Advertisement

ಪ್ರಧಾನಿ ಮೋದಿಯಿಂದ ದೇಶದ ಗೌರವ ಉತ್ತುಂಗಕ್ಕೆ

04:32 PM Jun 17, 2022 | Team Udayavani |

ಚಾಮರಾಜನಗರ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ದೇಶದ ಕೀರ್ತಿ ಹಿಮಾಲಯದಷ್ಟು ಎತ್ತರಕ್ಕೇರಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಹಾಲಪ್ಪ ಆಚಾರ್‌ ಹೇಳಿದರು.

Advertisement

ನಗರದ ನಿಜಗುಣ ರೆಸಿಡೆನ್ಸಿಯಲ್ಲಿ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದಿಂದ ಆಯೋಜಿಸಿರುವ ಮೂರು ದಿನಗಳ ಪ್ರಶಿಕ್ಷಣ ವರ್ಗ ಶಿಬಿರ ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ಮೋದಿಯವರು ಅಧಿಕಾರಕ್ಕೆ ಬಂದ ನಂತರ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಭಾರತವನ್ನು ಹಿಂದೆ ಹಾವಾಡಿಗರ ದೇಶ ಎಂದು ಕರೆಯುತ್ತಿದ್ದರು. ಮೋದಿಯವರು ಪ್ರಧಾನಿಯಾದ ಬಳಿಕ ದೇಶದ ಗೌರವ ಉತ್ತುಂಗಕ್ಕೇರಿದೆ ಎಂದು ವಿವರಿಸಿದರು.

ಗೌರವಧನ ಏರಿಕೆ:ವಿದೇಶಗಳಲ್ಲಿ ನರೇಂದ್ರ ಮೋದಿ ಅವರನ್ನು ಕೆಂಪು ಹಾಸು ಹಾಸಿ ಸ್ವಾಗತಿಸಿ ಗೌರವಿಸುತ್ತಿದ್ದಾರೆ. ಅವರು ಉಜ್ವಲ, ಆಯುಷ್ಮಾನ್‌ ಭಾರತ್‌, ಜಲಜೀವನ್‌ ಮಿಷನ್‌ ಸೇರಿ ಅನೇಕ ಯೋಜನೆಗಳನ್ನು ಜಾರಿಗೆ ತಂದು, ದೇಶದ ಜನರ ಅಭ್ಯುದಯಕ್ಕೆ ಕಾರಣರಾಗಿದ್ದಾರೆ. ರಾಜ್ಯದ 66,362 ಅಂಗನವಾಡಿ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಗೌರವ ಧನವನ್ನು ಮಾಸಿಕ 1 ಸಾವಿರ ರೂ.ಗೆ ಏರಿಕೆ ಮಾಡಲಾಗಿದೆ ಎಂದು ತಿಳಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಮಾತನಾಡಿ, ಮೂರು ದಿನಗಳ ಕಾಲ ಪ್ರಶಿಕ್ಷಣ ವರ್ಗ ನಡೆಯಲಿದೆ. ಹತ್ತಾರು ಚಿಂತನೆಗಳನ್ನು ನಿಮ್ಮ ಮುಂದೆ ಇಡುತ್ತಾರೆ. ಈ ಚಿಂತನೆಗಳನ್ನು ನಿಮ್ಮ ಸಾಮರ್ಥ್ಯದಿಂದ ಸಮಾಜಕ್ಕೆ ತೆಗೆದುಕೊಂಡು ಹೋಗಬೇಕು. ಶಿಸ್ತಿನಿಂದ ನಮ್ಮ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.

11 ಜನ ಸಚಿವೆಯರು: ಬಿಜೆಪಿಯು ವಿಚಾರ ಮತ್ತು ಸಿದ್ಧಾಂತದಲ್ಲಿ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ. ಈ ದಾರಿಗಳನ್ನು ಯಾವತ್ತೂ ಬಿಟ್ಟುಕೊಟ್ಟಿಲ್ಲ. ಹೀಗಾಗಿ ಜಗತ್ತಿನ ಅತಿ ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ. ಮಾತಿನಿಂದಾಗಲೀ ಅಧಿಕಾರದಿಂದ ಪಕ್ಷ ಬೆಳೆದಿಲ್ಲ. ಸಿದ್ಧಾಂತಗಳಿಂದ ಬೆಳೆದಿದೆ. ಭಾರತವನ್ನು ಜಗತ್ತಿನ ಮುಂದೆ ಎತ್ತರಕ್ಕೆ ಕೊಂಡೊಯ್ದಿದೆ. ನರೇಂದ್ರ ಮೋದಿ ಸರ್ಕಾರ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಿದೆ. 11 ಜನ ಸಚಿವೆಯರು ಸಂಪುಟದಲ್ಲಿದ್ದಾರೆ ಎಂದು ಹೇಳಿದರು.

Advertisement

ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾ ವಿವೇಕಾನಂದ, ಶಾಸಕ ಎನ್‌.ಮಹೇಶ್‌, ಬಿಜೆಪಿ ಜಿಲ್ಲಾಧ್ಯಕ್ಷ ಆರ್‌. ಸುಂದರ್‌, ಹಾಸನ ಜಿಲ್ಲಾ ಪ್ರಭಾರಿ ಜಿ.ನಿಜಗುಣರಾಜು, ಮಹಿಳಾ ಮೋರ್ಚಾ ಪದಾಧಿಕಾರಿಗಳಾದ ಅಕುಲಾ, ವಿಜಯಾ, ಚಂದ್ರಮ್ಮ, ಶಿಲ್ಪಾ, ಲಲಿತಾ, ಶೋಭಾ, ಅಶ್ವಿ‌ನಿ ಮತ್ತಿತರರು ಉಪಸ್ಥಿತರಿದ್ದರು.

ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ಅಲ್ಲ
ಚಾಮರಾಜನಗರ: ರಾಜ್ಯದಲ್ಲಿ ನಡೆದ ವಿಧಾನ ಪರಿಷತ್‌ ಚುನಾವಣೆಯ ಫ‌ಲಿತಾಂಶ ಮುಂಬರುವ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ಅಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅಭಿಪ್ರಾಯಪಟ್ಟರು. ನಗರಕ್ಕೆ ಗುರುವಾರ ಭೇಟಿ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಮತಗಳು ಹಾಗೇ ಇವೆ. ಮೊದಲಿದ್ದ ಎರಡು ಸ್ಥಾನಗಳನ್ನು ಪಕ್ಷ ಉಳಿಸಿಕೊಂಡಿದೆ. ಜೆಡಿಎಸ್‌ ಮತಗಳು ಸಹ ಬಿಜೆಪಿಗೆ ಬಂದಿವೆ ಎಂದು ವಿವರಿಸಿದರು.

ಕಾಂಗ್ರೆಸ್‌ ಪಕ್ಷಕ್ಕೆ ಸಂವಿಧಾನ, ಕಾನೂನಿನ ಮೇಲೆ ನಂಬಿಕೆ ಇಲ್ಲ. ಕಾನೂನಿನ ಆಧಾರದಲ್ಲಿ ಇ.ಡಿ ವಿಚಾರ ನಡೆಸುತ್ತಿದೆ. ಹಿಂದೆ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ವಿರುದ್ಧವೂ ಇಡಿ ತನಿಖೆ ಮಾಡಿತ್ತು. ಆಗ ಯಾರೂ ಹೋರಾಟ ಮಾಡಿರಲಿಲ್ಲ. ವಿಚಾರಣೆ ಮಾಡುವುದು ಕಾನೂನು ಬದ್ಧವಾಗಿದೆ ಎಂದರು. ಕಾಂಗ್ರೆಸ್‌ ಬೇರೆ ಬೇರೆ ಕಾರಣಗಳಿಗೆ ಹೋರಾಟ ಮಾಡುತ್ತಿದೆ. ತುರ್ತು ಪರಿಸ್ಥಿತಿ ಹೇರಿ ದೇಶದಲ್ಲಿ ಪ್ರಜಾಪ್ರಭುತ್ವ ಕಗ್ಗೊಲೆ ಮಾಡಿದ್ದು ಕಾಂಗ್ರೆಸ್‌. ಕಾಂಗ್ರೆಸ್‌ ಪ್ರತಿಪಕ್ಷವಾಗಲು ನಾಲಾಯಕ್‌ ಆಗಿದೆ. ದೇಶದಲ್ಲಿ ಜನರು ಕಾಂಗ್ರೆಸ್‌ ಅನ್ನು ತಿರಸ್ಕರಿಸುತ್ತಿದ್ದಾರೆ. ಆ ಪಕ್ಷಕ್ಕೆ ಕೇಡುಗಾಲ ಬಂದಿದೆ ಎಂದು ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next