Advertisement
ಗ್ಯಾನಿ ಜೈಲ್ ಸಿಂಗ್ ರಾಷ್ಟ್ರಪತಿಗಳಾಗಿದ್ದ ಸಂದರ್ಭ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದಾಗ ಪೇಜಾವರ ಶ್ರೀಗಳ ವಿದ್ಯಾಗುರು ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಮಾನ್ಯತೀರ್ಥರು ಪರ್ಯಾಯ ಪೀಠಾರೂಢರಾಗಿದ್ದರು (1986-87). ರಾಮನಾಥ ಕೋವಿಂದರು ಉಡುಪಿಗೆ 2018ರ ಡಿ. 27ರಂದು ಬಂದಾಗಲೂ ಶ್ರೀ ವಿದ್ಯಾಮಾನ್ಯರ ಶಿಷ್ಯ ಶ್ರೀ ವಿದ್ಯಾಧೀಶತೀರ್ಥರು ಪರ್ಯಾಯ ಸ್ವಾಮಿಗಳು. ಇವೆರಡೂ ಸಂದರ್ಭದಲ್ಲಿ ಪೇಜಾವರ ಶ್ರೀಗಳು ಉಪಸ್ಥಿತರಿದ್ದರು.
Related Articles
Advertisement
ತುರ್ತುಪರಿಸ್ಥಿತಿ ಹೋದ ಬಳಿಕ 1977ರಲ್ಲಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಇಂದಿರಾ ಗಾಂಧಿಯವರು ಸ್ಪರ್ಧಿಸಿದ್ದರು. ಕಾರ್ಕಳಕ್ಕೆ ಪ್ರಚಾರಕ್ಕೆ ಬಂದ ಇಂದಿರಾ ಗಾಂಧಿಯವರು ಕಾರ್ಕಳ ರಾಘವೇಂದ್ರ ಮಠದಲ್ಲಿ ಪೇಜಾವರ ಶ್ರೀಗಳೊಂದಿಗೆ ಮಾತುಕತೆ ನಡೆಸಿದ್ದರು. ಗೆದ್ದ ಬಳಿಕ ವಿಜಯೋತ್ಸವ ನಡೆಯುವಾಗ ಚಿಕ್ಕಮಗಳೂರಿನ ಮಾರ್ಗವಾಗಿ ಪೇಜಾವರ ಶ್ರೀಗಳು ತೆರಳುತ್ತಿದ್ದರು. ಆಗ ಇಂದಿರಾ ಅವರು ಭೇಟಿಯಾದರು. ಆಗ ದೇವರಾಜ ಅರಸು ಮುಖ್ಯಮಂತ್ರಿಗಳು. ಮಣಿಪಾಲ ಆಸ್ಪತ್ರೆಯ ಉದ್ಘಾಟನೆಗೆ ಬಂದ ಸಂದರ್ಭ ಇಂದಿರಾ ಗಾಂಧಿಯವರು ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ದರು.
ಆಗ ಅದಮಾರು ಮಠದ ಶ್ರೀ ವಿಬುಧೇಶತೀರ್ಥ ಶ್ರೀಪಾದರ ಪರ್ಯಾಯ (1972-73) ನಡೆಯುತ್ತಿತ್ತು. ತುರ್ತು ಪರಿಸ್ಥಿತಿ ಹೋಗಿ ಮೊರಾರ್ಜಿ ದೇಸಾಯಿ ಪ್ರಧಾನಿಯಾಗಿದ್ದಾಗ ಇಂದಿರಾ ಗಾಂಧಿಯವರು ಪೇಜಾವರ ಶ್ರೀಗಳವರನ್ನು ಚೆನ್ನೈಯಲ್ಲಿ ಭೇಟಿ ಯಾಗಿ ಹಿಂದೆ ತಾನು ಹೇಳಿದ ಸರ್ವಾಧಿಕಾರ- ಪ್ರಜಾ ಪ್ರಭುತ್ವದ ವಾದವನ್ನು ಮತ್ತೆ ನೆನಪಿಸಿಕೊಂಡರು. “ಹಿಂದೂ ಸಮಾಜಕ್ಕೆ ತೊಂದರೆಯಾದರೆ ನಾನು ಸದಾ ನಿಮ್ಮೊಂದಿಗೆ ಇರುತ್ತೇನೆ’ ಎಂದು ಇಂದಿರಾ ಹೇಳಿದ್ದನ್ನು ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಸದಾ ಭಾಷಣದಲ್ಲಿ ನೆನಪಿಸಿಕೊಳ್ಳುತ್ತಿದ್ದರು.
ಪಿ.ವಿ. ನರಸಿಂಹ ರಾವ್, ವಿ.ಪಿ. ಸಿಂಗ್, ಎಚ್.ಡಿ. ದೇವೇಗೌಡ, ಮನಮೋಹನ್ ಸಿಂಗ್ ಪ್ರಧಾನಿ ಯಾಗಿದ್ದಾಗ ಅಯೋಧ್ಯೆ ರಾಮಮಂದಿರ ವಿವಾದದ ಕುರಿತು ಸಂಧಾನಸಭೆಗಳಲ್ಲಿ ಪೇಜಾವರ ಶ್ರೀಗಳು ಮುಂಚೂಣಿ ಪಾತ್ರ ವಹಿಸುತ್ತಿದ್ದರು. ದೇವೇಗೌಡರು ಕರ್ನಾಟಕದವರಾದ ಕಾರಣ ಅವರ ನಿಕಟ ಸಂಪರ್ಕವಿತ್ತು ಮತ್ತು ಅನೇಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದರು. 2000-01 ರಲ್ಲಿ ನಡೆದ ನಾಲ್ಕನೆಯ ಪರ್ಯಾಯ ಅವಧಿ ಪೇಜಾವರ ಶ್ರೀಗಳು ಶ್ರೀಕೃಷ್ಣ ಮಠದಲ್ಲಿ ನಿರ್ಮಿಸಿದ ಸುಸಜ್ಜಿತ ರಾಜಾಂಗಣವನ್ನು ಪ್ರಧಾನಿ ಅಟಲ್‌ಬಿಹಾರಿ ವಾಜಪೇಯಿ ಉದ್ಘಾಟಿಸಿದ್ದರು.
ಪ್ರಧಾನಿ ನರೇಂದ್ರ ಮೋದಿಯವರ ಜತೆಗೂ ಪೇಜಾವರ ಶ್ರೀಗಳ ಆತ್ಮೀಯ ಸಂಪರ್ಕವಿತ್ತು. ಎರಡೂ ಬಾರಿ ಮೋದಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವಾಗಲೂ ವಿಶೇಷ ಆಹ್ವಾನದ ಮೇರೆಗೆ ಪೇಜಾವರ ಶ್ರೀಗಳು ಉಪಸ್ಥಿತರಿದ್ದರು. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ನಾಯಕರು ಶ್ರೀಗಳವರನ್ನು ಸಂಪರ್ಕಿಸಿ ಆಗಾಗ್ಗೆ ಸಲಹೆಗಳನ್ನು ಪಡೆಯುತ್ತಿದ್ದರು. ಇಷ್ಟೆಲ್ಲ ಪ್ರಭಾವಿ ನಾಯಕರ ಸಂಪರ್ಕವಿದ್ದರೂ ಜನಸಾಮಾನ್ಯರು ಅವರನ್ನು ಅತಿ ಸುಲಭದಲ್ಲಿ ಮಾತನಾಡಿಸಿ ಪ್ರಸಾದ ಮಂತ್ರಾಕ್ಷತೆಯನ್ನು ಪಡೆಯಬಹುದಾಗಿತ್ತು.