ಶ್ರೀನಗರ: ಪಾಕ್ ಆಕ್ರಮಿತ ಕಾಶ್ಮೀರದ ಶಾರದಾ ಪೀಠದ ಕುಂಡದಿಂದ ಮುಸ್ಲಿಂ ವ್ಯಕ್ತಿಯೊಬ್ಬರು ಪವಿತ್ರ ನೀರನ್ನು ಸಂಗ್ರಹಿಸಿ ಬ್ರಿಟನ್ ಮೂಲಕ ಭಾರತಕ್ಕೆ ಕಳುಹಿಸಿದ್ದಾರೆ. ಜನವರಿ 22 ರಂದು ನಡೆಯುವ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಬಳಸುವ ಸಾಧ್ಯತೆ ಇದೆ.
2019 ರ ಪುಲ್ವಾಮಾ ಭಯೋತ್ಪಾದಕ ದಾಳಿ, ನಂತರ ಬಾಲಾಕೋಟ್ ವೈಮಾನಿಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ಥಾನದ ನಡುವೆ ಅಂಚೆ ಸೇವೆಗಳನ್ನು ಸ್ಥಗಿತಗೊಳಿಸಿದ್ದರಿಂದ ಪವಿತ್ರ ಜಲ ತಲುಪುವ ಸಂಚಾರ ಮಾರ್ಗ ದೀರ್ಘವಾಗಬೇಕಾಯಿತು ಎಂದು ಸೇವ್ ಶಾರದಾ ಸಮಿತಿ ಕಾಶ್ಮೀರ (SSCK) ಸಂಸ್ಥಾಪಕ ರವೀಂದರ್ ಪಂಡಿತ್ ಹೇಳಿದ್ದಾರೆ.
“ಶಾರದಾ ಪೀಠದ ಪಿಒಕೆಯಲ್ಲಿರುವ ಶಾರದಾ ಕುಂಡದ ಪವಿತ್ರ ನೀರನ್ನು ತನ್ವೀರ್ ಅಹ್ಮದ್ ಮತ್ತು ಅವರ ತಂಡ ಸಂಗ್ರಹಿಸಿ, ಎಲ್‌ಒಸಿ (ನಿಯಂತ್ರಣ ರೇಖೆ) ದಾಟಿದ ನಮ್ಮ ನಾಗರಿಕ ಸಮಾಜದ ಸದಸ್ಯರು ಅದನ್ನು ಇಸ್ಲಾಮಾಬಾದ್‌ಗೆ ಕೊಂಡೊಯ್ದರು, ಅಲ್ಲಿಂದ ಅದನ್ನು ಯುಕೆಯಲ್ಲಿರುವ ಅವರ ಮಗಳು ಮಗ್ರಿಬಿಗೆ ಕಳುಹಿಸಲಾಯಿತು.
ಮಗ್ರಿಬಿ ಆಗಸ್ಟ್ 2023 ರಲ್ಲಿ ಅಹಮದ್‌ಬಾದ್‌ಗೆ ಬಂದ ಕಾಶ್ಮೀರಿ ಪಂಡಿತ್ ಕಾರ್ಯಕರ್ತೆ ಸೋನಾಲ್ ಶೇರ್‌ಗೆ ಅದನ್ನು ಹಸ್ತಾಂತರಿಸಿದರು. ಅಲ್ಲಿಂದ ಅದು ದೆಹಲಿಗೆ ತಲುಪಿತು” ಎಂದು ಪಂಡಿತ್ ಹೇಳಿದ್ದಾರೆ.
ಶಾರದಾ ಸರ್ವಜ್ಞ ಪೀಠಕ್ಕೆ 1948 ರಿಂದ ಪ್ರವೇಶಿಸಲಾಗುತ್ತಿಲ್ಲ ಮತ್ತು ಎಸ್‌ಎಸ್‌ಸಿಕೆ, ಪಿಒಕೆಯಲ್ಲಿ ಎಲ್ಒಸಿಯಾದ್ಯಂತ ನಾಗರಿಕ ಸಮಾಜವನ್ನು ರಚಿಸಿದೆ. ಶಾರದಾ ಪೀಠ ಕುಂಡದಿಂದ ಈಗಾಗಲೇ ಅಯೋಧ್ಯೆಗೆ ಮಣ್ಣು, ಶಿಲೆಗಳನ್ನು ಕಳುಹಿಸಲಾಗಿತ್ತು.
SSCK ಸದಸ್ಯರು ಜನವರಿ 22 ರಂದು ಕುಪ್ವಾರಾ ಜಿಲ್ಲೆಯ ಟೀತ್ವಾಲ್‌ನಲ್ಲಿರುವ ಎಲ್‌ಒಸಿ ಬಳಿಯ ಶಾರದಾ ದೇವಸ್ಥಾನದಲ್ಲಿ ಪವಿತ್ರ ಸಮಾರಂಭವನ್ನು ಆಚರಿಸಲು ದೀಪಗಳನ್ನು ಬೆಳಗಿಸಲಿದ್ದಾರೆ.