ಉಡುಪಿ: ಮೆರವಣಿಗೆ ವಾದ್ಯ ಘೋಷಗಳೊಂದಿಗೆಆಗಮಿಸಿದ ಮಂಡೂಕಜೋಡಿಗೆ ಕಲ್ಯಾಣ ಶನಿವಾರ ಮಧ್ಯಾಹ್ನ12.05ಕ್ಕೆ ಕಿದಿಯೂರು ಹೊಟೇಲ್ ವಾಹನ ನಿಲುಗಡೆ ಪ್ರಾಂಗಣದಲ್ಲಿ ಸಂಪನ್ನಗೊಂಡಿದೆ.
ಬೆಳಗ್ಗೆ 11ಕ್ಕೆ ಮಾರುತಿ ವೀಥಿಕಾದಲ್ಲಿರುವ ನಾಗರಿಕ ಸಮಿತಿಯ ಕಚೇರಿಯಿಂದ ಹೊರಟ ದಿಬ್ಬಣ ಹಳೆ ಡಯಾನ ವೃತ್ತ, ಕವಿ ಮುದ್ದಣ ಮಾರ್ಗದ ಮೂಲಕ ಕಲ್ಯಾಣ ಮಂಟಪಕ್ಕೆ ಸಾಗಿ ಬಂದಿತು.
ಮಳೆಯ ಕೊರತೆ ಎದುರಿಸುತ್ತಿರುವ ಉಡುಪಿ ಜಿಲ್ಲೆಯಲ್ಲಿ ವಿವಿಧೆಡೆ ದೇವಸ್ಥಾನಗಳಲ್ಲಿ ಪ್ರಾರ್ಥನೆ ನಡೆಯುತ್ತಿದೆ. ಅದರೊಂದಿಗೆ ಶನಿವಾರ ‘ಮಂಡೂಕ ಪರಿಣಯ'(ಕಪ್ಪೆ ಮದುವೆ) ನಡೆಸಲಾಗಿದೆ.
ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಮತ್ತು ಪಂಚರತ್ನಾ ಸೇವಾ ಟ್ರಸ್ಟ್ ಈ ಬಾರಿಯ ಕಪ್ಪೆ ಮದುವೆ ಆಯೋಜನೆ ಮಾಡಿತ್ತು.
ಹೆಣ್ಣು ಕಪ್ಪೆಯನ್ನು ಕೊಳಲಗಿರಿ ಕೀಳಿಂಜೆಯಿಂದ ಹಾಗೂ ಗಂಡು ಕಪ್ಪೆಯನ್ನು ಉಡುಪಿ ಕಲ್ಸಂಕದಿಂದ ತರಲಾಗಿತ್ತು. ಹೆಣ್ಣು ಕಪ್ಪೆಗೆ ವರ್ಷಾ ಎಂದೂ, ಗಂಡು ಕಪ್ಪೆಗೆ ವರುಣ ಎಂದೂ ನಾಮಕರಣ ಮಾಡಲಾಗಿತ್ತು. ಮಳೆಗಾಗಿ ಪ್ರಾರ್ಥನೆಯೇ ಉಡುಗೊರೆ ಎಂಬ ಒಕ್ಕಣೆ ಮದುವೆ ಆಮಂತ್ರಣ ಪತ್ರಿಕೆಯಲ್ಲಿತ್ತು.
ಕಪ್ಪೆಗಾಗಿ ಹುಡುಕಾಟ
ಕಪ್ಪೆಗಳ ಸಂತತಿ ಕಡಿಮೆಯಾಗಿರುವುದರಿಂದ ನಾಗರಿಕ ಸಮಿತಿಯ ನಿತ್ಯಾನಂದ ಒಳಕಾಡು ಅವರು ಕಪ್ಪೆಗಳನ್ನು ತರಲು ಒಂದು ವಾರಗಳ ಕಾಲ ಹುಡುಕಾಟ ನಡೆಸಿದ್ದಾರೆ. ಅನಂತರ ಅವುಗಳನ್ನು ಪ್ರಸಿದ್ಧ ಆಸ್ಪತ್ರೆಯ ಲ್ಯಾಬ್‌ನಲ್ಲಿ ಪರೀಕ್ಷೆಗೊಳಪಡಿಸಿ ಗಂಡು ಯಾವುದು, ಹೆಣ್ಣು ಯಾವುದು ಎಂಬುದನ್ನು ಗುರುತಿಸಿದ್ದಾರೆ.
ಈ ಹಿಂದೆಯೂ ನಿತ್ಯಾನಂದ ಒಳಕಾಡು ಅವರು ಮಳೆ ಕೊರತೆ ಕಾಣಿಸಿಕೊಂಡಾಗ ಕಪ್ಪೆಗಳಿಗೆ ಮದುವೆ ಮಾಡಿಸಿದ್ದರು.