ಎಲ್ಲರಿಗೂ “ಟಿಪ್ಪುಸುಲ್ತಾನ್’ ಗೊತ್ತು. ಆದರೆ, “ಟಿಪ್ಪುವರ್ಧನ್’ ಗೊತ್ತಾ? – ಹೀಗೆಂದಾಕ್ಷಣ, ಸಣ್ಣ ಪ್ರಶ್ನೆ ಮೂಡಬಹುದು. ವಿಷಯವಿಷ್ಟೇ, “ಟಿಪ್ಪುವರ್ಧನ್’ ಎಂಬುದು ಸಿನಿಮಾ ಹೆಸರು. ಅಷ್ಟೇ ಅಲ್ಲ, ಆ ಚಿತ್ರದ ನಿರ್ದೇಶಕರ ಹೆಸರೂ ಕೂಡ. ಎಂ.ಟಿಪ್ಪುವರ್ಧನ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಜೊತೆಗೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಕಾರ್ಯಕ್ರಮ ಆಯೋಜಿಸಿದ್ದರು ಟಿಪ್ಪುವರ್ಧನ್. ಸಿನಿ ಮ್ಯೂಸಿಕ್ ಮೂಲಕ ಆಡಿಯೋ ಸಿಡಿ ಬಿಡುಗಡೆ ಮಾಡಲಾಯಿತು. ಅದು ಕೇವಲ ಆಡಿಯೋ ಸಿಡಿ ಮಾತ್ರವಲ್ಲ, ಅಂದು “ಅನುಭವಿಸಿ’ ಮತ್ತು “ಮಾನವೀಯತೆ’ ಎಂಬ ಎರಡು ಪುಸ್ತಕ ಬಿಡುಗಡೆ ಕಾರ್ಯಕ್ರಮವಾಗಿಯೂ ಮಾರ್ಪಟ್ಟಿತ್ತು. ಆಡಿಯೋ ಸಿಡಿ ಬಿಡುಗಡೆಗೂ ಮುನ್ನ, ತೆರೆಯ ಮೇಲೆ ಟ್ರೇಲರ್, ಹಾಡು ತೋರಿಸಲಾಯಿತು. ಆ ಬಳಿಕ ವೇದಿಕೆ ಮೇಲೆ ಚಿತ್ರತಂಡದವರನ್ನು ಕರೆಸಿದ ಟಿಪ್ಪುವರ್ಧನ್, ತಮ್ಮ ಚಿತ್ರದ ಬಗ್ಗೆ ಮಾತಿಗೆ ನಿಂತರು. “ಇದೊಂದು ಸೌಹಾರ್ದ ಸಾರುವ ಕಥೆ ಹೊಂದಿದೆ. ಇಬ್ಬರು ಗೆಳೆಯರ ಸಮಾಜ ಸುಧಾರಣೆ ಹೋರಾಟ ಚಿತ್ರದ ಮುಖ್ಯ ಸಾರಾಂಶ. ರಾಜಕೀಯದಲ್ಲಿ ವಿನಾಕಾರಣ, ರಾಜಕಾರಣ ಮಾಡಿ ಸಮಾಜದ ಶಾಂತಿ ಹದಗೆಟ್ಟು, ಸಮಾಜ ಹಾಳಾಗುತ್ತೆ. ಅದು ಬೇಡ ಎಂಬ ವಿಷಯ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಪೊಲೀಸ್, ಪತ್ರಕರ್ತರು, ಪೊಲಿಟಿಷಿಯನ್ಸ್ ಈ ಮೂವರು ಸರಿಯಾಗಿದ್ದರೆ ಸಮಾಜ ಗಟ್ಟಿಯಾಗುತ್ತೆ ಎಂಬ ಸಂದೇಶದ ಜೊತೆಗೆ ಪ್ರೀತಿ, ಸೆಂಟಿಮೆಂಟ್, ಹಾಸ್ಯ ಎಲ್ಲವೂ ಇಲ್ಲಿ ಮೇಳೈಸಿದೆ. ಇನ್ನು, ಈ ಚಿತ್ರದ ಮೂಲಕ ನಾಯಕ, ನಾಯಕಿ ಇಬ್ಬರರನ್ನು ಪರಿಚಯಿಸಲಾಗಿದೆ. ಬಹುತೇಕ ಹೊಸಬರೇ ಸೇರಿ ಮಾಡಿದ ಚಿತ್ರವಿದು. ನಿಮ್ಮ ಸಹಕಾರ ಇರಲಿ’ ಅಂದರು ಟಿಪ್ಪುವರ್ಧನ್. ಚಿತ್ರದ ನಾಯಕ ಕೇಶವ್ ಅವಕಾಶ ಕೊಟ್ಟ ನಿರ್ದೇಶಕರಿಗೆ ಥ್ಯಾಂಕ್ಸ್ ಹೇಳಿದರೆ, ವಿಶೇಷ ಪಾತ್ರ ನಿರ್ವಹಿಸಿರುವ ಚಿಕ್ಕ ಹೆಜ್ಜಾಜಿ ಮಹದೇವ್, ಇದೊಂದು ಸಮಾಜಕ್ಕೆ ಸಂದೇಶ ಕೊಡುವ ಚಿತ್ರವಾಗಿದ್ದು, ಎಲ್ಲರೂ ಸಹಕಾರ ಕೊಡಬೇಕು ಎಂಬ ಮನವಿ ಇಟ್ಟರು. ಚಿತ್ರಕ್ಕೆ ಆರ್.ಬಿ.ನದಾಫ್ ನಿರ್ಮಾಪಕರು. ದಾಮೋದರ್ ಸಂಗೀತವಿದೆ. ಸುರೇಶ್ ಚಂದ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಸುಧಾಕರ್ ಬಾಬು ಛಾಯಾಗ್ರಹಣ ಮಾಡಿದ್ದಾರೆ. ಚಿತ್ರದಲ್ಲಿ ಮೈಕಲ್ ಮಧು, ಜೈ ಕುಮಾರ್, ಮಂಜು, ರಮ್ಯಾ, ಗೀತಪ್ರಿಯ, ಇನ್ಸಾಫ್ಖಾನ್, ಮಾಸ್ಟರ್ ಸೂರ್ ಮತ್ತು ಮಾಸ್ಟರ್ ಮನ್ವಿತ್ ನಟಿಸಿದ್ದಾರೆ.