Advertisement

7,893 ಕಿ.ಮೀ.ಬೈಕ್‌ ಸವಾರಿ ಮಾಡಿದ ಉಡುಪಿಯ ಸ್ನೇಹಿತರು

12:06 AM Aug 02, 2019 | Sriram |

ಉಡುಪಿ: ಉಡುಪಿಯಿಂದ ಲಡಾಖ್‌ ಸಮೀಪದ ಕಾರ್ಗಿಲ್ ಸ್ಮಾರಕದವರೆಗೆ ಬೈಕ್‌ನಲ್ಲೇ ಕ್ರಮಿಸಿ ಉಡುಪಿಯ ಇಬ್ಬರು ಸ್ನೇಹಿತರು ದಾಖಲೆ ಬರೆದಿದ್ದಾರೆ. ಒಟ್ಟು 24 ದಿನಗಳಲ್ಲಿ 7,893 ಕಿ.ಮೀ. ದೂರಕ್ಕೆ ಇವರು ಪ್ರವಾಸ ಮಾಡಿದ್ದಾರೆ.

Advertisement

ಉಡುಪಿಯ ಪ್ರಫ‌ುಲ್ ಕುಮಾರ್‌ ಎಂ. ಪಟೇಲ್ ಅವರ ಪುತ್ರ ಮಣಿಪಾಲ ಎಂಐಟಿ ಬಿಇ ಸಿವಿಲ್ ಎಂಜಿನಿಯರ್‌ ನಯನ್‌ ಕುಮಾರ್‌ ಪ್ರಫ‌ುಲ್ ಕುಮಾರ್‌ ಪಟೇಲ್ ಮತ್ತು ಉಡುಪಿಯ ವಿಶ್ವನಾಥ ಕಾಮತ್‌ ಅವರ ಪುತ್ರ ಸಾಫ್ಟ್ವೇರ್‌ ಎಂಜಿನಿಯರ್‌ ಸಿದ್ಧೀಶ್‌ ಕಾಮತ್‌ ಅವರೇ ಬೈಕ್‌ನಲ್ಲಿ ಈ ಸಾಹಸ ಮಾಡಿದವರು.

ಬೈಕ್‌ ರೈಡ್‌ ಆಸಕ್ತಿ
ಸಣ್ಣವರಿದ್ದಾಗಲೇ ಬೈಕ್‌ ರೈಡ್‌ ಆಸಕ್ತಿಯಿಂದಾಗಿ ನಯನ್‌ ಕುಮಾರ್‌ ವಿವಿಧೆಡೆ ಪ್ರವಾಸ ಮಾಡಿದ್ದು, ‘ಫೀನಿಕ್ಸ್‌ ವೈಲ್ಡರ್‌ನೆಸ್‌ ಎಕ್ಸ್‌ಪ್ಲೋರೇಶನ್‌ ಕ್ಲಬ್‌’ ಸ್ಥಾಪಿಸಿ ಅದರ ಮೂಲಕ ಪ್ರಪಂಚದ ಮೂಲೆ ಮೂಲೆಗೂ ತೆರಳಬೇಕೆಂಬ ಕನಸು ಕಂಡರು. ಇದರ ಮೊದಲ ಪ್ರಯತ್ನವಾಗಿ ಸ್ನೇಹಿತನೊಂದಿಗೆ ಲಡಾಖ್‌ಗೆ ತೆರಳಿದ್ದಾರೆ.

ಎನ್‌ಫೀಲ್ಡ್ ನಲ್ಲಿ ಸವಾರಿ
ಇವರು ಪ್ರವಾಸಕ್ಕೆ ರಾಯಲ್ ಎನ್‌ಫೀಲ್ಡ್  ಹಿಮಾಲಯನ್‌ ಮತ್ತು ಸ್ಟಾಂಡರ್ಡ್‌ 350 ಮಾದರಿಯ ಬೈಕ್‌ ಬಳಸಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ಗುಜರಾತ್‌, ರಾಜಸ್ಥಾನ, ಪಂಜಾಬ್‌, ಜಮ್ಮು ಕಾಶ್ಮೀರ, ಹರಿಯಾಣ ಮೂಲಕ ಲಡಾಖ್‌ಗೆ ತೆರಳಿದ್ದಾರೆ. ಅತಿ ದುರ್ಗಮ ಮಾರ್ಗಗಳೂ ಸೇರಿದಂತೆ 49 ಡಿಗ್ರಿಯಿಂದ -14 ಡಿಗ್ರಿ ಉಷ್ಣಾಂಶ ವಾತಾವರಣದಲ್ಲಿಯೂ ಸವಾರಿ ನಡೆಸಿದ್ದಾರೆ.

ಕಾರ್ಗಿಲ್ ಯೋಧರಿಗೆ ನಮನ
ಕಾರ್ಗಿಲ್ ನಲ್ಲಿ ಯೋಧರ ಸ್ಮಾರಕಕ್ಕೆ ಭೇಟಿ ನೀಡಿ ಬೈಕ್‌ ಸವಾರರು ನಮನ ಸಲ್ಲಿಸಿದ್ದಾರೆ. ಇದರೊಂದಿಗೆ ಲೇಹ್‌-ಲಡಾಖ್‌ನ ಸುಂದರ ತಾಣಗಳಿಗೆ ಭೇಟಿ ನೀಡಿದ್ದಾರೆ. ಖರ್ದೂಂಗ್ಲಾ ಪಾಸ್‌, ಪ್ಯಾಗೋಂಗ್‌ ಸರೋವರ ಮುಂತಾದ ಹಲವಾರು ಪ್ರಮುಖ ತಾಣಗಳನ್ನು ವೀಕ್ಷಿಸಿದ್ದಾರೆ.

Advertisement

ಹಿಮಾವೃತ ಸ್ಥಳದಲ್ಲಿ ವಾಸ್ತವ್ಯ
ಪ್ಯಾಂಗೊಂಗ್‌ನಿಂದ ಲೇಹ್‌ ಕಡೆಗೆ ತೆರಳಿ ಹಿಮಾವೃತ ತಣ್ಣೀರು ಕ್ರಾಸಿಂಗ್‌, ಹಿಮಾವೃತ ರಸ್ತೆಗಳಲ್ಲಿ ಸಾಗಿ ಚಾಂಗ್ಲಾ ಪಾಸ್‌ ಮೂಲಕ ಹಾದು ವಿಶ್ವದ ಎರಡನೇ ಅತೀ ಎತ್ತರದ ಮೋಟಾರು ಸಾಮರ್ಥ್ಯದ ರಸ್ತೆಯಲ್ಲಿ ಪಯಣಿಸಿದ್ದಾರೆ. ಹಿಮಪಾತದ ಕಾರಣ ಒಂದೊಮ್ಮೆ ಅಲ್ಲೇ ವಾಸ್ತವ್ಯ ಮಾಡಬೇಕಾಯ್ತು ಎನ್ನುತ್ತಾರೆ. ಇದರೊಂದಿಗೆ ಜಲಿಯನ್‌ ವಾಲಾಬಾಗ್‌, ಅಮೃತಸರದ ಗೋಲ್ಡನ್‌ ಟೆಂಪಲ್, ಜೈಪುರದ ವಿವಿಧ ತಾಣಗಳಿಗೂ ಭೇಟಿ ನೀಡಿದ್ದಾರೆ.

ಛಲ,ಆಸಕ್ತಿ ಬೇಕು

ರೋಮಾಂಚನಕಾರಿ ಅನುಭವದ ಮೂಲಕ ನಡೆಸಿದ ಬೈಕ್‌ ರೈಡಿಂಗ್‌ ಕನಸು ಈಡೇರಿದೆ. ಇದರಿಂದ ಭಾರತೀಯ ಜನಜೀವನ, ಆಚಾರ-ವಿಚಾರ, ಸಂಸ್ಕೃತಿಗಳ ಪರಿಚಯವಾಗಿದೆ. ಸಾಧನೆಗೈಯ್ಯಲು ಛಲ, ಪರಿಶ್ರಮ, ಆಸಕ್ತಿ ಬೆಳೆಸಿಕೊಳ್ಳಬೇಕೆಂಬ ಸತ್ಯ ಅರಿವಾಗಿದೆ.
ನಯನ್‌ ಕುಮಾರ್‌, ಸಿದ್ಧೀಶ್‌ ಕಾಮತ್‌
Advertisement

Udayavani is now on Telegram. Click here to join our channel and stay updated with the latest news.

Next