– ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ್‌ರಾವ್ ಆಗಮನ
– ಎರಡೂ ಗುಂಪಿನಿಂದ ಮಾಹಿತಿ ಸಂಗ್ರಹ ಆರಂಭ
– ಶಿಸ್ತುಕ್ರಮದ ಆಗ್ರಹಕ್ಕೆ ಸದ್ಯ ಪರಿಗಣನೆಯಿಲ್ಲ
ಬೆಂಗಳೂರು: ರಾಜ್ಯ ಬಿಜೆಪಿ ಬಿಕ್ಕಟ್ಟಿಗೆ ಶಿಸ್ತುಕ್ರಮದ ಮೂಲಕ ಪರಿಹಾರ ಕಲ್ಪಿಸುವ ಬದಲು ಸೌಹಾರ್ದಯುತವಾಗಿ ಬಗೆಹರಿಸಲು ಪಕ್ಷದ ವರಿಷ್ಠರು ತೀರ್ಮಾನಿಸಿದ್ದು, ಪಕ್ಷದ ವಿರುದ್ಧ ಬಹಿರಂಗವಾಗಿ ತಿರುಗಿ ಬಿದ್ದಿರುವ ಮುಖಂಡರ ಮೇಲೆ ಶಿಸ್ತುಕ್ರಮ ಕೈಗೊಳ್ಳಬೇಕು ಎಂಬ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಒತ್ತಾಯವನ್ನು ಸದ್ಯಕ್ಕೆ ಪರಿಗಣಿಸದಿರಲು ವರಿಷ್ಠರು ನಿರ್ಧರಿಸಿದ್ದಾರೆ.
Advertisement
ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ಶಿಸ್ತುಕ್ರಮ ಕೈಗೊಂಡರೆ ಸಮಸ್ಯೆ ಉದ್ಭವವಾಗಬಹುದು. ಹೀಗಾಗಿ ಬಿಕ್ಕಟ್ಟಿಗೆ ಕಾರಣವಾದ ಸಮಸ್ಯೆಗಳೇನು ಎಂಬುದನ್ನು ಅರಿತು ಎರಡೂ ಕಡೆಯವರನ್ನು ಕೂರಿಸಿ ಬಿಕ್ಕಟ್ಟು ಶಮನಕ್ಕೆ ವರಿಷ್ಠರು ಮುಂದಾಗಲಿದ್ದಾರೆ. ಒಂದು ವೇಳೆ ಭಿನ್ನಮತ ಬಗೆಹರಿಯುವುದು ಕಷ್ಟಸಾಧ್ಯ ಎಂದಾದಲ್ಲಿ ಮಾತ್ರ ಶಿಸ್ತುಕ್ರಮದ ಅಸ್ತ್ರ ಬಳಸಲು ವರಿಷ್ಠರು ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಮಧ್ಯೆ, ಪಕ್ಷದಲ್ಲಿನ ಬೆಳವಣಿಗೆಯಿಂದ ತೀವ್ರ ಅಸಮಧಾನಗೊಂಡಿದ್ದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಗುರುವಾರ ಅತೃಪ್ತರು ನಡೆಸಿದ ಸಭೆ, ಅದರ ಹಿಂದಿರುವ ಕಾಣದ ಕೈಗಳು, ಅತೃಪ್ತರಿಗೆ ಬೆಂಬಲ ನೀಡುತ್ತಿರುವ ಬಿ.ಎಲ್. ಸಂತೋಷ್, ಕೆ.ಎಸ್. ಈಶ್ವರಪ್ಪ ವಿರುದ್ಧ ದೂರು ನೀಡಿ ಶಿಸ್ತು ಕ್ರಮಕ್ಕೆ ಆಗ್ರಹಿಸಲು ಶುಕ್ರವಾರ ರಾತ್ರಿಯೇ ದೆಹಲಿಗೆ ತೆರಳಿದ್ದರು.
Related Articles
Advertisement
ರಾಮ್‌ಲಾಲ್ ದೆಹಲಿಯಲ್ಲೇ ಇದ್ದರೂ ಯಡಿಯೂರಪ್ಪ ಅವರಿಗೆ ಸಿಕ್ಕಲಿಲ್ಲ. ಈ ಮೂಲಕ ಮೊದಲು ನಿಮ್ಮ ಕಡೆಯಿಂದ ಆಗಿರುವ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಿ ನಂತರ ಶಿಸ್ತುಕ್ರಮದ ಬಗ್ಗೆ ಒತ್ತಾಯಿಸಿ ಎಂಬ ಸಂದೇಶವನ್ನು ಯಡಿಯೂರಪ್ಪರಿಗೆ ಕಳಿಸಿದ್ದಾರೆ. ಹೀಗಾಗಿ ಯಡಿಯೂರಪ್ಪ ಬರಿಗೈಲಿ ವಾಪಸ್ ಆಗುವಂತಾಗಿದೆ.