Advertisement
ಕಾಂಗ್ರೆಸ್-ಜನತಾ ಪರಿವಾರದ ಹಿಡಿತದಲ್ಲಿದ್ದ ವಿಜಯಪುರ ನಗರ ಕ್ಷೇತ್ರದಲ್ಲಿ ಕೇಸರಿ ಕೋಟೆ ಕಟ್ಟುವಲ್ಲಿ ಕೇಂದ್ರದ ಮಾಜಿ ಸಚಿವರೂ ಆಗಿರುವ ವಿಜಯಪುರ ಹಾಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ರಾಜ್ಯದ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಜತೆಯಾಗಿ ಶ್ರಮಿಸಿದವರು.
Related Articles
Advertisement
ಆದರೆ, 2004 ಹಾಗೂ 2008ರಲ್ಲಿ ಸತತವಾಗಿ ಎರಡು ಬಾರಿ ಜಯ ಸಾಧಿ ಸಿದ್ದ ಪಟ್ಟಣಶೆಟ್ಟಿ, ರಾಜ್ಯದಲ್ಲಿ ಕುಮಾರಸ್ವಾಮಿ-ಯಡಿಯೂರಪ್ಪ ಸಾರಥ್ಯದ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಜವಳಿ ಸಚಿವರಾಗಿದ್ದರು. ಆಗ ಯತ್ನಾಳ ಹಾಗೂ ಪಟ್ಟಣಶೆಟ್ಟಿ ಮಧ್ಯೆ ರಾಜಕೀಯ ಭಿನ್ನಾಭಿಪ್ರಾಯ ಆರಂಭಗೊಂಡು ದಿನೇ ದಿನೆ ತಾರಕಕ್ಕೇರಿತು. ಈ ಹಂತದಲ್ಲಿ ವಿಜಯಪುರ ಲೋಕಸಭೆ ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು.
ಯತ್ನಾಳಗೆ ಕೈ ತಪ್ಪಿದ ಟಿಕೆಟ್: ಹೀಗಾಗಿ 2013ರಲ್ಲಿ ಅಪ್ಪು ಪಟ್ಟಣಶೆಟ್ಟಿ ಅವರಿಗೆ ಪಕ್ಷ ಮಣೆ ಹಾಕಿದ್ದರಿಂದ ನಗರ ಕ್ಷೇತ್ರದಿಂದ ಸ್ಪರ್ಧೆ ಬಯಸಿದ ಯತ್ನಾಳ ಅವರಿಗೆ ಟಿಕೆಟ್ ಕೈತಪ್ಪಿತು. ಇದರಿಂದ ಪಕ್ಷದ ವರಿಷ್ಠರ ವಿರುದ್ಧ ವಾಗ್ಧಾಳಿ ನಡೆಸಿ ಯತ್ನಾಳ ಅವರನ್ನು ಕಮಲ ಪಕ್ಷ ಉಚ್ಚಾಟನೆ ಮಾಡಿದ್ದರಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಹಾಲಿ ಶಾಸಕರಾಗಿ ಬಿಜೆಪಿ ಅಭ್ಯರ್ಥಿಯಾಗಿದ್ದ ಅಪ್ಪು ಪಟ್ಟಣಶೆಟ್ಟಿ ಹಾಗೂ ಯತ್ನಾಳ ಇಬ್ಬರೂ ಕಾಂಗ್ರೆಸ್ ಅಭ್ಯರ್ಥಿ ಡಾ.ಎಂ.ಎಸ್. ಬಾಗವಾನ ವಿರುದ್ಧ ಸೋಲುಂಡರು. ಬಳಿಕ ಮತ್ತೆ ಬಿಜೆಪಿ ಸೇರಿ 2016ರಲ್ಲಿ ನಡೆದ ವಿಜಯಪುರ-ಬಾಗಲಕೋಟೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಮೇಲ್ಮನೆ ಚುನಾವಣೆಯಲ್ಲಿ ಯತ್ನಾಳ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಈ ಹಂತದಲ್ಲೂ ಟಿಕೆಟ್ ಕೈ ತಪ್ಪಿದ್ದರಿಂದ ಯತ್ನಾಳ ಮತ್ತೆ ಪಕ್ಷದ ವರಿಷ್ಠರ ವಿರುದ್ಧ ಟೀಕೆ ಮಾಡಿ ಮತ್ತೊಮ್ಮೆ ಪಕ್ಷದಿಂದ ಉಚ್ಚಾಟನೆಗೊಂಡಿದ್ದರು.
2018ರ ಚುನಾವಣೆ ಹಂತದಲ್ಲಿ ಮೇಲ್ಮನೆ ಶಾಸಕ ಸ್ಥಾನದ ಅವಧಿ ಇದ್ದರೂ ರಾಜೀನಾಮೆ ನೀಡಿ ಮತ್ತೆ ಮಾತೃಪಕ್ಷ ಬಿಜೆಪಿ ಸೇರಿದ ಯತ್ನಾಳ, ವಿಜಯಪುರ ನಗರ ಕ್ಷೇತ್ರದಿಂದ ಟಿಕೆಟ್ ಗಿಟ್ಟಿಸಿ ಜಯ ಸಾಧಿಸಿದರು. ಆದರೆ ಪಕ್ಷ ತಮ್ಮನ್ನು ಪರಿಗಣಿಸುವ ವಿಶ್ವಾಸದಲ್ಲಿದ್ದ ಪಟ್ಟಣಶೆಟ್ಟಿ ಅವರಿಗೆ ನಿರಾಸೆಯಾಯ್ತು. ಪಕ್ಷ ಬಿಡುತ್ತಾರೆ ಎಂಬ ಗುಲ್ಲುಗಳೆಲ್ಲ ಹುಸಿಯಾಗಿ ಪಟ್ಟಣಶೆಟ್ಟಿ ಬಿಜೆಪಿಯಲ್ಲೇ ಉಳಿದರು. ಇಂದಿಗೂ ಒಂದಾಗಿಲ್ಲ ಏಕೆ?:
ಆದರೆ ಪಕ್ಷ ಕಟ್ಟಲು ಜತೆಯಾಗಿ ಹೆಗಲು ಕೊಟ್ಟಿದ್ದ ಯತ್ನಾಳ-ಪಟ್ಟಣಶೆಟ್ಟಿ ಇಬ್ಬರೂ ಒಂದೇ ಪಕ್ಷದಲ್ಲಿದ್ದರೂ ಪರಸ್ಪರ ಮುಖ ನೋಡದಷ್ಟು ದೊಡ್ಡ ಮಟ್ಟಕ್ಕೆ ಬಿರುಕು ಬೆಳೆಯಿತು. ಇಬ್ಬರ ಮಧ್ಯೆ ಪರಸ್ಪರ ವೈಯಕ್ತಿಕ ಹಂತದ ಟೀಕೆ ಆರಂಭಗೊಂಡು ಇಬ್ಬರ ಮಧ್ಯದ ರಾಜಕೀಯ ವೈಮನಸ್ಸು ದೊಡ್ಡ ಮಟ್ಟದಲ್ಲಿ ವೈರತ್ವಕ್ಕೆ ತಿರುಗಿತು. ಬಳಿಕ ಇಬ್ಬರ ಮಧ್ಯದ ರಾಜಕೀಯ ಮೀರಿದ ಸ್ನೇಹದ ಆಂತರಿಕ ಅಪ್ಪುಗೆಗೆ ಮತ್ತೆ ಬೆಸುಗೆ ಆಗಲೇ ಇಲ್ಲ. ಇಬ್ಬರನ್ನು ಒಂದುಗೂಡಿಸುವಲ್ಲಿ ಪಕ್ಷದ ವೇದಿಕೆಯಲ್ಲೂ ಹೈಕಮಾಂಡ್ ಯಶಸ್ವಿಯಾಗಲಿಲ್ಲ. ಪರಿಣಾಮ ಇದೀಗ ವಿಜಯಪುರ ನಗರ ಕ್ಷೇತ್ರದಿಂದ ಮತ್ತೂಮ್ಮೆ ಹಳೆಯ ಸ್ನೇಹಿತರ ಮಧ್ಯೆ ಟಿಕೆಟ್‌ಗಾಗಿ ಪೈಪೋಟಿ ನಡೆದಿದೆ. -ಜಿ.ಎಸ್. ಕಮತರ