Advertisement
ಚಿತ್ರರಂಗದ ಸ್ಟಾರ್-ರಾಜಕಾರಣಿಯ ಹೇಮಾ ಮಾಲಿನಿ ಮತ್ತು ಮನೋಜ್ ತಿವಾರಿ ಮತ್ತೆ ಸಂಸತ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ.
Related Articles
Advertisement
ಈಶಾನ್ಯ ದೆಹಲಿಯ ಬಿಜೆಪಿ ಅಭ್ಯರ್ಥಿ, ಭೋಜ್‌ಪುರಿ ಸಿನಿಮಾ ನಟ -ಗಾಯಕ ಮನೋಜ್ ತಿವಾರಿ ಜನಪ್ರಿಯ ಯುವ ನಾಯಕ ಕಾಂಗ್ರೆಸ್‌ನ ಪ್ರತಿಸ್ಪರ್ಧಿ ಕನ್ಹಯ್ಯಾ ಕುಮಾರ್‌ಗೆ ಸೋಲುಣಿಸಿದರು. ಇದು ತಿವಾರಿ ಅವರ ಸತತ ಮೂರನೇ ಗೆಲುವು.
ಉತ್ತರ ಪ್ರದೇಶದ ಗೋರಖ್‌ಪುರದಿಂದ ಮತ್ತೊಬ್ಬ ಜನಪ್ರಿಯ ಭೋಜ್‌ಪುರಿ ಸಿನಿಮಾ ತಾರೆ ರವಿ ಕಿಶನ್ ಸತತ ಎರಡನೇ ಅವಧಿಗೆ ಆಯ್ಕೆಯಾಗಿದ್ದಾರೆ. ಅವರು ಸಮಾಜವಾದಿ ಪಕ್ಷದಿಂದ ಕಾಜಲ್ ನಿಶಾದ್ ಅವರನ್ನು ಸೋಲಿಸಿ ತಮ್ಮ ಕ್ಷೇತ್ರವನ್ನು ಉಳಿಸಿಕೊಂಡಿದ್ದಾರೆ. ಈ ಕ್ಷೇತ್ರ ಸಿಎಂ ಯೋಗಿ ಆದಿತ್ಯನಾಥ್ ಅವರಿಗೂ ಪ್ರತಿಷ್ಠೆಯ ಕಣವಾಗಿತ್ತು.
ಬಿಜೆಪಿಯ ಮತ್ತೊಬ್ಬ ಅಭ್ಯರ್ಥಿ ಖ್ಯಾತ ಮಲಯಾಳಂ ನಟ ಸುರೇಶ್ ಗೋಪಿ ಕೇರಳದ ತ್ರಿಶೂರ್ ಕ್ಷೇತ್ರದಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ವಿ.ಎಸ್. ಸುನೀಲ್‌ಕುಮಾರ್ ಅವರನ್ನು ಸೋಲಿಸಿ ರಾಜ್ಯದ ಮೊದಲ ಬಿಜೆಪಿ ಸಂಸದ ಎನಿಸಿಕೊಂಡಿದ್ದಾರೆ.
ಪಶ್ಚಿಮ ಬಂಗಾಳದ ಅಸನ್ಸೋಲ್‌ನಿಂದ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಹಿರಿಯ ನಟ ಶತ್ರುಘ್ನ ಸಿನ್ಹಾ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಎಸ್‌ಎಸ್ ಅಹ್ಲುವಾಲಿಯಾ ಅವರನ್ನು ಸೋಲಿಸಿ ಮತ್ತೆ ಸಂಸತ್ ಪ್ರವೇಶಿಸುತ್ತಿದ್ದಾರೆ.
ಪಶ್ಚಿಮ ಬಂಗಾಳದ ಮೇದಿನಿಪುರದಲ್ಲಿ ಬಿಜೆಪಿಯ ಅಗ್ನಿಮಿತ್ರ ಪಾಲ್ ಅವರನ್ನು ಸೋಲಿಸುವ ಮೂಲಕ ಬಂಗಾಳಿ ನಟಿ -ಟಿಎಂಸಿಯ ಜೂನ್ ಮಲಿಯಾ ಅವರು ಕಠಿನ ಹೋರಾಟದಲ್ಲಿ ಗೆದ್ದಿದ್ದಾರೆ. 2021 ರಲ್ಲಿ, ಮಲಿಯಾ ಅವರು ಮೇದಿನಿಪುರದಿಂದ ಪಶ್ಚಿಮ ಬಂಗಾಳದ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದರು.
ಪಶ್ಚಿಮ ಬಂಗಾಳದ ಬಿರ್ಭೂಮ್‌ನಲ್ಲಿ ಟಿಎಂಸಿಯ ಮೂರು ಅವಧಿಯ ಸಂಸದ ಮತ್ತು ನಟ ಶತಾಬ್ದಿ ರಾಯ್ ಅವರು ಬಿಜೆಪಿಯ ದೇಬ್ತಾನು ಭಟ್ಟಾಚಾರ್ಯ ವಿರುದ್ಧ ಭರ್ಜರಿ ಜಯ ಸಾಧಿಸಿದ್ದಾರೆ.
ರಾಜ್ಯದ ಹೂಗ್ಲಿ ಮತ್ತು ಘಟಾಲ್ ಕ್ಷೇತ್ರಗಳಲ್ಲಿ ಟಿಎಂಸಿ ಮತ್ತು ಬಿಜೆಪಿಯ ಸೆಲೆಬ್ರಿಟಿ ಮುಖಗಳ ನಡುವೆ ಹಣಾಹಣಿ ಏರ್ಪಟ್ಟಿತ್ತು. ಆದರೆ ಎರಡರಲ್ಲೂ ಟಿಎಂಸಿ ಮೇಲುಗೈ ಸಾಧಿಸಿದೆ.
ನಟಿ ಮತ್ತು ಟಿಎಂಸಿ ಅಭ್ಯರ್ಥಿ ರಚನಾ ಬ್ಯಾನರ್ಜಿ ಅವರು ಹೂಗ್ಲಿಯಿಂದ ಬಿಜೆಪಿಯ ನಟ ಲಾಕೆಟ್ ಚಟರ್ಜಿ ವಿರುದ್ಧ ಗೆದ್ದಿದ್ದಾರೆ. ಇದು ರಾಜಕಾರಣಿಯಾಗಿ ಬ್ಯಾನರ್ಜಿಯವರ ಮೊದಲ ಪ್ರವೇಶವಾಗಿದೆ.
ಘಟಾಲ್ ಕ್ಷೇತ್ರದಲ್ಲಿ ನಟ, ನಿರ್ಮಾಪಕ, ಗಾಯಕ ಮತ್ತು ಚಿತ್ರಕಥೆಗಾರ ಅಧಿಕಾರಿ ದೀಪಕ್ (ದೇವ್)ಜಯ ಸಾಧಿಸಿ ಮೂರನೇ ಅವಧಿಗೆ ಸಂಸತ್ ಪ್ರವೇಶಿಸಿದ್ದಾರೆ.
ಪಶ್ಚಿಮ ಬಂಗಾಳದ ಬಹರಂಪುರದಿಂದ ಟಿಎಂಸಿಯಿಂದ ಕಣಕ್ಕಿಳಿದಿದ್ದ ಮಾಜಿ ಕ್ರಿಕೆಟಿಗ ಯುಸೂಫ್ ಪಠಾಣ್ ಅವರು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರನ್ನು ಸೋಲಿಸಿ ಸಂಸತ್ ಪ್ರವೇಶಿಸಿದ್ದಾರೆ.
ಇರಾನಿಗೆ ಸೋಲುಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಲ್ಲಿ ಮಾಜಿ ನಟಿ ಮತ್ತು ಬಿಜೆಪಿ ಸಂಸದೆ ಸ್ಮೃತಿ ಇರಾನಿ ಅವರು ಕಾಂಗ್ರೆಸ್‌ನ ಕಿಶೋರಿಲಾಲ್ ಶರ್ಮ ವಿರುದ್ಧ ಸೋಲು ಅನುಭವಿಸಿದ್ದಾರೆ. ಬಿಜೆಪಿಯಿಂದ ಈ ಬಾರಿ ಕಣಕ್ಕಿಳಿದಿದ್ದ ಸಂಸದೆಯಾಗಿದ್ದ ನಟಿ ನವನೀತ್ ಕೌರ್ ರಾಣಾ ಅವರು ಅಮರಾವತಿಯ ಕಾಂಗ್ರೆಸ್ ಅಭ್ಯರ್ಥಿ ಬಲವಂತ್ ವಾಂಖೆಡೆ ವಿರುದ್ಧ ಆಘಾತಕಾರಿ ಸೋಲು ಅನುಭವಿಸಿದ್ದಾರೆ. ನಟ-ಬಿಜೆಪಿ ಅಭ್ಯರ್ಥಿ ನಿರಾಹುವಾ ಎಂಬ ಹೆಸರಿನಿಂದ ಚಿರಪರಿಚಿತರಾಗಿರುವ ದಿನೇಶ್ ಲಾಲ್ ಯಾದವ್ ಉತ್ತರ ಪ್ರದೇಶದ ಅಜಂಗಢ್ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಧರ್ಮೇಂದ್ರ ಯಾದವ್ ಅವರ ಎದುರು ಸೋಲು ಅನುಭವಿಸಿದ್ದಾರೆ.