Advertisement

ಸ್ನೇಹ ಪರೀಕ್ಷೆ

12:30 AM Feb 14, 2019 | |

ಸುದೀಪ್‌ ಒಂಭತ್ತನೇ ತರಗತಿಯಲ್ಲಿ ಕಲಿಯುತ್ತಿದ್ದ ಹುಡುಗ. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲೂ ಮುಂದಿದ್ದ. ತನಗೆ ಶಿಕ್ಷಕರಿಂದ ಸಿಗುವ ಗೌರವವನ್ನು ಕಂಡು ಅವನಲ್ಲಿ ಅಹಂ ಮನೆ ಮಾಡಿತು. ಗೆಳೆಯರೆಲ್ಲರೂ ತನಗೆ ಗೌರವ ಕೊಡಬೇಕೆಂದು ಅಪೇಕ್ಷಿಸಿದ. ಕಲಿಕೆಯಲ್ಲಿ ಜಾಣರಾದವರು, ಶ್ರೀಮಂತ ಕುಟುಂಬದಿಂದ ಬಂದವರ ಬಳಿ ಮಾತ್ರ ಅವನು ಸ್ನೇಹದಿಂದಿರುತ್ತಿದ್ದ. ಉಳಿದವರನ್ನೆಲ್ಲಾ ತಾತ್ಸಾರದಿಂದ ನೋಡುತ್ತಿದ್ದ. ಅವರೊಂದಿಗೆ ಮಾತನ್ನೂ ಆಡುತ್ತಿರಲಿಲ್ಲ. ತರಗತಿಯಲ್ಲಿ ಸುದೀಪನಿಗೆ ಸುಮಂತನನ್ನು ಕಂಡರೆ ಆಗುತ್ತಿರಲಿಲ್ಲ, ಸುಮಂತ್‌ ಬಡತನದ ಹಿನ್ನೆಲೆಯಿಂದ ಬಂದವನಾಗಿದ್ದನು. ಕಲಿಕೆಯಲ್ಲೂ ಸಾಮಾನ್ಯನಾಗಿದ್ದ. ಆದರೆ ಸುದೀಪನಿಗಿಂತ ಹೆಚ್ಚಿನ  ಗೆಳೆಯರು ಸುಮಂತನಿಗಿದ್ದರು. ಅವನ ಪರೋಪಕಾರಿ ಗುಣ, ಸ್ನೇಹಕ್ಕೆ ಮಾರು ಹೋದ ಅನೇಕರು ಸುಮಂತನ ಗೆಳೆಯರಾಗಿದ್ದರು. 

Advertisement

ಒಂದು ದಿನ ಮಳೆ ಜೋರಾಗಿ ಸುರಿದಿತ್ತು. ಶಾಲೆಯಿಂದ ಸ್ವಲ್ಪ ದೂರದಲ್ಲಿರುವ ಹಳ್ಳ ತುಂಬಿ ಹರಿಯುತ್ತಿತ್ತು. ಸಂಜೆ ಶಾಲೆ ಬಿಟ್ಟಾಗ ಸುದೀಪ್‌ ಹಾಗೂ ಇನ್ನು ಕೆಲವು ಹುಡುಗರು ನೀರು ನೋಡಲು ಹೋದರು. ನೀರು ನೋಡುವ ಉತ್ಸಾಹದಲ್ಲಿ ಮುಂದಕ್ಕೆ ಬಾಗಿದ ಸುದೀಪ್‌ ಆಯತಪ್ಪಿ ನೀರಿಗೆ ಬಿದ್ದು ಬಿಟ್ಟ. ಅವನ ಗೆಳೆಯರು ಭಯದಿಂದ ಓಟಕಿತ್ತರೇ ವಿನಃ ಯಾರೊಬ್ಬರೂ ಆತನನ್ನು ರಕ್ಷಿಸಲು ಮುಂದಾಗಲಿಲ್ಲ. ಅಷ್ಟರಲ್ಲಿ ಯಾರೋ ಒಬ್ಬರು ಓಡಿ ಬಂದು ನೀರಿಗೆ ಧುಮುಕಿದರು. ಸುದೀಪನನ್ನು ಎಳೆದು ದಡಕ್ಕೆ ತಂದರು. ಅದು ಬೇರಾರೂ ಅಲ್ಲ ಸುಮಂತ್‌. ವಿಜ್ಞಾನ ಶಿಕ್ಷಕರು ತರಗತಿಯಲ್ಲಿ ಹೇಳಿಕೊಟ್ಟಿದ್ದ ಪ್ರಥಮ ಚಿಕಿತ್ಸೆ  ಸುಮಂತ್‌ಗೆ ನೆನಪಿತ್ತು. ಅದರ ಸಹಾಯದಿಂದ ಉಸಿರಾಡಲು ಕಷ್ಟ ಪಡುತ್ತಿದ್ದ ಸುದೀಪನಿಗೆ ಕೃತಕ ಉಸಿರಾಟ ನೀಡಿದ. ನಿಧಾನವಾಗಿ ಸುದೀಪ್‌ ಕಣ್ತೆರೆದ. ಅವನ ಕಣ್ಣಿಂದ ಪಶ್ಚಾತ್ತಾಪದ ಹನಿಗಳು ಉರುಳಿದವು. ಸುಮಂತನನ್ನು ಆತ್ಮೀಯತೆಯಿಂದ ಅಪ್ಪಿಕೊಂಡ. ಗೆಳೆತನಕ್ಕೆ ಯಾವ ಸಂಕೋಲೆಗಳೂ ಇರಬಾರದು ಎನ್ನುವುದು ಸುದೀಪನಿಗೆ ಅರ್ಥವಾಗಿತ್ತು.

ಜೆಸ್ಸಿ ಪಿ.ವಿ.

Advertisement

Udayavani is now on Telegram. Click here to join our channel and stay updated with the latest news.

Next