Advertisement

ರಾಜಕೀಯ ಸ್ಥಿತ್ಯಂತರದಿಂದ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ

12:50 AM Jul 06, 2019 | mahesh |

ಬೆಂಗಳೂರು: ಕರ್ನಾಟಕವು ನವ ಚೈತನ್ಯದಿಂದ ಮುನ್ನುಗ್ಗುತ್ತಿದ್ದು ಮಾನವೀಯ ಅಂತಃಕರಣ ಮತ್ತು ಜನಪರ ಕಾಳಜಿ ಆಡಳಿತ ರಂಗದಲ್ಲಿ ವ್ಯಕ್ತವಾಗುತ್ತಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

Advertisement

ಅಮೆರಿಕ ಪ್ರವಾಸದಲ್ಲಿರುವ ಅವರು ನ್ಯೂಜೆರ್ಸಿಯಲ್ಲಿ ಒಕ್ಕಲಿಗರ ಪರಿಷತ್‌ ಸಮಾವೇಶ ಉದ್ಘಾಟಿಸಿ ಮಾತನಾಡಿ, ರಾಜಕೀಯ ಸ್ಥಿತ್ಯಂತರಗಳ ಪರಿಣಾಮವಾಗಿ ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಅನೇಕ ಅಪಸ್ವರಗಳ ನಡುವೆಯೂ ಗಟ್ಟಿಯಾದ ಸೈದ್ಧಾಂತಿಕ ತಳಹದಿಯ ಮೇಲೆ ಜನಹಿತ ಸಾಧಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ ಎಂದು ತಿಳಿಸಿದರು.

ರಾಜ್ಯದ ಆಡಳಿತ ಹೊಣೆಗಾರಿಕೆ ವಹಿಸಿಕೊಂಡಾಗ ನಮ್ಮ ಆದ್ಯತೆ ಕೃಷಿ ವಲಯಕ್ಕೆ ಬಲ ತುಂಬುವುದು, ಶಿಕ್ಷಣ ಕ್ಷೇತ್ರವನ್ನು ಬಲಪಡಿಸುವುದು, ಆರೋಗ್ಯ ವಲಯಕ್ಕೆ ಪುನಶ್ಚೇತನ ನೀಡುವುದು ಮತ್ತು ಮೂಲ ಸೌಲಭ್ಯಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸುವುದಾಗಿತ್ತು.

ನಮ್ಮ ಆರ್ಥಿಕತೆಯ ಬೆನ್ನುಲುಬಾದ ಕೃಷಿ ವಲಯ ಸಾಲದ ಹೊರೆಯಿಂದ ಬಳಲುತ್ತಿದ್ದಾಗ ಕೃಷಿಕರ ನೆರವಿಗೆ ಧಾವಿಸಲೇಬೇಕು ಎಂಬುದು ನಮ್ಮ ನಿಲುವಾಗಿತ್ತು. ಅದರಂತೆ ರೈತರು ಮಾಡಿದ ಸಾಲದ ಹೊರೆ ತಗ್ಗಿಸಲು ಕ್ರಮ ಕೈಗೊಂಡೆವು. ನಾಲ್ಕು ವರ್ಷದಲ್ಲಿ ಸಾಧಿಸಬಹುದು ಎಂದು ಅಂದುಕೊಂಡಿದ್ದರೂ ರಾಜ್ಯದ ಆರ್ಥಿಕ ತಜ್ಞರ ಜಾಣ್ಮೆಯ ಸಲಹೆ ಮತ್ತು ಸರ್ಕಾರದ ಇಚ್ಛಾಶಕ್ತಿಯಿಂದ ಒಂದೇ ವರ್ಷದಲ್ಲಿ ಬೃಹತ್‌ ಹೊಣೆಗಾರಿಕೆ ಕಾರ್ಯರೂಪಕ್ಕೆ ತಂದಿದ್ದೇವೆ ಎಂದು ಹೇಳಿದರು.

ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮದ ವ್ಯಾಪ್ತಿಯ ಒಳಗೇ ಈ ಜವಾಬ್ದಾರಿ ನಿರ್ವಹಿಸಿದ್ದು ನಮ್ಮ ಹೆಗ್ಗಳಿಕೆ. ಇದೀಗ ನಮ್ಮ ಈ ಕ್ರಮ ರಾಷ್ಟ್ರದ ಇತರ ರಾಜ್ಯಗಳಿಗೂ ಮಾದರಿ ಎಂದು ತಿಳಿಸಿದರು.

Advertisement

ಕರ್ನಾಟಕದಲ್ಲಿ ಇಸ್ರೆಲ್ ಮಾದರಿಯ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಕುರಿತು ಅನೇಕ ಕ್ರಮಗಳನ್ನು ಕೈಗೊಂಡಿದ್ದೇನೆ ಎಂದು ತಿಳಿಸಿದರು. ಶಿಕ್ಷಣ ಕ್ಷೇತ್ರದಲ್ಲಿ ನಾವಿರಿಸಿರುವ ಪಾಸಿಟಿವ್‌ ಪ್ರಯೋಗಾತ್ಮಕ ಹೆಜ್ಜೆಗಳು ಶಿಕ್ಷಣ ವಲಯದಲ್ಲಿ ಸಂಚಲನ ಮೂಡಿಸುತ್ತಿವೆ. ರಾಜ್ಯದಲ್ಲಿ ಶಿಕ್ಷಣ ಪಡೆದು ಇಂಗ್ಲಿಷ್‌ ಕಲಿತು ಉತ್ತಮ ಅವಕಾಶ ಅರಸಿ ಬಂದು ಇಲ್ಲಿ ನೀವು ಯಶಸ್ವಿಯಾಗಿದ್ದೀರಿ. ಈ ನಿಮ್ಮ ಉದಾಹರಣೆ ಮುಂದಿಟ್ಟುಕೊಂಡು ಸರ್ಕಾರಿ ಶಾಲೆಗಳಲ್ಲಿ ಒಂದೇ ತರಗತಿಯಿಂದಲೆ ಇಂಗ್ಲೀಷ್‌ ಮಾಧ್ಯಮದಲ್ಲಿ ಶಿಕ್ಷಣ ಒದಗಿಸುವ ನಿರ್ಧಾರ ಮಾಡಿದ್ದೇವೆ. ಈಗಾಗಲೇ ಒಂದು ಸಾವಿರ ಶಾಲೆಗಳಲ್ಲಿ ಈ ಕ್ರಮ ಜಾರಿ ಮಾಡಿದ್ದೇವೆ. ನಮ್ಮ ಮಕ್ಕಳಿಗೂ ಜಾಗತಿಕ ಮಟ್ಟದ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ 276 ಪಬ್ಲಿಕ್‌ ಶಾಲೆ ಆರಂಭಿಸಿದ್ದೇವೆ. ಈ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಲು ಪೋಷಕರು ತೋರುತ್ತಿರುವ ಉತ್ಸಾಹ ನಮ್ಮ ನಿರ್ಧಾರ ಸರಿಯಾದ ನಿಟ್ಟಿನಲ್ಲಿದೆ ಎಂಬುದನ್ನು ಬಿಂಬಿಸುತ್ತದೆ ಎಂದು ಹೇಳಿದರು. ಕರ್ನಾಟಕದಲ್ಲಿ ಪ್ರವಾಸೋದ್ಯಮ, ಶಿಕ್ಷಣ, ಆರೋಗ್ಯ, ಸಾವಯವ ಕೃಷಿ ಮೊದಲಾದ ಕ್ಷೇತ್ರಗಳಲ್ಲಿ ವಿಪುಲ ಅವಕಾಶಗಳಿವೆ. ಕರ್ನಾಟಕಕ್ಕೆ ನಿಮ್ಮ ಅನುಭವ, ಬುದ್ಧಿವಂತಿಕೆ ಹಾಗು ಸಾಮರ್ಥ್ಯದ ನೆರವು ಹರಿದು ಬರಲಿ, ನಿಮ್ಮೊಂದಿಗೆ ನಾವಿದ್ದೇವೆ. ಸುಂದರ- ಸಮೃದ್ಧ-ಸಬಲ ಕರ್ನಾಟಕ ಕಟ್ಟೋಣ ಎಂದು ತಿಳಿಸಿದರು.

ಅಮೆರಿಕೆಯ ಕನ್ನಡ ಚೇತನಗಳನ್ನು ಒಂದು ಕೊಂಡಿಯಲ್ಲಿ ಬೆಸೆವ ಚಿಂತನೆ ಮಾಡಿ ಮುಂದೆ ಸಾಗಿರುವ ಒಕ್ಕಲಿಗರ ಪರಿಷತ್‌, ಕನ್ನಡಿಗರ ಸಮ್ಮೇಳನ ನಡೆಸುತ್ತಿರುವುದು ಸಂತೋಷದ ವಿಷಯ. ಅಳ್ಳಾಲಸಂದ್ರವಿರಲಿ-ಅಲಬಾಮಾ ಇರಲಿ, ಕರಿಘಟ್ಟವಿರಲಿ-ಕ್ಯಾಲಿಫೋರ್ನಿಯಾ ಇರಲಿ, ನುಗ್ಗೇಹಳ್ಳಿಯಿರಲಿ-ನ್ಯೂ ಜೆರ್ಸಿಯೇ ಆಗಿರಲಿ, ಕನ್ನಡ ನೆಲದಲ್ಲಿ ಮೊಳೆತ ಕುಡಿಗಳೆಲ್ಲಾ ಒಂದು ಚಪ್ಪರದಡಿ ಸೇರುವುದು ಒಕ್ಕಲಿಗರ ಪರಿಷತ್‌. ಕರ್ನಾಟಕದ ಧೀಮಂತ ಸಂಸ್ಕೃತಿ ಮತ್ತು ಅಮೆರಿಕದ ಆಧುನಿಕ ಸಂಸ್ಕೃತಿ ನಡುವೆ ನಿರ್ಮಿಸಿದ ಸೇತುವಾಗಿದೆ ಎಂದು ಶ್ಲಾಘಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next