Advertisement
ಸೋದರ ಮಾವನನ್ನು ಮದುವೆಯಾದ ನಂತರ, ಆಕೆ ಮತ್ತೆ ಹೊಸ ಕನಸು ಕಾಣತೊಡಗಿದಳು. ಆದರೆ, ಕೆಲವೇ ದಿನಗಳಲ್ಲಿ ಸುಂದರ ಬದುಕಿನ ನಿರೀಕ್ಷೆಯೂ ಹುಸಿಯಾಯ್ತು. ಪತಿಯ ಮನೆಯಲ್ಲೂ ಬಡತನ. ಕೂಲಿ ಕೆಲಸಕ್ಕೆ ಹೋಗುವ ಅನಿವಾರ್ಯ. ಇದ್ದ ಇಬ್ಬರು ಗಂಡು ಮಕ್ಕಳೊಂದಿಗೆ ಸಾಯುವುದೊಂದೇ ಆಕೆಯ ಮುಂದಿದ್ದ ಸುಲಭದ ದಾರಿ. ಜೀವ ಕಳೆದುಕೊಳ್ಳಲು ಹೊರಟವಳನ್ನು ತಡೆದು ನಿಲ್ಲಿಸಿದ್ದು, ಕಲಿತ ವಿದ್ಯೆಯಿಂದ ಬದುಕು ರೂಪಿಸಿಕೋ ಎಂಬ ತಂದೆಯ ಮಾತುಗಳು. ಮನೆಯಲ್ಲಿಯೇ ಮಹಿಳೆಯರಿಗೆ ಟೇಲರಿಂಗ್ ತರಬೇತಿ ನೀಡುವ ನಿರ್ಧಾರ ಮಾಡಿದ್ದು ಆಗಲೇ.
1997ಲ್ಲಿ ಮದುವೆಯಾದ ಶಶಿಕಲಾ, ಗಂಡನ ಮನೆಯಲ್ಲಿನ ಬಡತನ ಮತ್ತು ಕಷ್ಟಗಳ ನಿವಾರಣೆಗಾಗಿ ಪತಿಯ ಜತೆಗೆ ದುಡಿಯಲು ನಿರ್ಧರಿಸಿದರು. ಮೊದ ಮೊದಲು ಹೊಲದ ಕೂಲಿ ಕೆಲಸಕ್ಕೆ ಹೋದರೂ, ವರ್ಷವಿಡೀ ಕೆಲಸ ಸಿಗುವ ಭರವಸೆ ಇರಲಿಲ್ಲ. ಟೇಲರಿಂಗ್ ಗೊತ್ತಿತ್ತಲ್ಲ; ಅದೇ ನೆಪದಲ್ಲಿ ಮನೆಯಲ್ಲಿಯೇ ಬಟ್ಟೆ ಹೊಲಿಯಲು ನಿರ್ಧರಿಸಿದರು. ಮುಂದೆ, ಕೂಡಿಸಿಟ್ಟಿದ್ದ ಹಣದಿಂದಲೇ ಹೊಲಿಗೆ ಯಂತ್ರ ಖರೀದಿಸಿ, ಹೊಲಿಗೆ ತರಬೇತಿ ಕೇಂದ್ರವನ್ನೂ ತೆರೆದರು. 2001ರಿಂದ ಶುರುವಾದ ಈ ತರಬೇತಿಗೆ, ಮುಳಗುಂದ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಿಂದಲೂ ಮಹಿಳೆಯರು ಬರುತ್ತಾರೆ. ಪ್ರತಿ ಬ್ಯಾಚ್‌ನಲ್ಲಿ ಒಬ್ಬ ಪ್ರತಿಭಾವಂತೆಗೆ ಉಚಿತ ತರಬೇತಿ ನೀಡುವುದು ಇವರ ವೈಶಿಷ್ಟ.
Related Articles
ವರ್ಷದ 12 ತಿಂಗಳೂ ಹೊಲಿಗೆ ತರಬೇತಿ ನಡೆಸುವ ಶಶಿಕಲಾ, ಈವರೆಗೆ ಸುಮಾರು 10 ಸಾವಿರ ಮಹಿಳೆಯರಿಗೆ ಹೊಲಿಗೆ ಕಲಿಸಿದ್ದಾರೆ. ಸದ್ಯ ಆರು ಹೊಲಿಗೆ ಯಂತ್ರಗಳಿದ್ದು, ಮೂರು ಮತ್ತು ಆರು ತಿಂಗಳ ಅವಧಿಗೆ ಒಂದು ಬ್ಯಾಚ್‌ನಂತೆ ಟೇಲರಿಂಗ್ ತರಬೇತಿ ನೀಡುತ್ತಾರೆ. ಒಂದು ಬ್ಯಾಚ್‌ನಲ್ಲಿ 20-30 ಜನ ಇರುತ್ತಾರೆ. ಇವರಲ್ಲಿ ಕಲಿತ ಮಹಿಳೆಯರಲ್ಲಿ ನೂರಕ್ಕೂ ಹೆಚ್ಚು ಜನ ಟೇಲರಿಂಗ್ ವೃತ್ತಿ ಮಾಡುತ್ತ ಆರ್ಥಿಕವಾಗಿ ಸ್ವಾವಲಂಬಿಗಳಾಗಿದ್ದಾರೆ. ಕಲಿಕೆಗೆ ಬೇಕಾದ ಸಾಮಗ್ರಿಗಳನ್ನು ಇವರೇ ಒದಗಿಸುತ್ತಾರೆ. ಇವರ ಮಾಸಿಕ ಸಂಪಾದನೆ 8-10 ಸಾವಿರ ರೂಪಾಯಿ.
Advertisement
ಮನೆ ನಿರ್ವಹಣೆಯಲ್ಲೂ ಸೈಶಶಿಕಲಾರ ಪತಿ, ಸಹಕಾರಿ ಸಂಘದಲ್ಲಿ ಕಾರ್ಯದರ್ಶಿಯಾಗಿದ್ದಾರೆ. ಮನೆ ನಿರ್ವಹಣೆಯಲ್ಲಿ ಶಶಿಕಲಾ ಅವರ ದುಡಿಮೆ ಸಂಜೀವಿನಿಯಾಗಿದೆ. ಇಬ್ಬರು ಗಂಡು ಮಕ್ಕಳ ವಿದ್ಯಾಭ್ಯಾಸ, ಹೊಸ ಮನೆ ನಿರ್ಮಾಣ, ಮಗನಿಗೆ ಸ್ವಂತ ಉದ್ಯೋಗಕ್ಕೆ (ಫೋಟೋ ಸ್ಟುಡಿಯೋ) ಧನ ಸಹಾಯ ಮಾಡಿರುವ ಶಶಿಕಲಾ ಅವರು ತಮ್ಮ ಕುಟುಂಬದ ಆಧಾರ ಸ್ತಂಭವಾಗಿದ್ದಾರೆ. ಪ್ರಾಣಿಪ್ರಿಯೆ
ಶಶಿಕಲಾರಿಗೆ ಸಾಕು ಪ್ರಾಣಿಗಳೆಂದರೆ ಪಂಚಪ್ರಾಣ. ಅವರು ಮನೆಯಲ್ಲಿ ಎಂಟು ಬೆಕ್ಕು, ಮೂವತ್ತು ಮೊಲ ಮತ್ತು ಒಂದು ನಾಯಿ ಸಾಕಿದ್ದಾರೆ. ಬಿಡುವಿನ ಸಮಯದಲ್ಲಿ ಸಾಕು ಪ್ರಾಣಿಗಳೊಂದಿಗೆ ಕಾಲ ಕಳೆಯುವುದು ಅವರ ಮೆಚ್ಚಿನ ಹವ್ಯಾಸ. “ಟೇಲರಿಂಗ್ ತರಬೇತಿ ಖುಷಿ ಕೊಡುತ್ತದೆ. ಮಹಿಳೆಯರ ಸ್ವಉದ್ಯೋಗಕ್ಕೆ ಸಹಾಯ ಮಾಡುತ್ತಿದ್ದೇನೆಂಬ ತೃಪ್ತಿ ಇದೆ. ಮಹಿಳೆಯರು ಸ್ವಾವಲಂಬಿಗಳಾಗಬೇಕು. ನಾನು ಅನುಭವಿಸಿದ ಕಷ್ಟ ಇನ್ನೊಬ್ಬರು ಎದುರಿಸಬಾರದು’
– ಶಶಿಕಲಾ ವೀರಣ್ಣ ಬಳ್ಳಾರಿ ಶರಣು ಹುಬ್ಬಳ್ಳಿ