Advertisement

ಸಲ್ಮಾನ್‌ ಖಾನ್‌ ಟು ಸಿಧು ಮೂಸೆವಾಲ: ಗುಂಡಿನ ದಾಳಿಗೆ ಬೆದರಿದ ಸೆಲೆಬ್ರಿಟಿಗಳಿವರು

11:24 AM Apr 15, 2024 | ಸುಹಾನ್ ಶೇಕ್ |

ಬಣ್ಣದ ಲೋಕ ಅಂದರೆ ಹಾಗೆಯೇ ಅಲ್ಲಿ ಸೆಲೆಬ್ರಿಟಿಗಳು ಸದಾ ಹಾಯಾಗಿ ತಮ್ಮ ಲೈಫ್‌ ನ್ನು ಎಂಜಾಯ್‌ ಮಾಡಿಕೊಂಡು ಇರುತ್ತಾರೆ ಅಂಥ ನಾವು ಭಾವಿಸುತ್ತೇವೆ. ಆದರೆ ಅವರ ಸೆಲೆಬ್ರಿಟಿ ಲೈಫ್‌ ಯೇ ಎಷ್ಟೋ ಬಾರಿ ಅವರಿಗೆ ಮುಳ್ಳಾಗಿ ಬಿಡುತ್ತದೆ.

Advertisement

ಹಣಕ್ಕಾಗಿ ದರೋಡೆ, ಬೆದರಿಕೆ ಹೀಗೆ ನಾನಾ ಅಪರಾಧ ಕೃತ್ಯಗಳು ಪ್ರತಿನಿತ್ಯ ನಡೆಯುತ್ತಲೇ ಇರುತ್ತದೆ. ಈ ಬೆದರಿಕೆಗಳು ಸೆಲೆಬ್ರಿಟಿಗಳಿಗೂ ನೆಮ್ಮದಿಯಿಂದ ಇರೋಕೆ ಬಿಟ್ಟಿಲ್ಲ. ಕೆಲ ಗ್ಯಾಂಗ್‌ ಸ್ಟರ್‌ ಗಳು ಹಾಗೂ ಅಪರಾಧ ಜಗತ್ತಿನಲ್ಲಿ ತೊಡಗಿಸಿಕೊಂಡವರು ಸೆಲೆಬ್ರಿಟಿಗಳ ನೆಮ್ಮದಿಯನ್ನು ಕೆಡಿಸಿ ಬಿಟ್ಟಿದ್ದಾರೆ.

ಇದಕ್ಕೆ ಇತ್ತೀಚೆಗಿನ ಉದಾಹರಣೆ ಎಂದರೆ ಅದು ನಟ ಸಲ್ಮಾನ್‌ ಖಾನ್.‌ ಸಲ್ಮಾನ್‌ ಅವರ ಮನೆಯ ಮುಂದೆ ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಸಲ್ಮಾನ್‌ ಖಾನ್‌ ಅವರ ಪ್ರಾಣಕ್ಕೆ ಅಪಾಯ ಎದುರಾದ ಪರಿಸ್ಥಿತಿ ಬಂದಿರುವುದು ಇದೇ ಮೊದಲಲ್ಲ.

ಗುಂಡಿನ ದಾಳಿಗೆ ಒಳಗಾದ ಸೆಲೆಬ್ರಿಟಿಗಳು ಹಾಗೂ ಗುಂಡಿನ ದಾಳಿಯಿಂದ ಪ್ರಾಣವನ್ನೇ ಕಳೆದುಕೊಂಡ ಬಣ್ಣದ ಲೋಕದ ಸೆಲೆಬ್ರಿಟಿಗಳು ಅನೇಕರಿದ್ದಾರೆ.

ಸಲ್ಮಾನ್‌ ಖಾನ್:‌  ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅವರ ನಿವಾಸ ಮುಂದೆ ಗುಂಡಿನ ದಾಳಿ ನಡೆಸಿದ ಕೃತ್ಯದ ಹಿಂದೆ ಕುಖ್ಯಾತ ಗ್ಯಾಂಗ್ ಸ್ಟರ್‌ ಲಾರೆನ್ಸ್‌ ಬಿಷ್ಣೋಯಿ ತಂಡದ ಕೈವಾಡ ಇರುವುದು ಗೊತ್ತಾಗಿದೆ. ಲಾರೆನ್ಸ್ ಬಿಷ್ಣೋಯ್ ಅವರ ಸಹೋದರ ಅನ್ಮೋಲ್ ಬಿಷ್ಣೋಯ್ ಕೃತ್ಯದ ಹೊಣೆ ವಹಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

Advertisement

ಲಾರೆನ್ಸ್‌ ಸಲ್ಮಾನ್‌ ಖಾನ್‌ ಅವರ ಜೀವಕ್ಕೆ ಅಪಾಯವನ್ನುಂಟು ಮಾಡುವ ಸಂಚು ರೂಪಿಸಿರುವುದು ಇದೇ ಮೊದಲಲ್ಲ. 1998ರಲ್ಲಿ ‘ಹಮ್ ಸಾಥ್ ಸಾಥ್ ಹೇ’ ಚಿತ್ರದ ಶೂಟಿಂಗ್​ಗಾಗಿ ಸಲ್ಮಾನ್​ ಖಾನ್​ ರಾಜಸ್ಥಾನದ ಜೋಧ್‌ಪುರಕ್ಕೆ ತೆರಳಿದ್ದರು.  ಆ ಸಮಯದಲ್ಲಿ ಸಲ್ಮಾನ್ ಖಾನ್ ಒಂದು ಕೃಷ್ಣ ಮೃಗವನ್ನು ಬೇಟೆಯಾಡಿದ್ದರು.   ಬಿಷ್ಣೋಯಿ ಸಮುದಾಯದವರು ಪ್ರಕೃತಿ ಆರಾಧಕರು. ಬಿಷ್ಣೋಯಿಗಳು ಕೃಷ್ಣಮೃಗವನ್ನು ತಮ್ಮ ಧಾರ್ಮಿಕ ಗುರು ಭಗವಾನ್ ಜಂಬೇಶ್ವರ ಅವರ ಪುನರ್ಜನ್ಮ ಎಂದು ಪರಿಗಣಿಸುತ್ತಾರೆ. ಹೀಗಾಗಿ, ಈ ಪ್ರಾಣಿಯನ್ನು ಕೊಲ್ಲುವುದನ್ನು ಅಥವಾ ಮರವನ್ನು ಕಡಿಯುವುದನ್ನು ಬಿಷ್ಣೋಯಿಗಳು ಎಂದಿಗೂ ಸಹಿಸುವುದಿಲ್ಲ.

ಅಂದಿನಿಂದ ಇಂದಿನವರೆಗೆ ಸಲ್ಮಾನ್‌ ಖಾನ್‌ ಅವರಿಗೆ ಅನೇಕ ಬಾರಿ ಗ್ಯಾಂಗ್ ಸ್ಟರ್‌ ಲಾರೆನ್ಸ್‌ ಇಮೇಲ್‌ ಮೂಲಕ ಬೆದರಿಕೆಯನ್ನು ಹಾಕುತ್ತಲೇ ಬಂದಿದ್ದಾರೆ. ಇತ್ತೀಚೆಗೆ ಗುಂಡಿನ ದಾಳಿ ನಡೆಸಿ, ಮತ್ತೊಮ್ಮೆ ಸಲ್ಮಾನ್‌ ಖಾನ್‌ ಎಚ್ಚರಿಕೆಯನ್ನು ನೀಡಿದ್ದಾರೆ.

ಗಿಪ್ಪಿ ಗ್ರೇವಾಲ್‌: ಪಂಜಾಬಿ ಗಾಯಕ ಹಾಗೂ ನಟ ಗಿಪ್ಪಿ ಗ್ರೇವಾಲ್‌ ಅವರ ಮೇಲೂ ಗ್ಯಾಂಗ್‌ ಸ್ಟರ್‌ ತಂಡದ ಸದಸ್ಯರು ಗುಂಡಿನ ದಾಳಿ ನಡೆಸಿದ್ದಾರೆ. 2023 ನವೆಂಬರ್‌ ನಲ್ಲಿ ಕೆನಡಾದ ವಾಂಕೋವರ್‌ ನಗರದ ವೈಟ್ ರಾಕ್ ಎಂಬ ಪ್ರದೇಶದಲ್ಲಿರುವ ಗಿಪ್ಪಿ ಗ್ರೇವಾಲ್‌ನ ನಿವಾಸದ ಮುಂದೆ ಈ ಗುಂಡಿನ ದಾಳಿ ನಡೆದಿತ್ತು.

ಈ ಕೃತ್ಯದ ಹೊಣೆಯನ್ನೂ ಕುಖ್ಯಾತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಹೊತ್ತಿಕೊಂಡಿರುವುದಾಗಿ ಆತನೇ ತನ್ನ ಫೇಸ್‌ ಬುಕ್‌ ಖಾತೆಯಲ್ಲಿ ಹಾಕಿಕೊಂಡಿದ್ದ. ಇದೇ ವೇಳೆ ಲಾರೆನ್ಸ್‌ ಗಿಪ್ಪಿ ಅವರಿಗೆ ನೇರವಾಗಿ ಬೆದರಿಕೆ ಹಾಕಿದ್ದ.

ರಾಕೇಶ್‌ ರೋಶನ್:‌ ಬಾಲಿವುಡ್‌ ಹಿರಿಯ ನಿರ್ದೇಶಕ, ಹೃತಿಕ್‌ ರೋಶನ್‌ ಅವರ ತಂದೆ ರಾಕೇಶ್‌ ರೋಶನ್‌ ಅವರ ಗುಂಡಿನ ದಾಳಿ ನಡೆಸಿ ಹಣಕ್ಕಾಗಿ ಬೇಡಿಕೆಯಿಟ್ಟಿದ್ದ ಘಟನೆ 2000 ಇಸವಿಯಲ್ಲಿ ನಡೆದಿತ್ತು.

‘ಕಹೋ ನಾ ಪ್ಯಾರ್ ಹೈ’  ಸಿನಿಮಾದ ಅಮೋಘ ಯಶಸ್ಸಿನ ಬಳಿಕ ಕೋಟ್ಯಧಿಪತಿಯಾದ ರಾಕೇಶ್‌ ರೋಶನ್‌ 2000 ಇಸವಿಯಲ್ಲಿ ಸಾಂಟಾ ಕ್ರೂಜ್ ಕಚೇರಿಯಲ್ಲಿದ್ದಾಗ ಸಂಜೆ 6:30 ರ ವೇಳೆಗೆ ಸಶಸ್ತ್ರಗಳನ್ನು ಹೊಂದಿದ್ದ ವ್ಯಕ್ತಿಗಳು ಹಣದ ಬೇಡಿಕೆಯಿಟ್ಟು 6 ಸುತ್ತ ಗುಂಡನ್ನು ಹಾರಿಸಿದ್ದರು. ಈ ಘಟನೆಯಲ್ಲಿ ರಾಕೇಶ್‌ ಅವರು ಗಾಯಗೊಂಡಿದ್ದರು. ಈ ಸಂಬಂಧ 2020 ರಲ್ಲಿ ಶಾರ್ಪ್‌ ಶೂಟರ್ ಸುನಿಲ್ ವಿ ಗಾಯಕ್ವಾಡ್ ಅವರನ್ನು‌ ಥಾಣೆಯ ಕಲ್ವಾದ ಪಾರ್ಸಿಕ್ ಸರ್ಕಲ್ ಪ್ರದೇಶದಲ್ಲಿ ಬಂಧಿಸಲಾಗಿತ್ತು. ಆರೋಪಿ ಮೇಲೆ 11 ಕೊಲೆ ಪ್ರಕರಣಗಳು ದಾಖಲಾಗಿತ್ತು.

ಸಿಧು ಮೂಸೆವಾಲ: ಪಂಜಾಬಿ ಗಾಯಕ ಹಾಗೂ ಕಾಂಗ್ರೆಸ್‌ ಮುಖಂಡ ಸಿಧು ಮೂಸೆವಾಲ ಅವರ ಫ್ಯಾನ್‌ ಫಾಲೋವಿಂಗ್‌ ಅಪಾರವಿದೆ. ಇಂದಿಗೂ ಅವರ ಹಾಡುಗಳು ಇಂಟರ್‌ ನೆಟ್‌ ನಲ್ಲಿ ಸದ್ದು ಮಾಡುತ್ತವೆ.

ಹಾಡುಗಳು ವಿವಾದದಿಂದ ಸದ್ದು ಮಾಡಿದ್ದ ಮೊಸೆವಾಲನನ್ನು  2022 ರ ಮೇ 29 ರಂದು ಮಾನ್ಸಾ ಜಿಲ್ಲೆಯ ಜವಾಹರ್ಕೆ ಗ್ರಾಮದಲ್ಲಿ ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಈ ಘಟನೆ ಪಂಜಾಬ್‌ ನಲ್ಲಿ ದೊಡ್ಡ ಸಂಚಲನ ಸೃಷ್ಟಿಸಿತ್ತು.

ಈ ಪ್ರಕರಣದಲ್ಲಿ ಗ್ಯಾಂಗ್‌ ಸ್ಟರ್ ​​ಲಾರೆನ್ಸ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ಸೇರಿದಂತೆ 31 ಆರೋಪಿಗಳನ್ನು ಹೆಸರು ಕೇಳಿ ಬಂದಿದ್ದು, ಇದುವರೆಗೆ 25 ಮಂದಿಯನ್ನು ಬಂಧಿಸಲಾಗಿದೆ.

ಗುಲ್ಶನ್ ಕುಮಾರ್: ಟಿ-ಸೀರೀಸ್‌ನ ಸಂಸ್ಥಾಪಕ ಗುಲ್ಶನ್ ಕುಮಾರ್ ಅವರ ಹತ್ಯೆ ಪ್ರಕರಣ 90 ದಶಕದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದ ಪ್ರಕರಣಗಳಲ್ಲಿ ಒಂದಾಗಿತ್ತು. ಆಗಸ್ಟ್ 12, 1997 ರಂದು ಮುಂಬೈನ ಜುಹು ಪ್ರದೇಶದಲ್ಲಿ ಕೊಲ್ಲಲಾಯಿತು. ಗುಂಡಿನ ದಾಳಿ ನಡೆಸಿ ಅವರನ್ನು ಹತ್ಯೆ ಮಾಡಲಾಗಿತ್ತು. ದೇವಸ್ಥಾನದಿಂದ ಹೊರಗೆ ಬರುವಾಗ ಗುಲ್ಶನ್ ಕುಮಾರ್ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಮೂವರು ದುಷ್ಕರ್ಮಿಗಳು 16 ಗುಂಡು ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದರು.

ಈ ಪ್ರಕರಣದಲ್ಲಿ ಗ್ಯಾಂಗ್‌ಸ್ಟರ್ ದಾವೂದ್ ಇಬ್ರಾಹಿಂ ಸಹಾಯಕನಾದ ಅಬ್ದುಲ್ ರೌಫ್ ಮರ್ಚೆಂಟ್ ಗೆ 1997 ರ ಗುಲ್ಶನ್ ಕುಮಾರ್ ಹತ್ಯೆ ಪ್ರಕರಣದಲ್ಲಿ 2002ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. 2021 ರಲ್ಲಿ ಬಾಂಬೆ ಹೈಕೋರ್ಟ್ ಜೀವಾವಧಿ ಶಿಕ್ಷೆಯನ್ನು ಎತ್ತಿ ಹಿಡಿದಿತ್ತು.

ಬಂಟಿ ಬೈನ್ಸ್:  2024 ರ ಫೆ.27 ರಂದು ಪಂಜಾಬಿನ ಖ್ಯಾತ ಸಂಗೀತ ಸಂಯೋಜಕ ಬಂಟಿ ಬೈನ್ಸ್ ಅವರ ಮೇಲೆ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದರು.

ಬಂಟಿ ಬೈನ್ಸ್ ಮೊಹಾಲಿ ರೆಸ್ಟೋರೆಂಟ್‌ನಲ್ಲಿದ್ದಾಗ ಈ ಘಟನೆ ನಡೆದಿತ್ತು.ಅಪರಿಚಿತ ದುಷ್ಕರ್ಮಿಗಳು ಬೈನ್ಸ್ ಮೇಲೆ ಗುಂಡಿನ ದಾಳಿ ನಡೆಸಿದ್ದು, ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದರು. “1ಕೋಟಿ ರೂ. ನೀಡುವಂತೆ ವ್ಯಕ್ತಿಯಿಬ್ಬರಿಂದ ಬೆದರಿಕೆ ಕರೆ ಬಂದಿತ್ತು. ಬೇಡಿಕೆ ಈಡೇರಿಸಲು ವಿಫಲವಾದರೆ ಸಾವಿಗೆ ಕಾರಣವಾಗುತ್ತದೆ ಎಂದು ಎಚ್ಚರಿಸಿದ್ದರು.

ಕೆನಡಾದಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಎನ್ನಲಾದ ಕುಖ್ಯಾತ ಗ್ಯಾಂಗ್‌ ಸ್ಟರ್ ಲಕ್ಕಿ ಪಾಟಿಯಲ್ ಹೆಸರಿನಲ್ಲಿ ಬೆದರಿಕೆ ಹಾಕಲಾಗಿತ್ತು. ಪಂಜಾಬ್‌ನಾದ್ಯಂತ ವಿವಿಧ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಲಾರೆನ್ಸ್ ಬಿಷ್ಣೋಯ್ ಮತ್ತು ಬಾಂಬಿಹಾ ಗ್ಯಾಂಗ್‌ಗಳೊಂದಿಗಿನ ಈತ ಸಂಪರ್ಕ ಹೊಂದಿದ್ದಾನೆ  ಎಂದು ಹೇಳಲಾಗಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next