕಿತ್ಸೆ ಆರಂಭಿಸಿದರು. ಶ್ರೀಗಳ ರಕ್ತ ಮಾದರಿ ಸಂಗ್ರಹಿಸಿ, ಪರೀಕ್ಷೆಗೆ ಒಳಪಡಿಸಿದ್ದರು. ಬಳಿಕ, ಶುಕ್ರವಾರ ಅವರನ್ನು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ಕರೆತರಲಾಗಿತ್ತು. ಸತತ 24 ಗಂಟೆಗಳ ನಿರಂತರ ವೈದ್ಯಕೀಯ ತಪಾಸಣೆ, ಚಿಕಿತ್ಸೆ ನಂತರ ಶ್ರೀಗಳ ದೇಹದಲ್ಲಿ ಚೇತರಿಕೆ ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಶನಿವಾರ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಶ್ರೀಗಳೊಂದಿಗೆ ಸಿದ್ದಲಿಂಗಸ್ವಾಮೀಜಿ, ಮಾಜಿ ಸಚಿವ ಎಸ್.ಶಿವಣ್ಣ, ಜೆಡಿಎಸ್ ಮುಖಂಡ ಡಿ.ಸಿ.ಗೌರಿಶಂಕರ್, ಹಲವು ಹರಗುರು ಚರಮೂರ್ತಿಗಳು ಆಗಮಿಸಿದರು. ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ನೇರವಾಗಿ ಸಿದ್ಧಗಂಗಾ ಕ್ಷೇತ್ರದ ಹಳೆಯ ಮಠಕ್ಕೆ ಆಗಮಿಸಿದ ಶ್ರೀಗಳು, ವ್ಹೀಲ್ ಚೇರ್‌ನಲ್ಲಿ ಮಠದ ಕೊಠಡಿ ಪ್ರವೇಶಿಸಿದರು.
Related Articles
Advertisement
ಒಂದು ವಾರ ವಿಶ್ರಾಂತಿ: ಈ ವೇಳೆ, ಸುದ್ದಿಗಾರರ ಜತೆ ಮಾತನಾಡಿದ ಸಿದ್ಧಗಂಗಾ ಮಠಾಧ್ಯಕ್ಷ, ಶ್ರೀ ಸಿದ್ಧಲಿಂಗಸ್ವಾಮೀಜಿ, ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯ ಡಾ.ರವೀಂದ್ರ ಮಾರ್ಗದರ್ಶದಲ್ಲಿ ಶ್ರೀಗಳಿಗೆ ಶಸ್ತ್ರಚಿಕಿತ್ಸೆ ನಡೆಸಿ ಸ್ಟೆಂಟ್ ಹಾಕಲಾಗಿದೆ. ಅಲ್ಲದೆ, ಶ್ರೀಗಳ ಮೂತ್ರಕೋಶ ಮತ್ತು ಕರುಳಿನಲ್ಲಿ ಸಮಸ್ಯೆ ಉಂಟಾಗಿತ್ತು. ಶ್ರೀಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಸುತ್ತೂರು ಶ್ರೀಗಳು, ಆದಿಚುಂಚನಗಿರಿ ಶ್ರೀಗಳು, ಗೋಬ್ಲಿಲ್ ಆಸ್ಪತ್ರೆಯ ಮುಖ್ಯಸ್ಥರು, ಸಿಇಓ ಥಾಮಸ್, ಡಾ.ರವೀಂದ್ರ, ಡಾ.ವೆಂಕಟರಮಣ ಅವರ ನಿರಂತರ ನಿಗಾದಿಂದಾಗಿ ಶ್ರೀಗಳು ಬಹುಬೇಗ ಚೇತರಿಸಿಕೊಂಡಿದ್ದಾರೆ. ಮಠದಲ್ಲಿ ಎಂದಿನಂತೆ ಸ್ಥಳೀಯ ವೈದ್ಯರಾದ ಡಾ.ಪರಮೇಶ್ವರ್, ಡಾ.ಶಿವಪ್ಪ, ಡಾ.ರಜಿನಿ ಅವರು ನಿಗಾವಹಿಸಲಿದ್ದಾರೆ. ಒಂದು ವಾರದ ಕಾಲ ಅವರಿಗೆ ಯಾವುದೇ ಸೋಂಕು ಆಗದಂತೆ ಎಚ್ಚರಿಕೆ ವಹಿಸಬೇಕಾಗಿದೆ. ಹೀಗಾಗಿ, ಒಂದು ವಾರಗಳ ಕಾಲ ಅವರಿಗೆ ವಿಶ್ರಾಂತಿ ಬೇಕಿದೆ ಎಂದರು.
ದೂರದಲ್ಲಿ ನಿಂತು ದರ್ಶನದೂರದ ಊರುಗಳಿಂದ ಬಂದಿರುವ ಭಕ್ತರಿಗೆ ನಿರಾಸೆ ಯಾಗಬಾರದೆಂಬ ಕಾರಣದಿಂದ ಹಳೇ ಮಠದಲ್ಲಿ ದೂರದಲ್ಲಿ ನಿಂತು ದರ್ಶನ ಪಡೆದುಕೊಂಡು ಹೋಗಲು ವ್ಯವಸೆœ ಮಾಡಲಾಗಿದೆ. ಸ್ವಾಮೀಜಿ ಬಳಿ ಯಾರೂ ಹೋಗುವಂತಿಲ್ಲ. ವೈದ್ಯರು ಮತ್ತು ಮಠದ ಇಬ್ಬರಿಗೆ ಮಾತ್ರ ಅವಕಾಶವಿದೆ. ಈ ಮಧ್ಯೆ, ಶನಿವಾರ ಶ್ರೀಗಳು ವೈದ್ಯರ ಸಲಹೆಯಂತೆ ಲಿಕ್ವಿಡ್ ಆಹಾರವನ್ನೇ ಹೆಚ್ಚಾಗಿ ಸೇವಿಸಿದ್ದಾರೆ. ಒಂದು ಇಡ್ಲಿ, ಎರಡು ಪರಂಗಿ ಹಣ್ಣಿನ ಪೀಸ್, ಎರಡು ಪೀಸ್ ಸೇಬು ಸೇವಿಸಿದ್ದಾರೆ. ನಂತರ ಮಜ್ಜಿಗೆ, ಬಾದಾಮಿ ಹಾಲು, ಎಳನೀರು ಸೇವಿಸಿದ್ದಾರೆ. ನೀರನ್ನು ಹೆಚ್ಚು ಸೇವಿಸುತ್ತಿದ್ದಾರೆ ಎಂದು ಮಠದ ಮೂಲಗಳು ತಿಳಿಸಿದೆ.