Advertisement

ಸ್ನೇಹದ ಕಡಲಲ್ಲಿ….. ಪಯಣಿಗರು ನಾವೆಲ್ಲ

01:17 PM Aug 06, 2023 | Team Udayavani |

ಆಗಸ್ಟ್ ತಿಂಗಳ ಮೊದಲ ಭಾನುವಾರ ಸ್ನೇಹಿತರ ದಿನವನ್ನು ಆಚರಿಸಲಾಗುತ್ತದೆ. ಕೆಫೆಗಳು, ರೆಸ್ಟೋರೆಂಟ್ ಗಳು, ಸಿನಿಮಾ ಥಿಯೇಟರ್‌ಗಳಲ್ಲಿ ಸ್ನೇಹಿತರು ಒಂದುಗೂಡಿ ಭೇಟಿಯಾಗುವುದು, ಕಾರ್ಡ್ ಗಳನ್ನು ವಿನಿಮಯ ಮಾಡಿಕೊಳ್ಳುವುದು, ಫ್ರೆಂಡ್‌ಶಿಪ್ ಬ್ಯಾಂಡ್‌ಗಳನ್ನು ಕಟ್ಟಿಕೊಳ್ಳುವುದು ಹಾಗೂ ಒಂದಿಷ್ಟು ಸಂತಸದ ಕ್ಷಣಗಳನ್ನು ಒಟ್ಟಾಗಿ ಹಂಚಿ, ಸಂಭ್ರಮಿಸುವುದು ಸಾಮಾನ್ಯ ಸಂಗತಿ.

Advertisement

ಸ್ನೇಹ ಎಂಬುದು ನಮ್ಮ ನಿತ್ಯದ ಬದುಕಿನಲ್ಲಿ ಅತ್ಯಂತ ನಿರ್ಣಾಯಕವಾದ ಮತ್ತು ಅಷ್ಟೇ ಮೌಲ್ಯಪೂರ್ಣವಾದ ಒಂದು ಸಂಬಂಧದ ನೆಲೆಯಾಗಿದೆ. ಇದು ಮಾನವೀಯ ಬಾಂಧವ್ಯವನ್ನು ಸಹಜವಾಗಿ ಬೆಸೆಯುವ ಒಂದು ಮೌಲ್ಯಪೂರ್ಣ ಮಾಧ್ಯಮ. ನಮ್ಮ ದೈಹಿಕ ಸದೃಢತೆ ಮತ್ತು ಯೋಗಕ್ಷೇಮದ ದೃಷ್ಟಿಯಿಂದ ದೈಹಿಕ ವ್ಯಾಯಾಮ ಎಷ್ಟು ಅವಶ್ಯವೋ, ನಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸ್ನೇಹ ಎಂಬುದು ಅತ್ಯುನ್ನತ ಸ್ಥಾನ ಪಡೆದುಕೊಳ್ಳುತ್ತದೆ.

ಬದುಕಿನ ಎಲ್ಲಾ ಹಂತಗಳಲ್ಲೂ ಸ್ನೇಹಿತರು ನಮಗೆ ಆಸರೆಯಾಗಿ ಪರಿಣಮಿಸುತ್ತಾರೆ. ಅನೇಕ ವೇಳೆ ಮನೆಯಲ್ಲಿ ತಂದೆ, ತಾಯಿಯರೊಂದಿಗೆ ಹೇಳಿಕೊಳ್ಳಲಾಗದ ಅದೆಷ್ಟೋ ಸಂಗತಿಗಳನ್ನು ನಾವು ಆತ್ಮೀಯ ಸ್ನೇಹಿತರೊಂದಿಗೆ ಹಂಚಿಕೊಂಡು ಹಗುರವಾಗಿ ಬಿಡುತ್ತೇವೆ. ಇದು ಸ್ನೇಹಕ್ಕಿರುವ ಶ್ರೇಷ್ಟ ಮೌಲ್ಯವನ್ನು ಪ್ರತಿಬಿಂಬಿಸುತ್ತದೆ.

ನಾವು ದೌರ್ಬಲ್ಯವನ್ನು ಅನುಭವಿಸುತ್ತಿರುವಾಗ ಅಥವಾ ಯಾವುದೇ ರೀತಿಯ ಸವಾಲುಗಳಿಗೆ ಮುಖಾಮುಖಿಯಾದಾಗ ತಕ್ಷಣ ನಮ್ಮ ನೆರವಿಗೆ ಬರುವುದು ನಮ್ಮ ಸ್ನೇಹಿತರು. ಇಂತಹ ಸಂದರ್ಭಗಳಲ್ಲಿ ಆತ್ಮೀಯ ಸ್ನೇಹಿತರೊಬ್ಬರಿಗೆ ಕರೆ ಮಾಡಿ ಮಾತನಾಡಿದಾಗ ದೊರೆಯುವ ಮಾನಸಿಕ ಮತ್ತು ಭಾವನಾತ್ಮಕ ನೆಮ್ಮದಿ, ಸಾಂತ್ವನ ನಿಜಕ್ಕೂ ಪದಗಳಲ್ಲಿ ಸೆರೆಹಿಡಿಯಲು ಅಸಾಧ್ಯವಾದುದು.

ಇತ್ತೀಚೆಗೆ ಯಾವುದೋ ಗೊಂದಲದಲ್ಲಿ ಸಿಲುಕಿದ್ದೆ. ಸ್ವಲ್ಪ ವಿರಾಮ ತೆಗೆದುಕೊಂಡು ನನ್ನ ಒಳ್ಳೆಯ ಸ್ನೇಹಿತರೊಬ್ಬರನ್ನು ಕರೆದು ಹರಟೆ ಹೊಡೆಯಲು ಯೋಚಿಸಿದೆ. ನಾವು ಯಾವಾಗಲೂ ಭೇಟಿಯಾಗುವುದಿಲ್ಲ. ಆದರೆ ಒಮ್ಮೊಮ್ಮೆ ಮಾತ್ರ ಒಂದೆಡೆ ಸೇರುತ್ತೇವೆ.

Advertisement

ಫೋನ್‌ ಕರೆಯ ಮೂಲಕ ಹಂಚಿಕೊಳ್ಳಲಾಗದ ಅನೇಕ ಸಂಗತಿಗಳು ಈ ಭೇಟಿಯ ಸಂದರ್ಭದಲ್ಲಿ ತೆರೆದುಕೊಳ್ಳುತ್ತವೆ. ನಮ್ಮ ದೈನಂದಿನ ಬದುಕಿನ ಅನೇಕ ಸಂಗತಿಗಳು, ಒತ್ತಡಗಳು, ಗೊಂದಲಗಳು ಇವೆಲ್ಲವೂ ನಿಜ ಅರ್ಥದಲ್ಲಿ ಮರೆಯಾಗುವುದು ಆತ್ಮೀಯ ಸ್ನೇಹಿತರೊಂದಿಗಿನ ಮಾತುಕತೆಯ ಮೂಲಕವೇ ಎಂಬುದನ್ನು ನಾನು ಹಲವು ಸಂದರ್ಭಗಳಲ್ಲಿ ಅರಿತು, ಅರ್ಥ ಮಾಡಿಕೊಂಡಿದ್ದೇನೆ. ಮಾತ್ರವಲ್ಲ, ಇದು ನನ್ನಅನುಭವ ಸಂಗತಿಯೂ ಹೌದು.

ಬೆಳಗಾವಿಯ ಕೆಎಲ್‌ಇ ಆಯುರ್ವೇದ ಮಹಾವಿದ್ಯಾಲಯದ ಆಯುರ್ವೇದ ಮಕ್ಕಳ ತಜ್ಞ ಡಾ.ಅಜಿಝ್‌ ಅವರು ಹೀಗೆ ಅಭಿಪ್ರಾಯಪಡುತ್ತಾರೆ. ಶಾಲೆಗಳಲ್ಲಿ ಮಕ್ಕಳು ತಮ್ಮ ಸ್ನೇಹಿತರೊಂದಿಗೆ ಹೆಚ್ಚಿನ ಸಮಯ ಕಳೆಯಲು ಅವಕಾಶ ಮತ್ತು ವಾತಾವರಣ ನಿರ್ಮಿಸಬೇಕಾಗಿದೆ. ಸ್ನೇಹಿತರೊಂದಿಗೆ ಕಳೆಯುವ ಸಮಯ ಮತ್ತು ನಗು ಬೆರೆತ ಮಾತು ನಮಗೆ ಮಾನಸಿಕ ಸಂತೃಪ್ತಿ ನೀಡುತ್ತದೆ. ಹಾಗೆಯೇ ನಮ್ಮ ಮೇಲೆ ಇರುವ ಕೆಲಸದ ಹೊರೆಯನ್ನು ಭಾವನಾತ್ಮಕವಾಗಿ ಕಡಿಮೆ ಮಾಡಿಕೊಳ್ಳಲು ಮತ್ತು ಪರಿಸ್ಥಿತಿ ಅರಿತು ವ್ಯವಹರಿಸಲು ಈ ಸ್ನೇಹ ಮತ್ತು ಸ್ನೇಹಿತರೊಂದಿಗಿನ ಒಡನಾಟ ನಿಜಕ್ಕೂಅಧ್ಬುತ ಮಾಧ್ಯಮವೆನಿಸಿದೆ.

ನಿಮ್ಹಾನ್ಸ್ ಬಯೋ ಸ್ಟ್ಯಾಟಿಸ್ಟಿಕ್ಸ್ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಮರಿಯಮ್ಮ ಫಿಲಿಪ್ ಅವರು ಹೀಗೆ ಅಭಿಪ್ರಾಯದಂತೆ, ನಾವು ಯಾವ ಸ್ನೇಹಿತರನ್ನುಆಯ್ಕೆ ಮಾಡಿಕೊಳ್ಳುತ್ತೇವೆ ಎನ್ನುವುದು ಇಲ್ಲಿ ಬಹಳ ಮುಖ್ಯ. ನಾನು ಹೆಚ್ಚು ಸ್ನೇಹಿತರನ್ನು ಹೊಂದಿಲ್ಲ. ಆದರೆ ನಾನು ಮತ್ತು ನನ್ನ ಸ್ನೇಹಿತರು ಒಮ್ಮೆ ಭೇಟಿಯಾದಾಗ 30 ನಿಮಿಷಗಳ ಕಾಲ ಮಾತನಾಡುತ್ತೇವೆ. ಅದು ಎಷ್ಟೋ ದಿನಗಳವರೆಗೆ ನಮಗೆ ಸಾಂತ್ವನ, ಖುಷಿ ನೀಡುತ್ತವೆ.

ಸ್ನೇಹ ಮತ್ತು ಸ್ನೇಹಿತರೊಂದಿಗಿನ ಸಂವಾದ ನಮ್ಮ ಮಾನಸಿಕ ಆರೋಗ್ಯವನ್ನು ಹೇಗೆ ಸದೃಢಗೊಳಿಸುತ್ತದೆ ಎಂಬುದಕ್ಕೆ ಸಂಬಂಧಿಸಿದ ಅನೇಕ ಸಂಶೋಧನೆಗಳು ನಡೆದಿವೆ. ಅವು ಪ್ರಕಟಪಡಿಸಿರುವ ಕುರುಹುಗಳನ್ನು ಸಂಗ್ರಹಿಸಿ ಹೇಳುವುದಾದರೆ;

  1. ಸ್ನೇಹಿತರು ಆತಂಕ ಮತ್ತು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತಾರೆ.
  2. ಹದಿಹರೆಯದ ಸಮಯದಲ್ಲಿ ನಿಕಟ ಸ್ನೇಹವನ್ನು ಹೊಂದುವುದು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸದೃಢಗೊಳಿಸುತ್ತವೆ.
  3. ಸ್ನೇಹ ನಮ್ಮ ನೆನಪು, ಗ್ರಹಿಕೆ ಮತ್ತುಇನ್ನಿತರ ಮಾನಸಿಕ, ಭಾವನಾತ್ಮಕ ಸಾಮರ್ಥ್ಯಗಳನ್ನು ವೃದ್ಧಿಸುವಲ್ಲಿ ಉತ್ತೇಜನ ನೀಡುವಂಥದ್ದಾಗಿದೆ.
  4. ಸ್ನೇಹ ನಮ್ಮ ನಡುವಿನ ಆತ್ಮೀಯತೆಯನ್ನು ಬಲಗೊಳಿಸುತ್ತದೆ.
  5. ಸ್ನೇಹ ಉತ್ತಮ ಆರೋಗ್ಯ ಅಭ್ಯಾಸಗಳನ್ನು ಉತ್ತೇಜಿಸುತ್ತದೆ.

ಸ್ನೇಹಿತರ ದಿನದ ಈ ಶುಭ ಸಂದರ್ಭದಲ್ಲಿ ಕರೆ ಅಥವಾ ವೈಯಕ್ತಿಕವಾಗಿ ಸ್ನೇಹಿತರನ್ನು ಸಂಪರ್ಕಿಸಲು ಪ್ರಯತ್ನಿಸಿ ಮತ್ತು ಗುಣಮಟ್ಟದ ಸಮಯವನ್ನು ಕಳೆಯಿರಿ. ಏಕೆಂದರೆ ನಮ್ಮ ಜೀವನಾನುಭವದ ಭಾಗವಾಗಿ ಸಂಪರ್ಕದ ಸೇತುವೆಯಾಗಿ ಸ್ನೇಹ ಅತ್ಯುನ್ನತ ಸ್ಥಾನವನ್ನು ಪಡೆದುಕೊಳ್ಳುತ್ತದೆ. ಸ್ನೇಹಿತರೊಂದಿಗೆ ಕಳೆಯುವ ಪ್ರತಿಕ್ಷಣವೂ ಅಷ್ಟೇ ಮೌಲ್ಯಪೂರ್ಣವಾದುದು. ಎಲ್ಲರಿಗೂ ಸ್ನೇಹಿತರ ದಿನದ ಪ್ರೀತಿಯ ಶುಭಾಶಯಗಳು.

-ಡಾ ದೀಪ ಕೊಠಾರಿ, ಸಹಾಯಕ ಪ್ರಾಧ್ಯಾಪಕಿ, ಮನೋವಿಜ್ಞಾನ

ಮಾನವಿಕ ಮತ್ತು ಸಮಾಜ ವಿಜ್ಞಾನ ವಿಭಾಗ,

ಯೇನಪೋಯ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್, ಸೈನ್ಸ್, ಕಾಮರ್ಸ್ ಅಂಡ್ ಮ್ಯಾನೇಜ್‌ಮೆಂಟ್,  ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next