Advertisement

ಕರಾಚಿ ಟು ಭಾರತ…ಅಂದು ಲಾಲ್‌ ಕೃಷ್ಣ ಅಡ್ವಾಣಿ ಸ್ಟಾರ್‌ ಪ್ರಚಾರಕ, ಮೋದಿ ಅಪರಿಚಿತರಾಗಿದ್ರು!

05:16 PM Feb 03, 2024 | Team Udayavani |

ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡ, ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ ಅವರಿಗೆ ದೇಶದ ಅತ್ಯುನ್ನದ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ವಿಷಯವನ್ನ ಶೇರ್‌ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

Advertisement

ಇದನ್ನೂ ಓದಿ:Thalapathy 69: ದಳಪತಿ ವಿಜಯ್‌ ಕೊನೆಯ ಸಿನಿಮಾಕ್ಕೆ ಅಟ್ಲಿ ಆ್ಯಕ್ಷನ್ ಕಟ್?‌

1986ರಿಂದ 90, 1993ರಿಂದ 98 ಹಾಗೂ 2004-05ರವರೆಗೆ ಎಲ್‌ ಕೆ ಅಡ್ವಾಣಿಯವರು ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾಗಿ ಪಕ್ಷವನ್ನು ಸಂಘಟಿಸಿದ್ದರು. ಸುದೀರ್ಘ ಏಳು ದಶಕಗಳ ರಾಜಕೀಯ ಜೀವನದಲ್ಲಿ ಎಲ್‌ ಕೆ ಅಡ್ವಾಣಿ ಸಂಸದರಾಗಿ, ನಂತರ ಗೃಹ ಸಚಿವರಾಗಿ ಪ್ರಧಾನಮಂತ್ರಿ ಅಟಲ್‌ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ (1999ರಿಂದ 2004) ಉಪ ಪ್ರಧಾನಿಯಾಗಿ ಕರ್ತವ್ಯ ನಿರ್ವಹಿಸಿದ್ದರು.

ಲಾಲ್‌ ಕೃಷ್ಣ ಅಡ್ವಾಣಿ 1927ರ ನವೆಂಬರ್‌ 8ರಂದು ಪಾಕಿಸ್ತಾನದ ಕರಾಚಿಯಲ್ಲಿ ಜನಿಸಿದ್ದರು. ದೇಶ ವಿಭಜನೆ ನಂತರ ಅಡ್ವಾಣಿ ಪೋಷಕರು ಭಾರತಕ್ಕೆ ವಲಸೆ ಬಂದಿದ್ದರು. ದೆಹಲಿಯಲ್ಲಿ ಕಾಲೇಜು ಶಿಕ್ಷಣ ಪೂರ್ಣಗೊಳಿಸಿದ್ದರು. 14ನೇ ವಯಸ್ಸಿಗೆ ಆರ್‌ ಎಸ್‌ ಎಸ್‌ ಗೆ ಸೇರಿದ್ದ ಅಡ್ವಾಣಿ 1951ರಲ್ಲಿ ಶ್ಯಾಮ್‌ ಪ್ರಸಾದ್‌ ಮುಖರ್ಜಿ ಸ್ಥಾಪಿಸಿದ್ದ ಭಾರತೀಯ ಜನಸಂಘದ ಸದಸ್ಯರಾದರು.

Advertisement


1967ರಲ್ಲಿ ಅಡ್ವಾಣಿ ಅವರು ದೆಹಲಿ ಮಟ್ರೋಪಾಲಿಟನ್‌ ಕೌನ್ಸಿಲ್‌ ನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆರ್‌ ಎಸ್‌ ಎಸ್‌ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿ 1970ರವರೆಗೆ ಅಡ್ವಾಣಿ ಸೇವೆ ಸಲ್ಲಿಸಿದ್ದರು. 1970ರಲ್ಲಿ ಮೊದಲ ಬಾರಿಗೆ ಅಡ್ವಾಣಿಯವರು ರಾಜ್ಯಸಭೆ ಸದಸ್ಯರಾಗಿದ್ದರು. 1973ರಲ್ಲಿ ಜನಸಂಘದ ಅಧ್ಯಕ್ಷರಾಗಿದ್ದರು. 1977ರ ಲೋಕಸಭೆ ಚುನಾವಣೆಗೂ ಮೊದಲು ಜನ ಸಂಘವು ಜನತಾ ಪಕ್ಷದಲ್ಲಿ ವಿಲೀನಗೊಂಡಿತ್ತು. 1980ರಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಅವರೊಂದಿಗೆ ಬಿಜೆಪಿಯ ಸ್ಥಾಪಕ ಸದಸ್ಯರಲ್ಲಿ ಅಡ್ವಾಣಿ ಕೂಡಾ ಒಬ್ಬರಾಗಿದ್ದರು. 1989ರಲ್ಲಿ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿದ್ದರು. ಹೀಗೆ ಏಳು ಬಾರಿ ಸಂಸರಾಗಿದ್ದರು. ಲೋಕಸಭೆ, ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು. 1998ರಿಂದ 2004ರವರೆಗೆ ಗೃಹ ಸಚಿವರಾಗಿದ್ದರು. ಭಾರತೀಯ ಜನತಾ ಪಕ್ಷದ ಬೆಳವಣಿಗೆಯಲ್ಲಿ ಅಡ್ವಾಣಿಯವರ ಪಾತ್ರ ಮಹತ್ವದ್ದಾಗಿದೆ.

1965ರಲ್ಲಿ ಎಲ್.ಕೆ.ಅಡ್ವಾಣಿಯವರು ಕಮಲಾ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಓರ್ವ ಪುತ್ರ, ಓರ್ವ ಪುತ್ರಿ(ಜಯಂತ್‌, ಪ್ರತಿಭಾ) ಇದ್ದಾರೆ. 2016ರ ಏಪ್ರಿಲ್‌ 6ರಂದು ಅಡ್ವಾಣಿ ಪತ್ನಿ ಕಮಲಾ ವಿಧಿವಶರಾಗಿದ್ದರು.

1984ರ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಜಯಗಳಿಸಿದ್ದು, ಕೇವಲ 2 ಸ್ಥಾನಗಳಲ್ಲಿ ಮಾತ್ರ. ಆದರೆ ಅಡ್ವಾಣಿಯವರ ಸತತ ಪರಿಶ್ರಮದ ಪರಿಣಾಮ 1989ರ ಚುನಾವಣೆಯಲ್ಲಿ ಬಿಜೆಪಿ 86 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಹೀಗೆ 1992ರಲ್ಲಿ 121 ಸ್ಥಾನ, 1996ರಲ್ಲಿ 161 ಸ್ಥಾನ ಗಳಿಸಿತ್ತು.

ರಾಮಮಂದಿರ ನಿರ್ಮಾಣಕ್ಕಾಗಿ ರಥಯಾತ್ರೆ: ಅಂದು ಮೋದಿ ಸಾಥ್…

ತಮ್ಮನ್ನು ತಾವು ರಥಯಾತ್ರೆಯ ರೂವಾರಿ ಎಂದು ಹೇಳಿಕೊಂಡಿದ್ದ ಎಲ್‌ ಕೆ ಅಡ್ವಾಣಿ 1990ರ ಸೆಪ್ಟೆಂಬರ್‌ 25ರಿಂದ ಗುಜರಾತ್‌ ನ ಸೋಮನಾಥ್‌ ನಿಂದ ಅಯೋಧ್ಯೆವರೆಗಿನ ರಥಯಾತ್ರೆಗೆ ಚಾಲನೆ ಕೊಟ್ಟಿದ್ದರು. ಅಡ್ವಾಣಿಯವರ ನೇತೃತ್ವದಲ್ಲಿ ಅಯೋಧ್ಯೆ ರಾಮಮಂದಿರ ಚಳವಳಿ ಪ್ರಾರಂಭವಾಗಿದ್ದ ಸಂದರ್ಭದಲ್ಲಿ ಆರ್‌ ಎಸ್‌ ಎಸ್‌ ಪ್ರಚಾರಕ್‌ ಆಗಿದ್ದ ನರೇಂದ್ರ ಮೋದಿ ಅಪರಿಚಿತರಾಗಿದ್ದರು. ಸ್ಟಾರ್‌ ಪ್ರಚಾರಕರೂ ಆಗಿರಲಿಲ್ಲ, ಸಾಮಾನ್ಯ ಕಾರ್ಯಕರ್ತರಾಗಿದ್ದ ಮೋದಿ ಅವರು ಕೂಡಾ ಅಂದು ಸಾಥ್‌ ನೀಡಿರುವುದು ಹಳೆಯ ವಿಡಿಯೋ, ಫೋಟೋಗಳಲ್ಲಿ ದಾಖಲಾಗಿದೆ.

1990ರಲ್ಲಿ ಅಡ್ವಾಣಿಯವರು ರಥಯಾತ್ರೆ ನಡೆಸಿದ್ದು, 1991ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯು ಕಾಂಗ್ರೆಸ್‌ ನಂತರ ಎರಡನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಅಡ್ವಾಣಿಯವರು ಗಾಂಧಿನಗರದಿಂದ ಎರಡನೇ ಬಾರಿ ಗೆದ್ದು ಮತ್ತೊಮ್ಮೆ ವಿರೋಧ ಪಕ್ಷದ ನಾಯಕರಾದರು. 1992ರ ಡಿಸೆಂಬರ್‌ 6ರಂದು ಬಾಬ್ರಿ ಮಸೀದಿ ಧ್ವಂಸಗೊಳಿಸಲಾಗಿತ್ತು. ಬಾಬ್ರಿ ಧ್ವಂಸಕ್ಕೂ ಮುನ್ನ ಅಡ್ವಾಣಿಯವರು ಪ್ರಚೋದನಕಾರಿ ಭಾಷಣ ಮಾಡಿರುವುದಾಗಿ ಆರೋಪಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. 2020ರ ಸೆಪ್ಟೆಂಬರ್‌ 30ರಂದು ಸಿಬಿಐ ವಿಶೇಷ ನ್ಯಾಯಾಲಯ ಅಡ್ವಾಣಿಯವರನ್ನು ಖುಲಾಸೆಗೊಳಿಸಿತ್ತು.

ಬಿಜೆಪಿಯ ಜನಪ್ರಿಯತೆಯನ್ನು ಹೆಚ್ಚಿಸಲು ಮ್ತು ಹಿಂದುತ್ವ ಸಿದ್ದಾಂತವನ್ನು ಏಕೀಕರಿಸಲು ಎಲ್‌ ಕೆ ಅಡ್ವಾಣಿಯವರು ದೇಶಾದ್ಯಂತ ಆರು ರಥಯಾತ್ರೆ ಕೈಗೊಂಡಿದ್ದರು. 2011ರಲ್ಲಿ ಅಡ್ವಾಣಿಯವರು ಬಿಹಾರದ ಸಿತಾಬ್‌ ದಿಯಾರಾದಿಂದ ಆಡಳಿತಾರೂಢ ಯುಪಿಎ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಜನ ಚೇತನ ಯಾತ್ರೆ ಕೈಗೊಂಡಿದ್ದರು…ಇದು ಅವರ ನೇತೃತ್ವದಲ್ಲಿ ನಡೆದ ಕೊನೆಯ ಯಾತ್ರೆ.

2004ರ ಸಾರ್ವತ್ರಿಕ ಚುನಾವಣೆಯಲ್ಲಿನ ಸೋಲಿನ ನಂತರ ವಾಜಪೇಯಿ ಅವರು ಸಕ್ರಿಯ ರಾಜಕೀಯದಿಂದ ನಿವೃತ್ತರಾಗಿದ್ದರು. ಜತೆಗೆ ಅಡ್ವಾಣಿಯವರಿಗೆ ಪಕ್ಷವನ್ನು ಮುನ್ನಡೆಸಲು ಪ್ರೋತ್ಸಾಹ ನೀಡಿದ್ದರು. 2009ರ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಅವರು ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿದ್ದರು. ಆದರೆ ಈ ಚುನಾವಣೆಯಲ್ಲಿ ಯುಪಿಎ ಮೈತ್ರಿಕೂಟ ಜಯಗಳಿಸಿ, ಡಾ.ಮನಮೋಹನ್‌ ಸಿಂಗ್‌ ಅವರನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡಲಾಗಿತ್ತು.

2015ರಲ್ಲಿ ಎಲ್‌ ಕೆ ಅಡ್ವಾಣಿಯವರಿಗೆ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣ ನೀಡಿ ಗೌರವಿಸಲಾಗಿತ್ತು. ಇಂದು ಭಾರತ ರತ್ನ ಪ್ರಶಸ್ತಿ ಅಡ್ವಾಣಿಯವರಿಗೆ ಒಲಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next