ಮೂಲತಃ ರಂಗಭೂಮಿ ಹಿನ್ನೆಲೆಯಿಂದ ಬಂದಿದ್ದರಿಂದ ಬೇರೆ ಬೇರೆ ಪಾತ್ರಗಳಿಗೆ ಒಗ್ಗಿಕೊಳ್ಳುವ ಬಗ್ಗೆ ತಿಳಿದಿತ್ತು. ಆದರೆ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಅಭಿನಯದ ಶೈಲಿ ಬೇರೆಯದೇ ಆಗಿರುವುದರಿಂದ, ಪಾತ್ರಗಳು ಮತ್ತು ನಿರ್ದೇಶಕರು ಬಯಸಿದಂತೆ ಅರ್ಥೈಸಿಕೊಂಡು ಪಾತ್ರವನ್ನು ನಿರ್ವಹಿಸುವುದಕ್ಕೆ ಸ್ವಲ್ಪ ಸಮಯ ಹಿಡಿಯುತ್ತದೆ. ನನ್ನ ಮೊದಲ ಚಿತ್ರ ಸೋತರೂ, ಅದು ಸಾಕಷ್ಟು ಅನುಭವ – ಪಾಠಗಳನ್ನು ಕಲಿಸಿದೆ. ಅದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು “ಸುರ್ ಸುರ್ ಬತ್ತಿ’ ಚಿತ್ರದಲ್ಲಿ ಅಭಿನಯಿಸಿದ್ದೇನೆ ಎನ್ನುತ್ತಾರೆ ಆರ್ವ.
Advertisement
ಇನ್ನು ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡುವ ಆರ್ವ, “ಒಬ್ಬ ಮುಗ್ಧ ಹುಡುಗನ ಪಾತ್ರ. ನಾನು ಈಗ ಹೇಗಿದ್ದೇನೋ ಹಾಗೆಯೇ ಪಾತ್ರವಿದೆ. ತಾಯಿ-ಮಗನ ನಡುವೆ ಬಾಂಧವ್ಯದ ಕಥೆ ಚಿತ್ರದಲ್ಲಿದೆ. ನಾವೊಂದು ಬಯಸಿದರೆ, ದೈವವೊಂದು ಬಗೆದಿತ್ತು ಎಂಬ ಮಾತೇ ಚಿತ್ರದ ಸಂದೇಶ. ನನ್ನ ತಾಯಿಯ ಪಾತ್ರವನ್ನು ಹಿರಿಯ ನಟಿ ಊವರ್ಶಿ ನಿರ್ವಹಿಸಿದ್ದಾರೆ. ಸಾಧುಕೋಕಿಲ ಅವರೊಂದಿಗೆ ಅಭಿನಯಿಸುವ ಅವಕಾಶ ಈ ಚಿತ್ರದಲ್ಲಿ ಸಿಕ್ಕಿದೆ. ನಿರ್ದೇಶಕ ಮುಗಿಲ್ ಯಾವುದೇ ಡಬಲ್ ಮೀನಿಂಗ್ ಇಲ್ಲದೆ, ಸರಳ ಕಥೆಯೊಂದನ್ನು ಇಟ್ಟುಕೊಂಡು, ಅಚ್ಚುಕಟ್ಟಾಗಿ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗಲಿದೆ’ ಎಂಬ ಭರವಸೆಯ ಮಾತುಗಳನ್ನಾಡುತ್ತಾರೆ.