ಮುತ್ತುಮಣಿ ಈಗ ಹ್ಯಾಪಿಮೂಡ್‌ನಲ್ಲಿದ್ದಾರೆ. ಅರೇ, ಯಾರೀ ಮುತ್ತುಮಣಿ ಅನ್ನೋ ಪ್ರಶ್ನೆ ಎದುರಾದರೆ, ಸೃಜನ್‌ಲೋಕೇಶ್ ನಡೆಸಿಕೊಡುವ “ಮಜಾ ಟಾಕೀಸ್’ ನೆನಪಿಸಿಕೊಳ್ಳಿ. ತೂ(ಪೂ)ಜಾ ಬಾರ್ ಓನರ್ರೆ ಈ ಮುತ್ತುಮಣಿ’! ಹೌದು, ಆ ಪಾತ್ರದ ಮೂಲಕ ನಗೆಬುಗ್ಗೆ ಎಬ್ಬಿಸುತ್ತಿರುವ ತರಂಗ ವಿಶ್ವ, ಈಗ ಬಲು ಖುಷಿಯಲ್ಲಿದ್ದಾರೆ. ಆ ಖುಷಿಗೆ ಕಾರಣ, ಗ್ಯಾಪ್ ಬಳಿಕ ಬಂದರೂ ಅವರನ್ನ ಜನ ಒಪ್ಪಿ ಅಪ್ಪಿರೋದು. ಅಷ್ಟೇ ಅಲ್ಲ, ಇದೀಗ ಅವರು ಹೀರೋ ಆಗುತ್ತಿದ್ದಾರೆ ಅನ್ನೋದೇ ಈ ಹೊತ್ತಿನ ವಿಶೇಷ.
ತರಂಗ ವಿಶ್ವ ಎದಿತ್ ಫಿಲ್ಮ್ ಫ್ಯಾಕ್ಟರಿ ಎಂಬ ಹೊಸ ಬ್ಯಾನರ್‌ವೊಂದನ್ನು ಶುರು ಮಾಡಿದ್ದಾರೆ. ಆ ಮೂಲಕ ಒಂದು ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಅವರೇ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ, ಆ ಚಿತ್ರವನ್ನು ಕರೂರು ಮೂಲದ ಅರುಣ್ ಎಂಬುವರು ನಿರ್ದೇಶಿಸುತ್ತಿದ್ದಾರೆ. ಸದ್ಯಕ್ಕೆ ವಿಶ್ವ ಅಲಿಯಾಸ್ ಮುತ್ತುಮಣಿ ನಟಿಸುತ್ತಿರೋದು ಮಲಯಾಳಂನ ರಿಮೇಕ್ ಚಿತ್ರದಲ್ಲಿ. ಆ ಚಿತ್ರದ ಹಕ್ಕು ಕುರಿತು ಈಗಷ್ಟೇ ಮಾತುಕತೆ ನಡೆಯುತ್ತಿದೆ.
ಒಳ್ಳೆಯ ತಂತ್ರಜ್ಞರು, ಗೆಳೆಯರ ಜತೆ ಸೇರಿ ಆ ಚಿತ್ರ ಮಾಡುತ್ತಿದ್ದೇನೆ. ಅದೊಂದು ಔಟ್ ಅಂಡ್ ಔಟ್ ಕಾಮಿಡಿ ಸಿನಿಮಾವಂತೂ ಹೌದು ಎನ್ನುತ್ತಾರೆ ಅವರು. ಹಾಗಾದರೆ, ಅವರು ಹೀರೋ ಆಗಿಬಿಟ್ಟರೆ, ಬೇರೆ ಪಾತ್ರಗಳಲ್ಲಿ ನಟಿಸೋದಿಲ್ಲವೇ? ಖಂಡಿತ ಅಂತಹ ಯಾವುದೇ ಸಂಕೋಚವಿಲ್ಲ ಎನ್ನುವ ವಿಶ್ವ, ಹೀರೋ ಆಗಿ ನಟಿಸಿದರೂ, ಎಂಥಾ ಪಾತ್ರದಲ್ಲೂ ನಟಿಸಲು ರೆಡಿ. ಅದು ಸಣ್ಣದಿರಲಿ, ದೊಡ್ಡದಿರಲಿ, ಒಳ್ಳೇ ಪಾತ್ರವಿದ್ದರೆ ಖಂಡಿತ ನಟಿಸುತ್ತೇನೆ. ನನಗೆ ಹೀರೋ ಪಟ್ಟ ಬೇಡ.
ಸ್ಟಾರ್‌ಗಿರಿಯ ಆಸೆಯೂ ಇಲ್ಲ. ಸದ್ಯಕ್ಕೆ ನನಗೆ ಒಳ್ಳೇ ಮೈಲೇಜ್ ಕೊಟ್ಟಿರೋದು “ಮಜಾ ಟಾಕೀಸ್’. ಅಲ್ಲಿನ ಮುತ್ತುಮಣಿ ಎಂಬ ಪಾತ್ರ ನನ್ನಲ್ಲಿ ಇನ್ನಷ್ಟು ಆತ್ಮವಿಶ್ವಾಸ ಹೆಚ್ಚಿಸಿದೆ. ನಾನು ಬೆಳಗ್ಗೆ 6 ಕ್ಕೆ ಟೀ ಕುಡಿಯಲು ಹೊರ ಹೋದರೆ, ಜನರು “ಮುತ್ತುಮಣಿ, ನಿಮ್ಮ ತೂಜಾ ಬಾರ್ ಓಪನ್ ಆಗೋದು ಯಾವಾಗ’ ಅಂತ ಕೇಳುವಷ್ಟರ ಮಟ್ಟಿಗೆ ಆ ಪಾತ್ರ ಹಿಟ್ ಆಗಿದೆ. ನಾನು ಒಂದುವರೆ ವರ್ಷದ ಗ್ಯಾಪ್ ಬಳಿಕ ಬಂದರೂ ಜನರು ನನ್ನನ್ನು ಮಜಾ ಟಾಕೀಸ್‌ನಲ್ಲಿ ಮಜವಾಗಿ ನೋಡುತ್ತಿದ್ದಾರೆ. ಇದಕ್ಕಿಂತ ಖುಷಿ ಬೇರೊಂದಿಲ್ಲ.
“ಪಂಟ’ ನಂತರ ನಾಲ್ಕೈದು ಸಿನಿಮಾಗಳು ಬಂದಿವೆ. ಈ ಮೂಲಕ ನನ್ನ ಪಯಣ ಮತ್ತೆ ಜೋರಾಗಿದೆ. ನಾನು ಸ್ಟಾರ್ ಸಿನಿಮಾದಲ್ಲಿ ನಟಿಸಿದ್ದರಿಂದ ಸಂಭಾವನೆ ಜಾಸ್ತಿ ಅಂತ ಕೆಲವರು ಪುಕಾರು ಎಬ್ಬಿಸಿದರು. ಆದರೆ, ಯಾಕೆ ಹಾಗೆ ಮಾಡಿದರೋ ಗೊತ್ತಿಲ್ಲ. ನನ್ನ ಬಳಿ ಬಂದರೆ ತಾನೇ ಸತ್ಯ ಗೊತ್ತಾಗೋದು. ನಾನು ಸಂಭಾವನೆಗಿಂತ ಪಾತ್ರ ನಂಬಿದವನು. 1994ರಿಂದ “ಅಭಿನಯ ತರಂಗ’ ಮೂಲಕ ನಾಟಕ ಮಾಡಿಕೊಂಡು ಬಂದವನು.
ನಾಟಕ ನಿರ್ದೇಶನ, ನಟನೆ ಮಾಡುತ್ತಲೇ ಕಿರುತೆರೆಯಲ್ಲೂ “ಗುಗ್ಗು ನನ್ಮಕ್ಳು’, “ಐತಲಕ್ಕಡಿ’ ಧಾರಾವಾಹಿ ನಿರ್ದೇಶಿಸಿ, ಗಾಂಧಿನಗರಕ್ಕೆ ಬಂದೆ. “ಜೂಟ್’ ಮೂಲಕ ಸಿನಿಜರ್ನಿ ಶುರುಮಾಡಿದ ನಾನು, ಈವರೆಗೆ 75ಕ್ಕೂ ಹೆಚ್ಚು ಚಿತ್ರದಲ್ಲಿ ನಟಿಸಿದ್ದೇನೆ. ಆ ಪೈಕಿ ತೆಲುಗಿನ “ನೇನು ನಾ ಪ್ರೇಮಕಥಾ’, “ಖುಯಂ ಬಾಯ್’ ಕೂಡ ಸೇರಿದೆ. ನನಗೀಗ ಒಳ್ಳೇ ಫ್ಲಾಟ್‌ಫಾರಂ ಕೊಟ್ಟಿರುವ “ಮಜಾ ಟಾಕೀಸ್’ ಇಷ್ಟಕ್ಕೆಲ್ಲಾ ಕಾರಣ’ ಅನ್ನೋದನ್ನ ಮರೆಯೋದಿಲ್ಲ.