Advertisement
ಬ್ರೌನ್ ಶುಗರ್, ಗಾಂಜಾ, ಕೊಕೈನ್, ಮರಿಜುವಾನ, ಅಫೀಮು, ಧೂಮಪಾನ, ಮದ್ಯಪಾನ ಮುಂತಾದ ಮಾದಕ ವ್ಯಸನಗಳ ದಾಸನಾದರೆ ಅವುಗಳಿಂದ ಹೊರ ಬರುವುದು ಬಲು ಕಠಿಣವೇ ಸರಿ.
Related Articles
Advertisement
ಮಾದಕ ವ್ಯಸನಗಳು ಇತರರ ಉಪಟಳಕ್ಕೆ ಪ್ರಚೋದಿಸುವುದು ಮಾತ್ರವಲ್ಲದೇ ಆತ್ಮಹತ್ಯೆ ಮಾಡಿಕೊಳ್ಳುವಂತೆಯೂ ಪ್ರೇರೇಪಿಸುತ್ತದೆ! ಮೊದ ಮೊದಲು ಕಡಿಮೆ ಇದ್ದ ಚಟ ದಿನಕಳೆಯುತ್ತಾ ಹೋದಂತೆ ಅಧಿಕವಾಗಿ ಅವುಗಳ ವಶಕ್ಕೆ ಒಳಗಾಗುವ ಪರಿಸ್ಥಿತಿ ಬರುತ್ತದೆ. ಇದರಿಂದ ಮನುಷ್ಯ ದೈಹಿಕವಾಗಿ ಕೃಶವಾಗುವುದರ ಜೊತೆಗೆ ಮಾನಸಿಕವಾಗಿ ಅಸ್ಥಿರಗೊಂಡು, ಸಮಾಜದಲ್ಲಿ ತನ್ನ ಗೌರವ, ಘನತೆ, ಸ್ಥಾನಮಾನವನ್ನು ಕಳೆದುಕೊಳ್ಳುತ್ತಾನೆ.
ಮಾದಕ ವ್ಯಸನಗಳಿಂದ ಹಚ್ಚ ಹಸುರಾಗಿದ್ದ ಸಂಬಂಧಗಳು ಕೆಡುತ್ತವೆ, ಕುಟುಂಬದಲ್ಲಿ ಜಗಳಗಳು, ಭಿನ್ನಾಭಿಪ್ರಾಯಗಳು, ಪರಸ್ಪರ ಪ್ರೀತಿ, ಕಾಳಜಿಗಳು ಮರೆಯಾಗುತ್ತವೆ. ಇದರಿಂದ ಸಂಬಂಧಗಳು ನುಚ್ಚು ನೂರಾಗುತ್ತವೆ. ಇವುಗಳ ದುಷ್ಪರಿಣಾಮದಿಂದ ಮಕ್ಕಳ ಮನಸ್ಸಿನ ಮೇಲೆಯೂ ಬಲು ದೊಡ್ಡ ಪರಿಣಾಮವನ್ನೇ ಬೀರುತ್ತವೆ. ಮಕ್ಕಳು ಕೂಡ ಸಂಸ್ಕಾರ ಹೀನರಾಗಿ ಬೆಳೆದು, ಮುಂದೆ ಅವರೂ ಕೂಡ ಹಿರಿಯರನ್ನೇ ಅನುಸರಿಸಿ, ಹಿರಿಯರ ದಾರಿಯನ್ನೇ ಹಿಡಿಯುವ ಸಾಧ್ಯತೆಗಳೂ ಇರುತ್ತವೆ. ಹಾಗಾಗಿ ಮಾದಕ ವ್ಯಸನಗಳಿಂದ ದೂರವಾಗುವುದೇ ಲೇಸು.
ಮಾದಕ ವ್ಯಸನಿಗಳು ಮಾದಕ ವ್ಯಸನಗಳಿಂದ ಬಲು ಬೇಗ ಸಾವಿಗೆ ಹತ್ತಿರವಾಗುತ್ತಾರೆ. ಶ್ವಾಸಕೋಶದ ಸಮಸ್ಯೆಗಳು, ಟಿ.ಬಿ, ಮೂತ್ರ ಕೋಶದ ಸಮಸ್ಯೆಗಳು ಹೀಗೆ ಒಂದೇ ಎರಡೇ?!, ಬಹು ಅಂಗಾಗ ಖಾಯಿಲೆಗಳಿಗೆ ತುತ್ತಾಗಿ ನರಳುವ ಪರಿಸ್ಥಿತಿ ಬಂದೊದಗುತ್ತದೆ. ಇದರ ಅರಿವಿದ್ದರೂ ಆಗಾಗ ಮಾದಕ ವ್ಯಸನಗಳ ಮೊರೆ ಹೋಗುತ್ತಿರುವುದು ವಿಪರ್ಯಾಸ!!
ಮಾದಕ ವ್ಯಸನಗಳಿಂದ ಮುಕ್ತಿ ಪಡೆಯುವುದು ಹೇಗೆ?
ಪ್ರಯತ್ನ ಪಟ್ಟರೆ ಮಾದಕ ವ್ಯಸನಗಳಿಂದ ಮುಕ್ತಿ ಪಡೆಯಲು ಸಾಧ್ಯವಿದೆ. ಮಾದಕ ವ್ಯಸನಿಗಳ ಬಿಡುಗಡೆಗೆ ಈಗೀಗ ಅನೇಕ ಶಿಬಿರಗಳು ತೆರೆಯಲ್ಪಟ್ಟಿವೆ. ಆ ಶಿಬಿರಗಳಲ್ಲಿ ಮಾದಕ ವ್ಯಸನಗಳ ದುಷ್ಪರಿಣಾಮಗಳ ಬಗ್ಗೆ ಸರಿಯಾಗಿ ಅರಿವು ಮೂಡಿಸಿ, ಮಾದಕ ವ್ಯಸನಿಗಳ ಮನ ಪರಿವರ್ತನೆ ಮಾಡಿ ಅವರನ್ನು ವ್ಯಸನಗಳಿಂದ ಹೊರ ತಂದ ಅದೆಷ್ಟೋ ಉದಾಹರಣೆಗಳೂ ಇವೆ. ಕುಟುಂಬದವರ ಪ್ರೋತ್ಸಾಹ, ಸಹಕಾರ ಬಲು ಅಗತ್ಯ. ಕುಟುಂಬದ ಸದಸ್ಯರು ಮಾದಕ ವ್ಯಸನಿಗಳಿಗೆ ಧೈರ್ಯ ತುಂಬಿ, ಆತ್ಮವಿಶ್ವಾಸ ಹೆಚ್ಚಿಸುವಂತಹ ಮಾತುಗಳನ್ನಾಡಿ, ಅವರೊಡನೆ ಪ್ರೀತಿಯಿಂದ ನಡೆದುಕೊಂಡರೆ ಬಿಡುಗಡೆ ಹೊಂದಲು ಸಾಧ್ಯವಿದೆ.
–ಪ್ರಜ್ಞಾ ರವೀಶ್
ಕಾಸರಗೋಡು