ಬೀದರ: ಗ್ರಾಮಗಳನ್ನು ಬಯಲು ಶೌಚದಿಂದ ಮುಕ್ತಗೊಳಿಸುವ ಉದ್ದೇಶದಿಂದ ಆರಂಭವಾದ ವೈಯಕ್ತಿಕ ಶೌಚಾಲಯ ನಿರ್ಮಾಣದ ಅಭಿಯಾನ ನಾಲ್ಕು ವರ್ಷಗಳಿಂದ ನಡೆಯುತ್ತಿದ್ದರೂ ಜಿಲ್ಲೆಯಲ್ಲಿ ನಿರೀಕ್ಷಿತ ಗುರಿ ಸಾಧನೆಯಾಗಿಲ್ಲ. ಈವರೆಗೆ ಕೇವಲ ಶೇ.53.39ರಷ್ಟು ಮಾತ್ರ ಗುರಿ ಸಾಧಿಸಲಾಗಿದ್ದು, 2019ರ ಅಂತ್ಯಕ್ಕೆ 1.02 ಲಕ್ಷ ಶೌಚಾಲಯಗಳನ್ನು ನಿರ್ಮಿಸಬೇಕಾಗಿದೆ.
Advertisement
ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಶೌಚಾಲಯ ನಿರ್ಮಾಣ ಕಾರ್ಯ ನಡೆಯುತ್ತಿದ್ದು, 2018-19ನೇ ಸಾಲಿನಲ್ಲಿ ರಾಜ್ಯವನ್ನು ಬಯಲು ಬಹಿರ್ದೆಸೆ ಮುಕ್ತ ಮಾಡುವ ಗುರಿ ಹೊಂದಲಾಗಿದೆ. ಆದರೆ, ಜಿಲ್ಲೆಯಲ್ಲಿ ಮಾತ್ರ ಶೌಚಾಲಯ ನಿರ್ಮಾಣ ಕಾರ್ಯ ಮಂದಗತಿಯಿಂದ ನಡೆಯುತ್ತಿರುವುದು ಅಂಕಿ ಅಂಶಗಳಿಂದ ಗೊತ್ತಾಗಿದೆ.
Related Articles
ಬಯಲು ಬಹಿರ್ದೆಸೆ ಮುಕ್ತವೆಂದು ಘೋಷಣೆ ಆಗಿರುವ 7 ಗ್ರಾಮ ಪಂಚಾಯತಗಳಿಗೆ ಹೈದ್ರಾಬಾದ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ತಲಾ 25 ಲಕ್ಷ ರೂ. ಪುರಸ್ಕಾರ ಅನುದಾನ ಒದಗಿಸುವಂತೆ ಏಪ್ರಿಲ್ ತಿಂಗಳಲ್ಲಿ ಜಿಲ್ಲಾ ಪಂಚಾಯತದಿಂದ ಎಚ್‌ಕೆಆರ್‌ಡಿಬಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
Advertisement
ಬಸವಕಲ್ಯಾಣ ತಾಲೂಕಿನ ಸಪ್ತಾಪುರ, ತೊಗಲೂರ, ಚಿಕನಗಾಂವ, ಚಾಂಜೋಳ, ಹಣಮಂತವಾಡಿ,ಔರಾದ ತಾಲೂಕಿನ ಚಿಂತಾಕಿ, ಭಾಲ್ಕಿ ತಾಲೂಕಿನ ಅಟ್ಟರ್ಗಾ ಪಂಚಾಯತಗಳಿಗೆ ತಲಾ 25 ಲಕ್ಷ ರೂ.
ಮೊತ್ತದ ಅಭಿವೃದ್ಧಿ ಕಾಮಗಾರಿಗಳನ್ನು ಪ್ರಸ್ತಾಪಿಸಲು ಸೂಚಿಸಲಾಗಿದೆ. ಜಿಪಂ ಅಧ್ಯಕ್ಷ-ಉಪಾಧ್ಯಕ್ಷರ ನಿರ್ಲಕ್ಷ: ಶೌಚಾಲಯ ನಿರ್ಮಾಣದ ಬಗ್ಗೆ ಜಿಲ್ಲಾ ಪಂಚಾಯತ ಅಧ್ಯಕ್ಷೆ ಭಾರತಬಾಯಿ ಶೇರಿಕಾರ್ ಹಾಗೂ ಉಪಾಧ್ಯಕ್ಷ ಡಾ| ಪ್ರಕಾಶ ಪಾಟೀಲ ಅವರ ಮಾತುಗಳು ಭಾಷಣಕ್ಕೆ ಮಾತ್ರ ಸೀಮಿತವಾಗಿವೆ. ಗ್ರಾಮೀಣ ಭಾಗದಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರು ಆಸಕ್ತಿ ತೊರುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಅಧ್ಯಕ್ಷ-ಉಪಾಧ್ಯಕ್ಷರು ಪ್ರತಿನಿಧಿಸುವ ಕ್ಷೇತ್ರಗಳೇ ಇಂದಿಗೂ ಬಯಲು ಬಹಿರ್ದೆಸೆ ಮುಕ್ತಗೊಂಡಿಲ್ಲ. ಇಂತಹ ಸ್ಥಿತಿಯಲ್ಲಿ ಸ್ವಚ್ಛ ಭಾರತ ಮಿಷನ್ ಸಂಪೂರ್ಣ ಯಶಸ್ವಿಯಾಗುವುದು ಹೇಗೆ ಸಾಧ್ಯ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಬಳಕೆಯಾಗದ ಶೌಚಾಲಯ: ಗ್ರಾಮೀಣ ಭಾಗದಲ್ಲಿ ಸರಕಾರದ ಸಹಾಯ ಧನ ಪಡೆದು ನಿರ್ಮಿಸಿಕೊಂಡ ವೈಯಕ್ತಿಕ ಶೌಚಾಲಯಗಳನ್ನು ಜನರು ಬಳಸುತ್ತಿಲ್ಲ ಎಂಬ ಅಂಶ ಬೆಳಕಿಗೆ ಬಂದಿವೆ. ಕಟ್ಟಿಕೊಂಡ ಶೌಚಾಲಗಳಲ್ಲಿ ಹುಲ್ಲು, ಸಗಣಿ ಇತರೆ ಸಾಮಾನುಗಳನ್ನು ಇಡುವುದು. ಸ್ನಾನದ ಮನೆ ಮಾಡಿಕೊಳ್ಳುವ ಮೂಲಕ ಶೌಚಾಲಯದ ಉದ್ದೇಶ ಈಡೇರದಂತಾಗಿದೆ. ಇನ್ನು ಕೆಲವರು ಮನೆಗಳಲ್ಲಿ ಶೌಚಾಲಯ ನಿರ್ಮಿಸಿಕೊಂಡರೂ ಬಯಲಿಗೆ ಹೋಗುವುದು ಸಾಮಾನ್ಯವಾಗಿದೆ. ಈ ಕುರಿತು ಅಧಿಕಾರಿಗಳು ಜಾಗೃತಿ ಮೂಡಿಸಿದರೂ ಕೂಡ ಪ್ರಯೋಜನ ಆಗುತ್ತಿಲ್ಲ ಎಂಬುದು ಇಲಾಖೆ ಅಧಿಕಾರಿಗಳ ಅಳಲು. ಸಂಪೂರ್ಣ ಬಯಲು ಶೌಚ ಮುಕ್ತ ಗ್ರಾಮ ನಿರ್ಮಾಣ ಕಾರ್ಯಕ್ಕೆ ಸ್ಥಳೀಯ
ಜನ ಪ್ರತಿನಿಧಿಗಳ ಸಾಥ್ ಅಗತ್ಯವಾಗಿದೆ. ಶೌಚಾಲಯ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಪ್ರತಿವರ್ಷ ಗುರಿ ಸಾಧನೆ ಮಾಡಲಾಗುತ್ತಿದೆ. ಜನರು ನಿರ್ಮಿಸಿಕೊಂಡ ಶೌಚಾಲಯಗಳನ್ನು ಬಳಸುತ್ತಿಲ್ಲ ಎಂಬ ಅಂಶ ಬೆಳಕಿಗೆ ಬಂದಿದ್ದು, ಮುಂದಿನ ದಿನಗಳಲ್ಲಿ ಶೌಚಾಲಯ ಬಳಸುವಂತೆ ಜಾಗೃತಿ ಮೂಡಿಸಲಾಗುವುದು. ಅಲ್ಲದೆ ಶೌಚಾಲಯ ದುರ್ಬಳಕೆ ಮಾಡಿಕೊಳ್ಳುವ ಫಲಾನುಭವಿಗಳಿಗೆ ನೋಟಿಸ್ ನೀಡಿ ಎಚ್ಚರಿಸುವ ಕಾರ್ಯ ಮಾಡಲಾಗುವುದು. ಸರಕಾರದ ಅನುದಾನ ಪಡೆದು ನಿರ್ಮಿಸಿಕೊಂಡ ಶೌಚಾಲಯಗಳು ಬಳಕೆ ಆಗಬೇಕು ಎಂಬುದು ಇಲಾಖೆಯ ಉದ್ದೇಶವಾಗಿದೆ. ಈ ಕಾರ್ಯಕ್ಕೆ ಎಲ್ಲರೂ ಸಾಥ್ ನೀಡಬೇಕಾಗಿದೆ. ಡಾ| ಗೌತಮ ಅರಳಿ ಸ್ವಚ್ಛ ಭಾರತ ಜಿಲ್ಲಾ ನೋಡಲ್ ಅಧಿಕಾರಿ