ಬೆಂಗಳೂರು: ಮಕ್ಕಳ ಪೋಷಣೆಗಾಗಿ ದುಡಿಯುತ್ತಿರುವ ಚೈಲ್ಡ್‌ಲೈನ್ ಇಂಡಿಯಾ ಫೌಂಡೇಷನ್ ವತಿಯಿಂದ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ಜನರಿಗೆ ಅರಿವು ಮೂಡಿಸುವ ಸಂಬಂಧ ನ.14ರಿಂದ 21ರ ವರೆಗೆ ನಗರದ ಹಲವೆಡೆ “ಸ್ನೇಹ ಸಪ್ತಾಹ ಆಂದೋಲ’ನವನ್ನು ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಫೌಂಡೇಷನ್‌ನ ಬೆಂಗಳೂರು ನೋಡೆಲ್ ನಿರ್ದೇಶಕ ಡಾ.ವಾಸುದೇವ ಶರ್ಮ, ನವೆಂಬರ್ 14ರಂದು ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಸಹಿ ಆಂದೋಲನ, ನ.15ರಂದು ಮೆಜೆಸ್ಟಿಕ್‌ನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಮತ್ತು ಗೊರಗುಂಟೆ ಪಾಳ್ಯ ಪ್ರದೇಶದಲ್ಲಿ ಭಿಕ್ಷಾಟನೆ ನಿರ್ಮೂಲನೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ.ನ.21ರ ವರೆಗೂ ಮಕ್ಕಳ ಸುರಕ್ಷೆತೆಗೆ ಸಂಬಂಧಿಸಿದಂತೆ ಅರಿವು ಮೂಡಿಸುವ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.
ಭಿಕ್ಷಾಟನೆಗೆ ಮಕ್ಕಳ ಬಳಕೆ: ಭಿಕ್ಷಾಟನೆ ನಿರ್ಮೂಲನೆ ಬಗ್ಗೆ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡರೂ,ಮಕ್ಕಳನ್ನು ಭಿಕ್ಷಾಟನೆಗೆ ಬಳಕೆ ಮಾಡಿ ಕೊಳ್ಳುತ್ತಿರುವ ಪ್ರವೃತ್ತಿಗೆ ಇನ್ನೂ ಕಡಿವಾಣ ಬಿದ್ದಿಲ್ಲ.2018ರ ಏಪ್ರಿಲ್- ಸೆಪ್ಟೆಂಬರ್ ವರೆಗೆ ನಗರದಲ್ಲಿ ಸುಮಾರು 352 ಪ್ರಕರಣಗಳು ವರದಿಯಾಗಿದ್ದು, ಎಂ.ಜಿ.ರಸ್ತೆ, ಮೈಸೂರು ರಸ್ತೆ, ಶಿವಾಜಿನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಕ್ಕಳನ್ನು ಪೋಷಕರೇ ಬಲವಂತವಾಗಿ ಭಿಕ್ಷಾಟನೆಗೆ ದೂಡುತ್ತಿದ್ದಾರೆ ಎಂದು ದೂರಿದರು.
ಕಳೆದ ಆರು ತಿಂಗಳಲ್ಲಿ 352ಮಕ್ಕಳ ಮೇಲಿನ ಲೈಂಗೀಕ ದೌರ್ಜನ್ಯ ಪ್ರಕರಣಗಳು ನಡೆದಿವೆ.ಶಿಕ್ಷಣ ಸಂಸ್ಥೆಗಳಲ್ಲೂ 97 ಮಕ್ಕಳ ಮೇಲಿನ ದೌರ್ಜನ್ಯ ನಡೆದಿರುವುದು ಬೆಳಕಿಗೆ ಬಂದಿದೆ.ಭಿಕ್ಷಾಟನೆಯಲ್ಲಿ ಮಕ್ಕಳನ್ನು ಬಳಕೆ ಮಾಡಿ ಕೊಳ್ಳುತ್ತಿರುವ ಸಂಬಂಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಬಾಲ ಕಾರ್ಮಿಕರು: ಬಾಲ ಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡುವ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಯತ್ನಿಸುತ್ತಿವೆ.ಇದಕ್ಕಾಗಿ ಹಲವು ಯೋಜನೆಗಳನ್ನು ರೂಪಿಸುತ್ತಿವೆ.ಆದರೂ, ಈ ಸಂಖ್ಯೆ ಹೇಳಿ ಕೊಳ್ಳುವಷ್ಟು ಕಡಿಮೆಯಾಗುತ್ತಿಲ್ಲ. ಕಳೆದ ಆರು ತಿಂಗಳಲ್ಲಿ ಬೆಂಗಳೂರಿನಲ್ಲಿ ಎರಡುನೂರ ಐವತ್ತೈದು ಬಾಲ ಕಾರ್ಮಿಕ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಸಾಥಿ ಸಂಸ್ಥೆಯ ರೋಹಿತ್ ಶೆಟ್ಟಿ ತಿಳಿಸಿದರು.
ಇದರಲ್ಲಿ ಬಹುತೇಕ ಮಕ್ಕಳು ಒಡಿಶಾ, ಬಿಹಾರ,ಉತ್ತರ ಪ್ರದೇಶ ಕಡೆಗಳಿಂದ ಬಂದವರಾಗಿದ್ದಾರೆ.ಮೈಸೂರು ರಸ್ತೆ, ಕೆಂಗೇರಿ, ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಟ್ಟಡ ಕಾಮಗಾರಿಗಳಲ್ಲಿ ಬಾಲಕರನ್ನು ದುಡಿಸಿಕೊಳ್ಳುವ ಪ್ರವೃತ್ತಿ ಇನ್ನೂ ಇದೆ ಎಂದು ವಿವರಿಸಿದರು.