ನವದೆಹಲಿ:ಗಡಿನಿಯಂತ್ರಣ (ಎಲ್ ಒಸಿ) ರೇಖೆಯಿಂದ ಹಿಡಿದು ವಾಸ್ತವ ಗಡಿ ನಿಯಂತ್ರಣ (ಎಲ್ ಎಸಿ)ಕ್ಕೆ ಸಂಬಂಧಿಸಿದಂತೆ ದೇಶದ ಸಾರ್ವಭೌಮತೆಯನ್ನು ಪ್ರಶ್ನಿಸಿ ಕೆಣಕಿದವರಿಗೆ ಭಾರತದ ಯೋಧರು ತಕ್ಕ ಉತ್ತರ ನೀಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುವ ಮೂಲಕ ನೆರೆಯ ಚೀನಾ ಮತ್ತು ಪಾಕಿಸ್ತಾನಕ್ಕೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.
74ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಗಡಿನಿಯಂತ್ರಣ ರೇಖೆ ಹಾಗೂ ವಾಸ್ತವ ಗಡಿ ವಿಚಾರ ಸೇರಿದಂತೆ ಏನೇ ತಗಾದೆಗಳಿರಲಿ ಭಾರತವನ್ನು ಕೆಣಕಿದವರಿಗೆ ನಮ್ಮ ಸೈನಿಕರು ತಕ್ಕ ಉತ್ತರ ನೀಡಿದ್ದಾರೆ. ಈ ಭಾಷೆಯನ್ನು ಅವರು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.
ಪೂರ್ವ ಲಡಾಖ್ ನ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಜೂನ್ ತಿಂಗಳಲ್ಲಿ ಚೀನಾ ಸೈನಿಕರ ಸಂಘರ್ಷಕ್ಕೆ 20 ಯೋಧರು ಹುತಾತ್ಮರಾಗಿರುವ ಘಟನೆಯನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ ಅವರು, ನಮ್ಮ ಯೋಧರು ಏನು ಮಾಡಿದ್ದಾರೆ, ನಮ್ಮ ದೇಶ ಏನು ಮಾಡಿದೆ ಎಂಬುದನ್ನು ಲಡಾಖ್ ಘಟನೆಯ ಮೂಲಕ ಇಡೀ ಜಗತ್ತು ನೋಡಿದೆ. ಹೀಗಾಗಿ ಕೆಂಪುಕೋಟೆ ಮೂಲಕ ನಮ್ಮ ಎಲ್ಲಾ ಧೈರ್ಯಶಾಲಿ ಯೋಧರಿಗೆ ನಮನ ಸಲ್ಲಿಸುತ್ತೇನೆ ಎಂದು ಹೇಳಿದರು.
ಏನೇ ಇರಲಿ ಭಯೋತ್ಪಾದನೆ ಅಥವಾ ವಿಸ್ತರಣಾವಾದವಿರಲಿ(ಭೂ ಆಕ್ರಮಣ) ಭಾರತ ಎರಡರ ವಿರುದ್ಧವೂ ಹೋರಾಡಲಿದೆ ಎಂದು ಪ್ರಧಾನಿ ನೇರ ಸಂದೇಶವನ್ನು ಚೀನಾ ಮತ್ತು ಪಾಕಿಸ್ತಾನಕ್ಕೆ ರವಾನಿಸಿದ್ದಾರೆ ಎಂದು ವರದಿ ತಿಳಿಸಿದೆ.
ಇಂದು ಇಡೀ ಜಗತ್ತು ಭಾರತದ ಜತೆ ನಿಂತಿದೆ. ಅದಕ್ಕೆ ವಿಶ್ವಸಂಸ್ಥೆಯ (ಖಾಯಂರಹಿತ) ಭದ್ರತಾ ಸಮಿತಿಯ ಸ್ಥಾನಕ್ಕಾಗಿ 192 ದೇಶಗಳ ಪೈಕಿ ಭಾರತ 184 ಮತ ಪಡೆದಿರುವುದು ಇದಕ್ಕೆ ಸಾಕ್ಷಿ ಎಂದು ಮೋದಿ ಹೇಳಿದರು.
74ನೇ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ ಅವರು ಬರೋಬ್ಬರಿ ಒಂದು ಗಂಟೆ 26 ನಿಮಿಷಗಳ ಕಾಲ ನಿರರ್ಗಳವಾಗಿ ಭಾಷಣ ಮಾಡಿದ್ದು, ಆತ್ಮನಿರ್ಭರ ಭಾರತ (ಸ್ವಾವಲಂಬಿ ಭಾರತ)ಕ್ಕೆ ಹೆಚ್ಚು ಒತ್ತು ನೀಡಿ ಮಾತನಾಡಿದ್ದರು.