ಕಿರುತೆರೆಯಲ್ಲೀಗ ಪೌರಾಣಿಕ ಧಾರಾವಾಹಿಗಳದ್ದೇ ಸುದ್ದಿ. ಈಗ ಜೀ ಕನ್ನಡ ವಾಹಿನಿಯಲ್ಲಿ “ಮಹಾದೇವಿ’ ಎಂಬ ಹೊಸ ಪೌರಾಣಿಕ ಧಾರಾವಾಹಿಯೂ ಹೊಸ ಸೇರ್ಪಡೆ. ಫೆ.13 ರಿಂದ ಈ ಧಾರಾವಾಹಿ ಶುರುವಾಗುತ್ತಿದೆ. ಶ್ರುತಿ ನಾಯ್ಡು ಈ ಧಾರಾವಾಹಿ ನಿರ್ಮಾಪಕರು. ರಮೇಶ ಇಂದಿರಾ ನಿರ್ದೇಶನದಲ್ಲಿ “ಮಹಾದೇವಿ’ ಧಾರಾವಾಹಿ ಮೂಡಿ ಬರುತ್ತಿದೆ. ಈ ಧಾರಾವಾಹಿಯ ಪ್ರಮುಖ ಘಟ್ಟವೊಂದರ ಚಿತ್ರೀಕರಣ ನಗರದ ಹೊರವಲಯದ ಕುಂಬಳಗೂಡು ಸಮೀಪದ ಸ್ಟುಡೀಯೋದಲ್ಲಿ ನಡೆದಿದೆ.
ದೇವಿ ತನ್ನ ಭಕ್ತೆಯ ಮದುವೆಯನ್ನು ನವದುರ್ಗೆಯರ ಜತೆಗೂಡಿ ಮಾಡಿಸುವ ದೃಶ್ಯವನ್ನು ಇತ್ತೀಚೆಗೆ ಅದ್ಧೂರಿಯಾಗಿ ಚಿತ್ರೀಕರಿಸಲಾಗಿದೆ. ನವದೇವಿಯರಾಗಿ ವೀಣಾ ಸುಂದರ್, ಮಾನಸ ಜೋಶಿ, ಸ್ವಾತಿ, ದಿವ್ಯಾ ಸೇರಿದಂತೆ ಇತರೆ ಕಲಾವಿದೆಯರು ಕಾಣಿಸಿಕೊಂಡಿದ್ದರು. ದೇವಿಯ ಭಕ್ತೆ ಬಂಗಾರಿಯಾಗಿ ಲತಾ ಅಭಿನಯಿಸಿದ್ದಾರೆ. ನಿರ್ಮಾಪಕಿ ಶ್ರುತಿ ನಾಯ್ಡು, ಒಂದು ವಾರದವರೆಗೆ ವಿಶೇಷ ಕಂತುಗಳನ್ನು ಪ್ರಸಾರ ಮಾಡಲು ಯೋಚಿಸಿದ್ದಾರಂತೆ.
ಫೆ.13ರ ಸೋಮವಾರದಿಂದ ಕಂತುಗಳ ಪ್ರಸಾರ ಶುರುವಾಗಲಿದೆ. ದೇವಲೋಕದ ಸೆಟ್‌ನಲ್ಲಿ ಮದುವೆ ದೃಶ್ಯದ ಚಿತ್ರೀಕರಣ ನಡೆಸಿದ್ದು, ಕಥೆಯಲ್ಲಿ ಈ ಭಾಗವೇ ಪ್ರಮುಖ ಘಟ್ಟ. ನವದುರ್ಗೆಯರು ಸೇರಿ ಅನಾಥ ಹುಡುಗಿಗೆ ಮದುವೆ ಮಾಡಿಸುವ ದೃಶ್ಯ ವಿಶೇಷವಾಗಿ ಮೂಡಿಬಂದಿದೆ. ಈಗಾಗಲೇ “ಶ್ರೀರಸ್ತು ಶುಭಮಸ್ತು’, “ಸಾವಿತ್ರಿ’, “ಶುಭವಿವಾಹ’ದಂತಹ ಧಾರಾವಾಹಿಗಳಲ್ಲಿ ಮದುವೆಯ ಎಪಿಸೋಡ್‌ಗಳು ಬಂದಿದ್ದರೂ, ಪೌರಾಣಿಕ ಕಥೆಯ ಹಿನ್ನೆಲೆಯಲ್ಲಿ ಬರುವ ಮದುವೆ ದೃಶ್ಯ ಅದ್ದೂರಿಯಾಗಿರುತ್ತದೆ.
ಇಲ್ಲಿ ನವದುರ್ಗೆಯರ ಶ್ಲೋಕಗಳನ್ನು ಸಹ ಬಳಸಿಕೊಳ್ಳಲಾಗಿದೆ. ನವದುರ್ಗೆಯರು ಮುತ್ತೆ„ದೆಯರ ರೂಪದಲ್ಲಿ ಬಂದು ಬಾಗಿನ ತೆಗೆದುಕೊಂಡು ಹೋಗುತ್ತಾರೆ ಎಂದು ವಿವರ ಕೊಡುವ ಶ್ರುತಿನಾಯ್ಡು, “ಮಹಾದೇವಿ’ ಧಾರಾವಾಹಿಯಲ್ಲಿ ದೇವಲೋಕವನ್ನೇ ಸೃಷ್ಟಿಸಲಾಗಿದೆ ಎನ್ನುತ್ತಾರೆ ಅವರು. ನಿರ್ದೇಶಕ ರಮೇಶ ಇಂದಿರಾ ಕಥೆ ಬರೆದರೆ, ಸುಜಯ್ ರಮೇಶ್ ಚಿತ್ರಕಥೆ ಮಾಡಿದ್ದಾರೆ. ಅಂದಹಾಗೆ, “ಮಹಾದೇವಿ’ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8.30 ಕ್ಕೆ ಪ್ರಸಾರವಾಗಲಿದೆ.