ನವದೆಹಲಿ: ಭಾರತದಲ್ಲಿ ನಾಲ್ಕನೇ ಹಂತದ ಲಾಕ್ ಡೌನ್ ಜಾರಿಯಲ್ಲಿರುವಾಗಲೇ ಕೋವಿಡ್ 19 ಸೋಂಕಿತರ ಸಂಖ್ಯೆ ಹೆಚ್ಚಳವಾಗತೊಡಗಿದ್ದು, ದೇಶದಲ್ಲಿ ವೈರಸ್ ಪೀಡಿತರ ಸಂಖ್ಯೆ 1.06ಲಕ್ಷಕ್ಕೆ ಏರಿಕೆಯಾಗಿದೆ. ಅಲ್ಲದೇ ಸಾವಿನ ಪ್ರಮಾಣ 3,300ಕ್ಕೆ ತಲುಪಿದೆ.
ದೇಶದಲ್ಲಿ ಕೋವಿಡ್ 19 ವೈರಸ್ ಪ್ರಕರಣ 100ರಿಂದ ಇದೀಗ 64 ದಿನಗಳಲ್ಲಿ ಒಂದು ಲಕ್ಷ ಮೀರಿ ಹೋಗಿದೆ. ಆದರೆ ಅಮೆರಿಕ ಮತ್ತು ಸ್ಪೇನ್ ಗೆ ಹೋಲಿಕೆ ಮಾಡಿದಲ್ಲಿ ಭಾರತದಲ್ಲಿ ಸೋಂಕು ನಿಯಂತ್ರಣದಲ್ಲಿದೆ ಎಂದು ಅಧ್ಯಯನ ವರದಿ ತಿಳಿಸಿದೆ.
Worldometers(ವರ್ಲ್ಡೋಮೀಟರ್ಸ್)ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಡೆವಲಪರ್ಸ್, ಸಂಶೋಧಕರು, ಸ್ವಯಂಸೇವಾ ಕಾರ್ಯಕರ್ತರನ್ನೊಳಗೊಂಡಿದ್ದು, ಇದು ಕೋವಿಡ್ ವೈರಸ್ ಅಂಕಿಅಂಶದ ಕುರಿತು ತಂಡ ಅಧ್ಯಯನ ನಡೆಸುತ್ತಿದೆ.
ವೈರಸ್ ಹರಡುವಿಕೆ, ಅದರ ವೇಗ, ನಿಯಂತ್ರಣಕ್ಕೆ ಸರ್ಕಾರಗಳು ಕೈಗೊಂಡ ಕ್ರಮಗಳನ್ನು ಪರಿಶೀಲಿಸಿ ಅಧ್ಯಯನ ನಡೆಸುತ್ತಿರುವುದಾಗಿ ವರದಿ ತಿಳಿಸಿದೆ. ಇತರ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತದಲ್ಲಿ ಸೋಂಕು ಹರಡುವಿಕೆ ವೇಗ ಕಡಿಮೆ ಇದೆ ಎಂದು ತಿಳಿಸಿದೆ.
ಜರ್ಮನಿ, ಫ್ರಾನ್ಸ್, ಯುನೈಟೆಡ್ ಕಿಂಗ್ ಡಮ್, ಅಮೆರಿಕ ಸೇರಿದಂತೆ ಇತರ ದೇಶಗಳು ಅತೀ ಹೆಚ್ಚು ಆಧುನಿಕ ವೈದ್ಯಕೀಯ ವ್ಯವಸ್ಥೆ ಹೊಂದಿದ್ದವು. ಆದರೆ ಕೆಲವೇ ದಿನಗಳಲ್ಲಿ 100 ಪ್ರಕರಣದಿಂದ ಒಂದು ಲಕ್ಷ ಕೋವಿಡ್ ಪ್ರಕರಣ ಏರಿಕೆಯಾಗಿತ್ತು. ಭಾರತಕ್ಕೆ ಹೋಲಿಸಿದರೆ ಸೋಂಕು ಪ್ರಸರಣದ ವೇಗ 2ರಿಂದ 3 ಪಟ್ಟು ಅಧಿಕವಾಗಿದೆ.
ವರ್ಲ್ಡೋ ಮೀಟರ್ಸ್ ಅಧ್ಯಯನದ ಪ್ರಕಾರ, ಅಮೆರಿಕ, ಸ್ಪೇನ್ ಮತ್ತು ಜರ್ಮನಿಯಲ್ಲಿ ಕೋವಿಡ್ 19 ವೈರಸ್ 25, 30 ಹಾಗೂ 35 ದಿನಗಳಲ್ಲಿ ಪ್ರಕರಣ ಒಂದು ಲಕ್ಷಕ್ಕೆ ಏರಿಕೆಯಾಗಿತ್ತು. ಇಟಲಿ 36 ದಿನ, ಫ್ರಾನ್ಸ್ 39 ದಿನ ಹಾಗೂ ಯುನೈಟೆಡ್ ಕಿಂಗ್ ಡಮ್ ನಲ್ಲಿ 42 ದಿನಗಳಲ್ಲಿ ಪ್ರಕರಣ ಒಂದು ಲಕ್ಷಕ್ಕೆ ಏರಿಕೆಯಾಗಿತ್ತು. ಆದರೆ ಭಾರತದಲ್ಲಿ ಸೋಂಕು ಹರಡುವಿಕೆ ಪ್ರಮಾಣ ಕಡಿಮೆ ಪ್ರಮಾಣದಲ್ಲಿ ಇದ್ದಿರುವುದು ಪತ್ತೆಯಾಗಿದೆ.