Advertisement

ಅಮರನಾಥನಿಂದ …ವಯಸ್ಸಾಯ್ತೋವರೆಗೆ

11:42 AM Nov 25, 2018 | Team Udayavani |

1952ರ ಮೇ 29ರಂದು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ದೊಡ್ಡರಸಿನಕೆರೆಯಲ್ಲಿ ಹುಚ್ಚೇಗೌಡ ಹಾಗೂ ಪದ್ಮಮ್ಮ ದಂಪತಿಯ ಆರನೇ ಮಗನಾಗಿ ಜನಿಸಿದ್ದರು. ಇವರ ಹುಟ್ಟು ಹೆಸರು ಮಳವಳ್ಳಿ ಹುಚ್ಚೇಗೌಡ ಅಮರ್‌ನಾಥ್‌. ಚಿತ್ರರಂಗದಲ್ಲಿ ಪಡೆದ ಹೆಸರು ಅಂಬರೀಶ್‌. ಇಷ್ಟೇ ಅಲ್ಲ ಪಿಟೀಲು ಚೌಡಯ್ಯ ಅವರ ಮೊಮ್ಮೊಗ ಕೂಡ. 

Advertisement

ಮೊದಲ ಚಿತ್ರ: ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್‌ ಅವರ, 1972ರಲ್ಲಿ ತೆರೆಕಂಡ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಿತ್ರ “ನಾಗರಹಾವು’ ಚಿತ್ರದೊಂದಿಗೆ ಬೆಳ್ಳಿ ತೆರೆಗೆ ಪದಾರ್ಪಣೆ. ಮೊದಲಿಗೆ ಖಳನಟನಾಗಿ  ಗುರುತಿಸಿಕೊಂಡ ಅವರು, ಆನಂತರ ನಾಯಕ ನಟನಾಗಿ ಕನ್ನಡ ಚಿತ್ರರಂಗದ ಸೂಪರ್‌ ಸ್ಟಾರ್‌ ಆದರು. ನಾಯಕನಾಗಿ ಅವರು ನಟಿಸಿದ ಮೊದಲ ಚಿತ್ರ “ಅಮರ್‌ನಾಥ್‌’ (1978). ಒಟ್ಟು 208 ಚಿತ್ರಗಳಲ್ಲಿ ನಟಿಸಿದ್ದರು. 

ಹಿರಿಯ ನಿರ್ದೇಶಕ ಎಸ್‌.ವಿ. ರಾಜೇಂದ್ರ ಸಿಂಗ್‌ ಬಾಬು ನಿರ್ದೇಶಿಸಿದ “ಅಂತ’ (1981) ಅವರಿಗೆ ದೊಡ್ಡ ಹೆಸರು ತಂದುಕೊಟ್ಟ ಚಿತ್ರ.  ಅಲ್ಲಿಂದ ಮುಂದಕ್ಕೆ ಅವರ ವೃತ್ತಿಜೀವನಕ್ಕೆ ಮತ್ತೂಂದು ಬ್ರೇಕ್‌ ಕೊಟ್ಟ ಚಿತ್ರ “ಚಕ್ರವ್ಯೂಹ’ (1983). ಅಲ್ಲಿಂದ ಆ್ಯಕ್ಷನ್‌ ಹೀರೋ ಇಮೇಜ್‌ ಪಡೆದ ಅವರು ಪೊಲೀಸ್‌ ಪಾತ್ರಗಳಲ್ಲೇ ಹೆಚ್ಚು ಮಿಂಚಿ, “ರೆಬೆಲ್‌ ಸ್ಟಾರ್‌’ ಎಂಬ ಹೆಗ್ಗಳಿಕೆಯನ್ನೂ ಗಳಿಸಿದ್ದರು. 

ಆದರೆ, ಕೇವಲ ಆ್ಯಕ್ಷನ್‌ ಪಾತ್ರಗಳಿಗೇ ಒಗ್ಗಿ ಹೋಗದೇ, ಕ್ಯಾರೆಕ್ಟರ್‌ ಪಾತ್ರಗಳಲ್ಲೂ ನಟಿಸಿ ಪ್ರೇಕ್ಷಕರಿಂದ, ವಿಮರ್ಶಕರಿಂದ ಸೈ ಎನಿಸಿಕೊಂಡಿದ್ದು ಅವರ ಹೆಗ್ಗಳಿಕೆ. ಮಮತೆಯ ಮಡಿಲು, ಪೂರ್ಣಚಂದ್ರ ಮುಂತಾದ ಚಿತ್ರಗಳು ಇದಕ್ಕೆ ಉದಾಹರಣೆ. ಇಷ್ಟಕ್ಕೇ ಸೀಮಿತವಾಗದ ಅವರು, “ಏಳು ಸುತ್ತಿನ ಕೋಟೆ’ಯಂಥ ಪ್ರಯೋಗಾತ್ಮಕ ಚಿತ್ರದಲ್ಲೂ ನಟಿಸಿದ್ದರು. 90ರ ದಶಕದಲ್ಲಿ ತಮ್ಮ ವಯಸ್ಸಿಗೆ ಅನುಗುಣವಾದ ಪಾತ್ರಗಳನ್ನು ನಿರ್ವಹಿಸಿದ ಅವರು, ಹೃದಯ ಹಾಡಿತು, ಸಪ್ತಪದಿ, ರಾಣಿ ಮಹರಾಣಿ, ಸೋಲಿಲ್ಲದ ಸರದಾರ, ಮುಂಜಾನೆಯ ಮಂಜು, ಮುಸುಕು ಮುಂತಾದ ಚಿತ್ರಗಳಲ್ಲಿ ನಟಿಸಿದರು. 

ಅಂಬಿ ರಾಜಕೀಯ: 1994ರಲ್ಲಿ ಕಾಂಗ್ರೆಸ್ಸಿಗೆ ಸೇರುವ ಮೂಲಕ ರಾಜಕೀಯ ಪ್ರವೇಶ ಮಾಡಿದ್ದ ಅಂಬರೀಶ್‌. ಆನಂತರ, 1996ರಲ್ಲಿ ಜೆಡಿಎಸ್‌ ಸೇರ್ಪಡೆಗೊಂಡಿದ್ದ ಅವರು, ಮಂಡ್ಯದಿಂದ 1998ರಲ್ಲಿ ಸಂಸದರಾಗಿ ಆಯ್ಕೆಯಾದರು. ಆನಂತರ, ಕಾಂಗ್ರೆಸ್‌ಗೆ ಸೇರ್ಪಡೆಯಾಗಿ ಸತತ ಎರಡು ಬಾರಿ ಸಂಸದರಾಗಿ ಆಯ್ಕೆಯಾದರು.

Advertisement

1999, 1999-2004, 2004-2009ರ ಅವಧಿಗೆ ಸಂಸದರಾಗಿದ್ದ ಅವರು 2006ರಲ್ಲಿ ಮನಮೋಹನ್‌ ಸಿಂಗ್‌ ಸರ್ಕಾರದಲ್ಲಿ ಮಾಹಿತಿ ಮತ್ತು ಪ್ರಚಾರ ಇಲಾಖೆಯ ಸಹಾಯಕ ಸಚಿವರಾಗಿದ್ದರು. 2008ರಲ್ಲಿ ಕಾವೇರಿ ವಿವಾದದ ಹಿನ್ನೆಲೆಯಲ್ಲಿ ಪ್ರತಿಭಟನಾ ಸೂಚಕವಾಗಿ ಅವರು ಸಚಿವ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದರು. 2012ರಲ್ಲಿ ಕೆಪಿಸಿಸಿಯ ಉಪಾಧ್ಯಕ್ಷರೂ ಆಗಿದ್ದ ಅವರು, ಸಿದ್ದರಾಮಯ್ಯ ಸರ್ಕಾರದಲ್ಲಿ ವಸತಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. 

ಕೊನೆಯ ಚಿತ್ರ: ಒಟ್ಟು 208 ಚಿತ್ರಗಳಲ್ಲಿ ನಟಿಸಿರುವ ಅಂಬರೀಶ್‌ ಅವರ ಕೊನೆಯ ಚಿತ್ರ ಕುರುಕ್ಷೇತ್ರ. ಮುಂದಿನ ವರ್ಷ ಈ ಚಿತ್ರ ತೆರೆಕಾಣಲಿದೆ. ಸೆಪ್ಟಂಬರ್‌ನಲ್ಲಷ್ಟೇ ಅವರು ಇತ್ತೀಚೆಗೆ ಅಭಿನಯಿಸಿದ್ದ ಅಂಬಿ ನಿನಗೆ ವಯಸ್ಸಾಯ್ತೋ ಚಿತ್ರ ಬಿಡುಗಡೆಯಾಗಿತ್ತು. ಎಸ್‌. ನಾರಾಯಣ್‌ ನಿರ್ದೇಶನದ ಚೌಡಯ್ಯ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಬೇಕಿತ್ತಾದರೂ, ಆ ಚಿತ್ರ ಸೆಟ್ಟೇರುವ ಮೊದಲೇ ಅವರು ಇಹಲೋಕ ತ್ಯಜಿಸಿದ್ದಾರೆ. 

ಮಗನ ಚಿತ್ರ ನೋಡಲಿಲ್ಲ: ತಮ್ಮ ಏಕೈಕ ಪುತ್ರ ಅಭಿಷೇಕ್‌ ಅವರನ್ನು ಇತ್ತೀಚೆಗಷ್ಟೇ “ಅಮರ್‌ನಾಥ್‌’ ಚಿತ್ರದ ಮೂಲಕ ಪರಿಚಯಿಸಿದ್ದರು ಅಂಬರೀಶ್‌. ಇನ್ನೂ ನಿರ್ಮಾಣ ಹಂತದಲ್ಲಿರುವ ಆ ಚಿತ್ರ ಬಿಡುಗಡೆಯಾಗಿ ತಮ್ಮ ಪುತ್ರನನ್ನು ಬೆಳ್ಳಿ ತೆರೆಯಲ್ಲಿ ಮೊದಲ ಬಾರಿಗೆ ನೋಡುವ ಅವಕಾಶದಿಂದ ಅವರು ವಂಚಿತರಾಗಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next