Advertisement

Friendship Day: “ಮಚ್ಚ ನಾನಿದೀನಿ” ಅನ್ನೋ ಒಬ್ಬ ಸ್ನೇಹಿತ ಸಾಕು!

02:55 PM Aug 06, 2023 | Team Udayavani |

ರಕ್ತ ಸಂಬಂಧವಿಲ್ಲದಿದ್ದರೂ ಎಲ್ಲರ ಜೀವನದಲ್ಲಿ ಬರುವ, ಏನನ್ನಾದರೂ ತರುವ ಬಂಧವೇ ಸ್ನೇಹ. ಪ್ರತಿಯೊಬ್ಬರ ಜೀವನದಲ್ಲೂ ಸ್ನೇಹಿತರ ಪಾತ್ರ ಅತ್ಯಂತ ನಿರ್ಣಾಯಕವಾಗಿರುತ್ತದೆ. ಸ್ನೇಹವೆಂದರೆ ಇವತ್ತಿದ್ದು ನಾಳೆ ಹೋಗುವಂತದ್ದಲ್ಲ. ಬದಲಾಗಿ ಎಂತಹ ಕಷ್ಟದ ಸಮಯದಲ್ಲೂ ಕೊನೆ ತನಕ ಬಿಟ್ಟುಕೊಡದೆ ಜೊತೆಗಿರುವುದು.

Advertisement

ಮನೆಯವರು, ಸಹೋದರ- ಸಹೋದರಿಯರು ಅದೆಷ್ಟೇ ಪ್ರೀತಿಪಾತ್ರರಾಗಿರಬಹುದು. ಕೆಲವೊಮ್ಮೆ ಕೆಲವೊಂದು ವಿಚಾರಗಳನ್ನು ಅವರೊಂದಿಗೆ ಹಂಚಿಕೊಳ್ಳಲು ಸಾಧ್ಯವಾಗದಿರಬಹುದು. ಅವರಿರುವ ಸ್ಥಿತಿ, ನಮ್ಮ ಬಗ್ಗೆ ಅವರು ಹೊಂದಿರುವ ಭಾವನೆ ಒಂದು ಮುಕ್ತ ಮಾತುಕತೆಗೆ ಅಡ್ಡಿಯಾಗಬಹುದು. ಆಗ ನಮ್ಮ ಮನಃಸ್ಥಿತಿಯನ್ನು ಅರ್ಥಮಾಡಿಕೊಳ್ಳುವವರು ಸ್ನೇಹಿತರು ಮಾತ್ರ.

ಗೆಳೆತನ ಎಂದರೆ ಕೃಷ್ಣ- ಸುದಾಮನಂತೆ ಇರಬೇಕಂತೆ. ಸುದಾಮ ಕೃಷ್ಣನ ಬಳಿ ಏನೂ ಕೇಳಲಿಲ್ಲ. ಕೃಷ್ಣ ಎಲ್ಲಾ ಕೊಟ್ಟು ಏನೂ ಹೇಳಲಿಲ್ಲ. ಅದೆಷ್ಟು ಸುಂದರ ಸಂಬಂಧ ಅಲ್ಲವೇ?… ಯಾವುದೇ ಸ್ವಾರ್ಥವಿಲ್ಲದ ನಿಷ್ಕಲ್ಮಶ ಬಾಂಧವ್ಯ. ಎಂತಹ ಪರಿಸ್ಥಿತಿಯಲ್ಲೂ ಜೊತೆಗಿರುವುದು. ಭೌತಿಕ ಸಂತೋಷ, ಸೌಂದರ್ಯಕ್ಕಿಂದ ಮಿಗಿಲಾದ ಮಾನಸಿಕ ಸಂಬಂಧ. ಅದು ಸಹಾಯ, ಅವಲಂಬನೆಗಳೆಂಬ ಸ್ವಾರ್ಥವನ್ನು ಮೀರಿದುದು…

ಗೆಳೆತನ ಎಂಬುದು ಹುಟ್ಟುವುದು ಬೆಳೆಯುವುದು ಶಾಲಾ-ಕಾಲೇಜುಗಳಲ್ಲಿ. ಗೆಳೆತನವಿಲ್ಲದೆ ಕಾಲೇಜು ದಿನಗಳನ್ನು ಕಳೆದವರು ಯಾವುದೇ ನೆನಪುಗಳಿಲ್ಲದೆ ಕಾಲೇಜಿನಿಂದ ಹೋಗಬೇಕಾಗುತ್ತದೆ. ಕಾಲೇಜು ಶುರುವಾದ ಹೊಸತರಲ್ಲಿ ಒಬ್ಬರಿಗೊಬ್ಬರ ಪರಿಚಯವೇ ಇರುವುದಿಲ್ಲ. ನಂತರ ಪರಿಚಯವಾಗಿ, ಅದು ಸ್ನೇಹವಾಗಿ, ಕೊನೆಗೆ ಬಿಟ್ಟಿರೆವು ಎಂಬಷ್ಟು ಬಂಧ ಬಿಗಿಯಾಗುತ್ತದೆ.

ಕಾಲೇಜಿನಲ್ಲಿ ಗೆಳೆಯರೊಂದಿಗಿನ ಅದೆಷ್ಟೊ ತರ್ಲೆ ಮಾತುಗಳು, ಕ್ಲಾಸ್ ಬಂಕ್ ಮಾಡಿ ಹರಟೆ ಹೊಡೆದ ಕ್ಷಣಗಳು, ತಾನು ಸಿಕ್ಕಿ ಬಿದ್ದಾಗ ತನ್ನ ಸ್ನೇಹಿತರನ್ನೂ ಸಿಕ್ಕಿ ಬೀಳಿಸಿ ತಮಾಷೆ ನೋಡುವುದು, ಬೇಜಾರಲ್ಲಿ ಇದ್ದಾಗ ಎರಡು ಹೊಡೆದಾದರೂ ಅದನ್ನು ಬಾಯಿ ಬಿಡಿಸುವ ಗೆಳೆಯರಿಗಿಂತ ಮಿಗಿಲಾದುದು ಯಾವುದೂ ಇಲ್ಲ. ಕೈ ಕುಲುಕಿ ಹೋಗುವ ಸಾವಿರ ಸ್ನೇಹಿತರಿಗಿಂತ ಕಷ್ಟಕ್ಕೆ ಸ್ಪಂದಿಸಿ “ಮಚ್ಚ ನಾನಿದೀನಿ” ಅನ್ನೋ ಒಬ್ಬ ಸ್ನೇಹಿತ ಇದ್ದರೆ ಸಾಕು.

Advertisement

ನಿಜವಾದ ಸ್ನೇಹಿತರು ನಮ್ಮ ಅತ್ಯುತ್ತಮ ಆಸ್ತಿ. ʼಭಾರತರತ್ನʼ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಹೇಳಿದಂತೆ, “ಒಂದು ಪುಸ್ತಕ ನೂರು ಸ್ನೇಹಿತರಿಗೆ ಸಮ, ಆದರೆ ಒಬ್ಬ ಸ್ನೇಹಿತ ಇಡೀ ಗ್ರಂಥಾಲಯಕ್ಕೆ ಸಮ” ಎಂಬಂತೆ,  ಉತ್ತಮ ಸ್ನೇಹಿತರಿರುವ ಪ್ರತಿಯೊಬ್ಬರೂ ಅದೃಷ್ಟಶಾಲಿಗಳು.

ಪ್ರಜ್ವಲ್.ಸಿ

ಅಂತಿಮ ಬಿ.ಎ, ಪತ್ರಿಕೋದ್ಯಮ

ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next