ಹುಬ್ಬಳ್ಳಿ: ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯದಿಂದ ಗ್ರಾಮಗಳ ಚಿತ್ರಣ ಬದಲಾಗಿದ್ದು, ಈ ವಿಚಾರದಲ್ಲಿ ವಿಪಕ್ಷಗಳು ಸಲಹೆ ಹಾಗೂ ಮಾರ್ಗದರ್ಶನ ನೀಡುವ ಕೆಲಸ ಮಾಡಬೇಕು. ರಾಜಕಾರಣಕ್ಕಾಗಿ ವಿರೋಧ ಮಾಡುವುದು ಸರಿಯಲ್ಲ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್.ಎಚ್. ಕೋನರಡ್ಡಿ ತಿಳಿಸಿದರು.
2006ರ ಅ. 10ರಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಗ್ರಾಮವಾಸ್ತವ್ಯ ಮಾಡಿದ್ದ ನವಲಗುಂದ ತಾಲೂಕಿನ ನಾವಳ್ಳಿ (ಇಂದು ಅಣ್ಣಿಗೇರಿ ತಾಲೂಕು) ಗ್ರಾಮದ ವಸ್ತುಸ್ಥಿತಿ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಪಂ ಸದಸ್ಯರಾಗಿದ್ದ ಅಲ್ಲಾಭಿ ನದಾಫ್ ಅವರ ಮನೆಯಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಗ್ರಾಮವಾಸ್ತವ್ಯ ಮಾಡಿದ್ದರು. ಇದರ ಪರಿಣಾಮ ಸುತ್ತಲಿನ ಗ್ರಾಮಗಳ ಅಭಿವೃದ್ಧಿಯಾಯಿತು. ಸಾರಿಗೆ ಸೌಲಭ್ಯದಿಂದ ಹಿಡಿದು ರಸ್ತೆ, ಹೈಸ್ಕೂಲ್, ಕುಡಿಯುವ ನೀರಿನ ಸೌಲಭ್ಯ, ಗ್ರಾಮದ ರಸ್ತೆಗಳ ಕಾಂಕ್ರೀಟಿಕರಣ, ಇಲ್ಲಿನ ಜನರಿಗೆ ವಿವಿಧ ಪಿಂಚಣಿ ಸೌಲಭ್ಯ ಸೇರಿದಂತೆ ಹತ್ತಾರು ಯೋಜನೆಗಳು ಲಭಿಸಿವೆ. ಅಂದು ಮುಖ್ಯಮಂತ್ರಿಗಳು ಚಾಲನೆ ನೀಡಿದ ಬಸ್ ಇಂದಿಗೂ ಓಡಾಡುತ್ತಿದ್ದು, ಇದಕ್ಕೆ ಜನರು ಪ್ರೀತಿಯಿಂದ ‘ಕುಮಾರಸ್ವಾಮಿ ಬಸ್’ ಎಂದು ಕರೆಯುತ್ತಿದ್ದಾರೆ ಎಂದರು.
ನಾನು ಶಾಸಕನಿದ್ದಾಗ 1.30 ಕೋಟಿ ವೆಚ್ಚದಲ್ಲಿ ನಾವಳ್ಳಿ-ಇಬ್ರಾಹಿಂಪುರ ರಸ್ತೆ ಮರುಡಾಂಬರೀಕರಣ, ನಾವಳ್ಳಿ-ಗುಡಿಸಾಗರ ಮಧ್ಯೆ 3.5 ಕೋಟಿ ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣ, ಖನ್ನೂರ-ನಾವಳ್ಳಿ-ಕೊಂಡಿಕೊಪ್ಪ ಕ್ರಾಸ್ ರಸ್ತೆ ನಿರ್ಮಾಣ, ನಾವಳ್ಳಿ ಗ್ರಾಮದ ಕಲ್ಮೇಶ್ವರ ದೇವಸ್ಥಾನದ ಸಮುದಾಯ ಭವನಕ್ಕೆ 25 ಲಕ್ಷ ರೂ, ರಂಗಮಂದಿರಕ್ಕೆ 10 ಲಕ್ಷ ರೂ. ಶಾಲೆಯ ಹಿಂಭಾಗದಲ್ಲಿರುವ ಸಮುದಾಯ ಭವನಕ್ಕೆ 10 ಲಕ್ಷ ರೂ. ಶರಣಬಸಪ್ಪ ದೇವಸ್ಥಾನಕ್ಕೆ 10 ಲಕ್ಷ ರೂ., ಅಂಜುಮನ್ ಇಸ್ಲಾಂ ಸಮಿತಿ ಸಮುದಾಯ ಭವನಕ್ಕೆ 2 ಲಕ್ಷ ರೂ. ರುದ್ರಾನಂದ ಮಠದ ಸಮುದಾಯ ಭವನಕ್ಕೆ 3 ಲಕ್ಷ ರೂ, ಬಸ್ ನಿಲ್ದಾಣದ ಬಳಿ 10 ಲಕ್ಷ ರೂ. ಸೇರಿದಂತೆ ಕೋಟ್ಯಂತರ ರೂ. ವೆಚ್ಚದ ಯೋಜನೆಗಳು ಗ್ರಾಮದಲ್ಲಿ ಅನುಷ್ಠಾನಗೊಂಡಿವೆ ಎಂದು ವಿವರಿಸಿದರು.
ಗ್ರಾಮಸ್ಥರ ಪ್ರಮುಖ ಬೇಡಿಕೆಯಾದ ತುಪ್ಪದ ಕುರಹಟ್ಟಿ-ನಾವಳ್ಳಿ ನಡುವಿನ ಹಂದಿಗನಾಳ ಸೇತುವೆ ನಿರ್ಮಾಣಕ್ಕೆ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಮೂಲಕ ಈಗಾಗಲೇ 12 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ. ಅದಕ್ಕೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಅವರಿಗೆ ಸೂಚಿಸಿದ್ದಾರೆ. ಶೀಘ್ರದಲ್ಲಿ ಅವರಿಂದಲೇ ಶಿಲಾನ್ಯಾಸ ನೆರವೇರಿಸಲಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಇದರೊಂದಿಗೆ ಗ್ರಾಮದ ಒಳ ರಸ್ತೆಗಳ ಕಾಂಕ್ರೀಟಿಕರಣ ಸೇರಿದಂತೆ ಸಣ್ಣಪುಟ್ಟ ಕೆಲಸಗಳು ಈಡೇರಲಿವೆ ಎಂದು ಭರವಸೆ ನೀಡಿದರು.
ಮುಖ್ಯಮಂತ್ರಿಗಳು ಉಕ ಭಾಗದಲ್ಲಿ ಅಂದು ಮಾಡಿದ ಗ್ರಾಮ ವಾಸ್ತವ್ಯದ ನಂತರದ ಗ್ರಾಮದ ಅಭಿವೃದ್ಧಿ ಕುರಿತು ಬೆಳಕು ಚೆಲ್ಲುವ ಕೆಲಸ ಮಾಡುತ್ತಿದ್ದೇನೆ. ವಾರಕ್ಕೆ ಒಂದು ಗ್ರಾಮ ಸಂಚರಿಸಿ ಅಲ್ಲಿನ ಸ್ಥಿತಿಗತಿ ಕುರಿತು ಚರ್ಚಿಸಿ ಅಂದು ನೀಡಿದ ಭರವಸೆಗಳು ಬಾಕಿ ಉಳಿದಿದ್ದರೆ ಅವುಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸಮಗ್ರ ವರದಿ ತಯಾರಿಸಿ ಸಿಎಂಗೆ ಸಲ್ಲಿಸುವುದಾಗಿ ತಿಳಿಸಿದರು.