Advertisement

ಪ್ರವಚನಗಳಿಂದ ಮನಸ್ಸಿನ ಕಲ್ಮಶ ಸ್ವತ್ಛ

10:49 AM Apr 09, 2019 | pallavi |
ಉಪ್ಪಿನಬೆಟಗೇರಿ: ಮರಣ ಎಂಬುದು ನೀರಿನ ಮೇಲಿನ ಗುಳ್ಳೆ ಇದ್ದ ಹಾಗೆ. ನಮಗೆ ಸಾವಿದೆ ಎಂದು ತಿಳಿದು ಜೀವನದಲ್ಲಿ
ಒಳ್ಳೆಯ ಕೆಲಸ ಮಾಡಿ ಪರೋಪಕಾರಿಯಾಗಿ ಬದುಕೋಣ ಎಂದು ಜಂಬಗಿ ಹಿರೇಮಠದ ಅಡವೀಶ್ವರ ಶಿವಾಚಾರ್ಯ ಸ್ವಾಮೀಜಿ ಉಪದೇಶಿಸಿದರು.
ಸ್ಥಳೀಯ ಮೂರುಸಾವಿರ ವಿರಕ್ತ ಮಠದಲ್ಲಿ ಗುರು ವಿರೂಪಾಕ್ಷೇಶ್ವರ ಜಾತ್ರೆ ಅಂಗವಾಗಿ ನಡೆಯುತ್ತಿರುವ “ಲವಣಗಿರಿ ಉತ್ಸವ’ದಲ್ಲಿ ಆಧ್ಯಾತ್ಮಿಕ ಪ್ರವಚನದ ಎರಡನೇ ದಿನದ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಪ್ರವಚನ ಎಂಬ ದಿವ್ಯ ವಾಣಿಯು ನಮ್ಮ ಮನಸ್ಸಿನಲ್ಲಿರುವ ಕಲ್ಮಶವೆಂಬ ಕಸವನ್ನು ಸ್ವತ್ಛಗೊಳಿಸುತ್ತದೆ. ಜೀವವಿದ್ದಾಗ ಈ ಶರೀರಕ್ಕೆ ಬಹಳ ಬೆಲೆ ಇದೆ. ಆದರೆ ಜೀವ ಹೋದ ಮೇಲೆ ಈ ಶರೀರಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಮನೆಯ ಸದೃಢತೆ, ಅಂದ-ಚೆಂದ ಕಾಣಲು ಮನೆಗೆ ತೊಲೆ ಬಾಗಿಲು ಹೇಗೆ ಶ್ರೇಷ್ಠವೋ ಹಾಗೆ ಕುಟುಂಬದ ರೀತಿ, ನೀತಿ, ಸಂಸ್ಕೃತಿ,
ಸಂಸ್ಕಾರದ ಪ್ರತಿರೂಪವಾಗಿ ಮನೆಯ ತೊಲೆ ಬಾಗಿಲಿನಂತಿರುವ ಹೆಣ್ಣು ಮಕ್ಕಳು ಇಡೀ ಕುಟುಂಬಕ್ಕೆ ಶ್ರೇಷ್ಠ ಎಂದರು.
ನಾವು ಒಳ್ಳೆಯ ಕಾರ್ಯಗಳನ್ನು ಮಾಡಿ ಜನರ ನಾಲಿಗೆಯ ಮೇಲೆ ಇರೋಣ. ಕೆಟ್ಟ ಕೆಲಸಗಳನ್ನು ಮಾಡಿ ಜನರ ಹಲ್ಲಿನಲ್ಲಿ
ಇರುವುದು ಬೇಡ. ಪ್ರಸಕ್ತ ಕಾಲ ಘಟ್ಟದಲ್ಲಿ ಸದ್ಗುರು ಸಿಗುವುದು ತುಂಬಾ ದುರ್ಲಭ. ನಮಗೆ ಅಂತಹ ಸದ್ಗುರು
ದೊರೆತರೆ ಆ ಸದ್ಗುರುವಿನ ಕೃಪೆಯಿಂದ ಆತ್ಮದರ್ಶನ ಮಾಡಿಕೊಳ್ಳೋಣ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಸ್ಥಳೀಯ ಮೂರುಸಾವಿರ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ ಆಶೀರ್ವಚನ ನೀಡಿ, ಭೂಮಿಯ ಮೇಲೆ ಇರುವ 84 ಲಕ್ಷ ಜೀವ ರಾಶಿಗಳಲ್ಲಿ ಅತ್ಯಂತ ಶ್ರೇಷ್ಠ ಮನುಷ್ಯ ಜನ್ಮವಾಗಿದೆ. ಹಿಂದಿನ ಜನ್ಮದ ಪುಣ್ಯದ ಫಲವಾಗಿ ಮನುಷ್ಯರಾಗಿ ಜನಿಸಿದ ನಾವು ಮನುಷ್ಯ ಜನ್ಮ ಹೇಗೆ ಬಂದಿದೆಯೋ ಹಾಗೇ ಕಳಿಸದೆ ಸಮಾಜಕ್ಕೆ  ಪರೋಪಕಾರಿಯಾಗುವಂತಹ ಪುಣ್ಯದ ಕಾರ್ಯಗಳನ್ನು ಮಾಡೋಣ ಎಂದರು.
ಆಧ್ಯಾತ್ಮಿಕ ಪ್ರವಚನದ ಎರಡನೇ ದಿನದ ಕಾರ್ಯಕ್ರಮಕ್ಕೆ ದಾಸೋಹ ಸೇವೆ ಸಲ್ಲಿಸಿದ ಶರಣರಾದ ಗಂಗಯ್ಯ
ಸಾಲಿಮಠ, ಅಡಿವೆಪ್ಪ ಪೂಜಾರ, ಅಶೋಕ ಬಿಕ್ಕಣ್ಣವರ ಹಾಗೂ ಮಲ್ಲಿಕಾರ್ಜುನ ಮಡಿವಾಳರ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕ ಸಂಜಯ ಕೊಡಿ ಸ್ವಾಗತಿಸಿ, ನಿರೂಪಿಸಿದರು.
ಹಿಂದಿನ ಪುಣ್ಯದ ಫಲ ಇಂದು ಉಣ್ಣ ಬೇಕು, ಇಂದಿನ ಪುಣ್ಯದ ಫಲ ಮುಂದೆ ಉಣ್ಣಬೇಕು. ಬಿತ್ತಿದ್ದನ್ನು ಬೆಳೆದುಕೋ ಎಂಬಂತೆ ನಾವು ಮಾಡುವ ಪಾಪ-ಪುಣ್ಯದ ಫಲ ನಮಗೇ ದೊರಕುತ್ತದೆ. ಸೇವಾ ಮನೋಭಾವನೆ ದೊಡ್ಡದು ಸಮಾಜಕ್ಕಾಗಿ ತನು, ಮನ, ಧನದಿಂದ ನಿಸ್ವಾರ್ಥವಾಗಿ ಸೇವೆ ಮಾಡಿ ಪುಣ್ಯ ಸಂಪಾದಿಸಿ.  ಕುಮಾರ ವಿರೂಪಾಕ್ಷ ಸ್ವಾಮೀಜಿ, ಮೂರುಸಾವಿರ ವಿರಕ್ತಮಠ ಉಪ್ಪಿನಬೆಟಗೇರಿ
Advertisement

Udayavani is now on Telegram. Click here to join our channel and stay updated with the latest news.

Next