ನವದೆಹಲಿ: ವಸಾತುಶಾಹಿ ಭಾರತವನ್ನು ಬಡ ರಾಷ್ಟ್ರವನ್ನಾಗಿಸಿತ್ತು. ಆದರೆ ಸ್ವಾತಂತ್ರ್ಯ ನಂತರ 75 ವರ್ಷಗಳಲ್ಲಿ ಭಾರತ ಜಗತ್ತಿನ ಐದನೇ ದೊಡ್ಡ ಆರ್ಥಿಕತೆ ಹೊಂದಿರುವ ದೇಶವಾಗಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದರು.
ವಿಶ್ವಸಂಸ್ಥೆ ಮತ್ತು ಭಾರತದ ಬಾಂಧವ್ಯವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ “ಭಾರತ 75′ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“18ನೇ ಶತಮಾನದಲ್ಲಿ ಜಾಗತಿಕ ಜಿಡಿಪಿಯ ಅರ್ಧದಷ್ಟು ಪಾಲನ್ನು ಭಾರತ ಹೊಂದಿತ್ತು. ಆದರೆ 20ನೇ ಶತಮಾನದ ಮಧ್ಯ ಭಾಗದ ವೇಳೆಗೆ ವಸಾಹತುಶಾಹಿಯ ಕಾರಣ, ಬಡ ರಾಷ್ಟ್ರಗಳ ಪೈಕಿ ಒಂದೆನಿಸಿತ್ತು. ಆದರೆ ಸ್ವಾತಂತ್ರ್ಯ ದೊರೆತ 75 ವರ್ಷಗಳ ನಂತರ ಇಂದು ಜಗತ್ತಿನ ಐದನೇ ದೊಡ್ಡ ಆರ್ಥಿಕತೆ ಹೊಂದಿರುವ ದೇಶವಾಗಿ ಭಾರತ ಪ್ರಪಂಚದ ಎದುರು ಹೆಮ್ಮೆಯಿಂದ ನಿಂತಿದೆ,’ ಎಂದರು.
“ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ತಂತ್ರಜ್ಞಾನವು ಆಹಾರ ಸುರಕ್ಷತಾ ನಿವ್ವಳವನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದೆ.
300 ಬಿಲಿಯನ್ ಅಮೆರಿಕನ್ ಡಾಲರ್‌ಗಿಂತಲೂ ಹೆಚ್ಚಿನ ಮೊತ್ತದ ಸೌಲಭ್ಯಗಳನ್ನು ಡಿಜಿಟಲ್ ಮೂಲಕ ವಿತರಿಸಲಾಗಿದೆ. ನಿಯಮಿತವಾಗಿ ಸುಮಾರು 400 ಮಿಲಿಯನ್ ಜನರಿಗೆ ಆಹಾರ ದೊರೆಯುತ್ತಿದೆ’ ಎಂದು ಎಸ್.ಜೈಶಂಕರ್ ಮಾಹಿತಿ ನೀಡಿದರು.