Advertisement

Success: ಬಡತನವನ್ನೇ ಸೋಲಿಸಿದಾಕೆಯ ಯಶೋಗಾಥೆ-ಭಿಕ್ಷೆ ಬೇಡುತ್ತಿದ್ದ ಬಾಲಕಿ ಈಗ ಡಾಕ್ಟರ್!

02:44 PM Oct 04, 2024 | ನಾಗೇಂದ್ರ ತ್ರಾಸಿ |

ಜೀವನದಲ್ಲಿ ಸಾಧಿಸುವ ಛಲ, ಗುರಿ ಇದ್ದರೆ ಬದುಕನ್ನು ಹೇಗೆ ರೂಪಿಸಿಕೊಳ್ಳಬಹುದು ಎಂಬುದಕ್ಕೆ ಈ ಪಿಂಕಿ ಹರ್ಯಾನ್‌ ಉತ್ತಮ ಉದಾಹರಣೆ. ಸುಮಾರು 20 ವರ್ಷಗಳ ಹಿಂದೆ ಪುಟ್ಟ ಬಾಲಕಿ ಪಿಂಕಿ ರಸ್ತೆ ಬದಿಯಲ್ಲಿ ಭಿಕ್ಷೆ ಬೇಡುತ್ತಿದ್ದಳು. ಈಗ ಕಾಲಚಕ್ರ ಉರುಳಿದೆ…ಎರಡು ದಶಕ ಕಳೆದಿದ್ದು, ಪಿಂಕಿ ಹರ್ಯಾನ್‌ ಇಂದು ಡಾಕ್ಟರ್‌ ಆಗುವ ಮೂಲಕ ಬಡತನವನ್ನು ಸೋಲಿಸಿ ಯಶಸ್ಸು ಗಳಿಸಿದ್ದಾಳೆ!

Advertisement

ಬಾಲ್ಯದಲ್ಲಿ ಪಿಂಕಿ ತನ್ನ ಪೋಷಕರ ಜತೆ ಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದಳು. ಅಷ್ಟೇ ಅಲ್ಲ ಶಿಮ್ಲಾದ ಮೆಕ್ಲಿಯೋಡ್‌ ಗಂಜ್‌ ನ ಕಸದ ರಾಶಿಯಲ್ಲಿ ಆಹಾರಕ್ಕಾಗಿ ಹುಡುಕಾಟ ನಡೆಸುತ್ತಿದ್ದಳು! 2004ರಲ್ಲಿ ಅದೊಂದು ದಿನ ಪಿಂಕಿ ಬೀದಿಯಲ್ಲಿ ನಿಂತು ಭಿಕ್ಷೆ ಬೇಡುತ್ತಿದ್ದಾಗ ಟಿಬೇಟಿಯನ್‌ ನಿರಾಶ್ರಿತ ಬೌದ್ಧ ಬಿಕ್ಕು, ಧರ್ಮಶಾಲಾ ಮೂಲದ ಚಾರಿಟೇಬಲ್‌ ಟ್ರಸ್ಟ್‌ ನ ನಿರ್ದೇಶಕ ಲೋಬ್ಸಾಂಗ್‌ ಜಮ್ಯಾಂಗ್‌ ಬಾಲಕಿಯನ್ನು ಗಮನಿಸಿದ್ದರು. ಇದು ಆಕೆಯ ಬದುಕಿಗೊಂದು ದೊಡ್ಡ ತಿರುವು ಕೊಡಲು ಕಾರಣವಾಗುತ್ತದೆ ಎಂಬುದು ಪುಟ್ಟ ಪಿಂಕಿಗೂ ಗೊತ್ತಿರಲಿಲ್ಲವಾಗಿತ್ತು.

ಪುಟ್ಟ ಪಿಂಕಿಯನ್ನು ಗಮನಿಸಿದ್ದ ಜಮ್ಯಾಂಗ್‌ ಮರುದಿನ ಕೊಳೆಗೇರಿ ಚರಣ್‌ ಕುಂಡಕ್ಕೆ ಭೇಟಿ ನೀಡಿ, ಪಿಂಕಿ ಹಾಗೂ ಪೋಷಕರನ್ನು ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಅವರು ಪಿಂಕಿಗೆ ಶಿಕ್ಷಣ ಕೊಡಿಸುವ ಕುರಿತು ತಂದೆ ಕಾಶ್ಮೀರಿ ಲಾಲ್‌ ಗೆ ಮನವರಿಕೆ ಮಾಡಿದ್ದರು. ಭಿಕ್ಷೆ ಬೇಡುವ ನಮಗೆ ಅದೆಲ್ಲಾ ಸಾಧ್ಯನಾ ಎಂದು ಲಾಲ್‌ ಅಲವತ್ತುಕೊಂಡರು..ಆದರೆ ಅದರ ಚಿಂತೆ ಬಿಡಿ ಎಂದು ಜಮ್ಯಾಂಗ್‌ ಭರವಸೆ ನೀಡಿದ ನಂತರ ಕೊನೆಗೂ ಒಪ್ಪಿಕೊಂಡುಬಿಟ್ಟಿದ್ದರು.

ಕೊನೆಗೂ ಪಿಂಕಿ ಹರ್ಯಾನ್‌ 2004ರಲ್ಲಿ ಧರ್ಮಶಾಲಾದ ದಯಾನಂದ್‌ ಪಬ್ಲಿಕ್‌ ಶಾಲೆಗೆ ಸೇರ್ಪಡೆಗೊಳ್ಳುತ್ತಾಳೆ. ಆರಂಭದಲ್ಲಿ ಪಿಂಕಿ ತನ್ನ ಪೋಷಕರಿಂದ ದೂರ ಇರುವುದನ್ನು ನೆನಪಿಸಿಕೊಂಡು ಧೈರ್ಯಗೆಡುತ್ತಿದ್ದಳು..ಈ ಎಲ್ಲಾ ಎಡರು-ತೊಡರುಗಳ ನಡುವೆ ಪಿಂಕಿ ಶಿಕ್ಷಣದತ್ತ ಗಮನ ಕೊಟ್ಟಿದ್ದಳು ಎಂಬುದಾಗಿ ಎನ್‌ ಜಿಒ ಉಮಾಂಗ್‌ ಫೌಂಡೇಶನ್‌ ನ ಅಧ್ಯಕ್ಷ ಅಜಯ್‌ ಶ್ರೀವಾಸ್ತವ್‌ ಪಿಂಕಿ ದಿನಚರಿ ಬಗ್ಗೆ ನೆನಪಿಸಿಕೊಂಡರು.

Advertisement

ಪಿಂಕಿಗೆ ವಿದ್ಯಾಭ್ಯಾಸದ ಮೇಲೆ ಎಷ್ಟು ಆಸಕ್ತಿ ಇದೆ ಎಂಬುದಕ್ಕೆ ಆಕೆಯ ಫಲಿತಾಂಶವೇ ಸಾಕ್ಷಿಯಾಗಿತ್ತು. ಹೀಗೆ ಪಿಂಕಿ ಸೀನಿಯರ್‌ ಸೆಕೆಂಡರಿ ಪರೀಕ್ಷೆಯಲ್ಲಿ ತೇರ್ಗಡೆಯಾಗುತ್ತಾಳೆ. ಅಷ್ಟೇ ಅಲ್ಲ ನ್ಯಾಷನಲ್‌ ಎಲಿಜಿಬಿಲಿಟಿ cum ಎಂಟ್ರೆನ್ಸ್‌ ಟೆಸ್ಟ್‌ ನಲ್ಲೂ ಉತ್ತೀರ್ಣರಾಗುತ್ತಾಳೆ. ಮೆಡಿಕಲ್‌ ಕೋರ್ಸ್‌ ಗೆ ಪ್ರವೇಶ ಪಡೆಯಲು NEET ಪರೀಕ್ಷೆ ಅವಕಾಶ ನೀಡುತ್ತದೆ.

ತಾನು ಡಾಕ್ಟರ್‌ ಆಗಬೇಕೆಂದು ಪಿಂಕಿ ಕನಸು ಕಂಡಿದ್ದಳು…ಆದರೆ ದುಬಾರಿ ಮೊತ್ತದ ಶುಲ್ಕ, ಡೊನೇಶನ್‌ ಗಳಿಂದಾಗಿ ಖಾಸಗಿ ಮೆಡಿಕಲ್‌ ಕಾಲೇಜು ಮೆಟ್ಟಿಲು ಹತ್ತುವುದು ಪಿಂಕಿಗೆ ಅಸಾಧ್ಯವಾಗುತ್ತದೆ. ಆದರೆ ಆಕೆಯ ಅದೃಷ್ಟ ಕೈಬಿಡಲಿಲ್ಲ…ಯುನೈಟೆಡ್‌ ಕಿಂಗ್‌ ಡಮ್‌ ನ ಟೋಂಗ್‌ ಲೇನ್‌ ಚಾರಿಟೇಬಲ್‌ ಟ್ರಸ್ಟ್‌ ನ ನೆರವಿನೊಂದಿಗೆ ಪಿಂಕಿ 2018ರಲ್ಲಿ ಚೀನಾದ ಪ್ರತಿಷ್ಠಿತ ಮೆಡಿಕಲ್‌ ಕಾಲೇಜಿನಲ್ಲಿ ಪ್ರವೇಶ ಪಡೆಯುತ್ತಾಳೆ! ಇದೀಗ ಎಂಬಿಬಿಎಸ್‌ ಕೋರ್ಸ್‌ ಪೂರ್ಣಗೊಳಿಸಿರುವ ಪಿಂಕಿ ಇತ್ತೀಚೆಗೆ ಧರ್ಮಶಾಲಾಕ್ಕೆ ಮರಳಿದ್ದಾರೆ!

“ಬಾಲ್ಯದಿಂದಲೂ ಬಡತನದಿಂದ ಕಂಗೆಟ್ಟಿದ್ದ ನನಗೆ ಕಷ್ಟದಲ್ಲಿರುವ ನನ್ನ ಪೋಷಕರನ್ನು ಕಂಡು ನೋವಾಗುತ್ತಿತ್ತು. ಇದರಿಂದಾಗಿ ಜಿಮ್ಯಾಂಗ್‌ ಅವರು ಶಾಲೆಗೆ ಸೇರಲು ಹೇಳಿದಾಗ ಒಪ್ಪಿಕೊಂಡಿದ್ದೆ..ಯಾಕೆಂದರೆ ನನಗೆ ಯಶಸ್ಸಿನ ಜೀವನ ಬೇಕಾಗಿತ್ತು ಎಂದು ಪಿಂಕಿ ಪಿಟಿಐ ಜತೆ ಮಾತನಾಡುತ್ತ ಅಭಿಪ್ರಾಯ ಹಂಚಿಕೊಂಡಿದ್ದಾಳೆ.

ನಾಲ್ಕು ವರ್ಷದ ಬಾಲಕಿಯಾಗಿದ್ದಾಗ ಶಾಲಾ ಪ್ರವೇಶಾತಿ ಸಂದರ್ಭ ಸಂದರ್ಶನದಲ್ಲಿ ನಾನು ಮುಂದೆ ಡಾಕ್ಟರ್‌ ಆಗಬೇಕು ಎಂಬ ಗುರಿ ಹೊಂದಿರುವುದಾಗಿ ಆಶಯ ವ್ಯಕ್ತಪಡಿಸಿದ್ದೆ. ಆದರೆ ಡಾಕ್ಟರ್‌ ಆದವರು ಏನು ಕೆಲಸ ಮಾಡುತ್ತಾರೆ ಎಂಬುದು ಕೂಡಾ ನನಗೆ ಗೊತ್ತಿರಲಿಲ್ಲ. ಆದರೆ ನಾನು ಯಾವಾಗಲೂ ನನ್ನ ಸಮುದಾಯಕ್ಕೆ ನೆರವು ನೀಡಬೇಕು ಎಂದು ಬಯಸುತ್ತಿದ್ದೆ ಎಂಬುದು ಪಿಂಕಿ ನುಡಿ.

ಪ್ರಸ್ತುತ ಪಿಂಕಿ ಹರ್ಯಾನ್‌ ಭಾರತದಲ್ಲಿ ಡಾಕ್ಟರ್‌ ಆಗಿ ಕರ್ತವ್ಯ ನಿರ್ವಹಿಸಲು ಅಗತ್ಯವಿರುವ Foreign Medical Graduate examination (FMGE) ಪರೀಕ್ಷೆ ಬರೆಯಲು ಸಿದ್ಧತೆ ನಡೆಸಿದ್ದಾಳೆ. ಮತ್ತೊಂದೆಡೆ ಅಕ್ಕ ಪಿಂಕಿಯ ಸ್ಫೂರ್ತಿಯಿಂದಾಗಿ ಸಹೋದರ ಮತ್ತು ಸಹೋದರಿ ಕೂಡಾ ಶಿಕ್ಷಣ ಪಡೆಯುತ್ತಿದ್ದಾರೆ…ಇದಕ್ಕೆ ಕಾರಣರಾದವರು ಜಮ್ಯಾಂಗ್…ಭಿಕ್ಷೆ ಬೇಡುತ್ತಿದ್ದ ಕೊಳೆಗೇರಿ ಹುಡುಗಿ ಇಂದು ಡಾಕ್ಟರ್‌ ಆಗಿ ಯಶಸ್ಸು ಗಳಿಸಲು ಅವರ ಸಹಕಾರವೇ ಮುಖ್ಯವಾಗಿದೆ ಎಂಬುದು ಪಿಂಕಿ ಮನದಾಳದ ಮಾತು.

Advertisement

Udayavani is now on Telegram. Click here to join our channel and stay updated with the latest news.

Next