Advertisement
ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರ ವಿಶೇಷ ಮುತುವರ್ಜಿಯಿಂದ ಈ ಸೇತುವೆಗೆ ರಾಜ್ಯ ಸರಕಾರವು 31 ಕೋ.ರೂ. ಅನುದಾನ ಮಂಜೂರುಗೊಳಿಸಿದ್ದು, ಅ. 22ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿವಿಧ ಕಾಮಗಾರಿಗಳ ಉದ್ಘಾಟನೆಗಾಗಿ ಬಂಟ್ವಾಳಕ್ಕೆ ಆಗಮಿಸಲಿದ್ದು, ಇದೇ ವೇಳೆ ಈ ಸೇತುವೆಗೂ ಶಿಲಾನ್ಯಾಸ ನೆರವೇರಿಸಲಿದ್ದಾರೆ.
Related Articles
ಅಜಿಲಮೊಗರು-ಕಡೇಶ್ವಾಲ್ಯ ಸೇತುವೆ ಬಗ್ಗೆ ಕ್ರಿಯಾ ಯೋಜನೆ ರೂಪಿಸುವಂತೆ ಆರಂಭದಲ್ಲಿ ಸಚಿವರು ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳಿಗೆ ಸೂಚನೆ ನೀಡಿದ್ದರು. ಅದರಂತೆ ಎಂಜಿನಿಯರ್‌ಗಳು ನಿರ್ಮಾಣದ ಲೈನ್ ಎಸ್ಟಿಮೇಟ್ ಸಿದ್ಧಪಡಿಸಿ ಸಚಿವರಿಗೆ ನೀಡಿದ್ದರು. ಬಳಿಕ ಇದನ್ನು ಸರಕಾರದ ಮುಂದಿರಿಸಲಾಗಿತ್ತು. ಮುಂದೆ ಸೇತುವೆಗೆ ಅನುದಾನ ಮಂಜೂರುಗೊಂಡಿದ್ದು, ವಿಸ್ತೃತ ಯೋಜನಾ ವರದಿಯೂ ಸಿದ್ಧಗೊಂಡು ಕೆಆರ್‌ಡಿಸಿಎಲ್ ಪ್ರಧಾನ ಕಚೇರಿಗೆ ತಲುಪಿದೆ. ಟೆಂಡರ್ ಕಾರ್ಯವೂ ಬಹುತೇಕ ಪೂರ್ಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
20 ದಿನಗಳಲ್ಲಿ ಕಾಮಗಾರಿ ಶುರು?: ಸೇತುವೆಯ ಕಾಮಗಾರಿಯನ್ನು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ (ಕೆಆರ್‌ಡಿಸಿಎಲ್)ಗೆ ವಹಿಸಲಾಗಿದ್ದು, ಪ್ರಸ್ತುತ ಮಳೆ ಇರುವುದರಿಂದ ಕಾಮಗಾರಿ ಆರಂಭ ಕೊಂಚ ನಿಧಾನವಾಗಲಿದೆ. ನಿರೀಕ್ಷೆಯಂತೆ ಒಂದೆರಡು ದಿನಗಳಲ್ಲಿ ಮಳೆ ಕಡಿಮೆಯಾದರೆ ಮುಂದಿನ 20 ದಿನಗಳಲ್ಲಿ ಸೇತುವೆಯ ಕಾಮಗಾರಿ ಆರಂಭಗೊಳ್ಳಲಿದೆ. ಸೇತುವೆ ಒಟ್ಟು 312 ಮೀ. ಉದ್ದ ಇರಲಿದ್ದು, 8 ಮೀ. ಅಂದರೆ, 24 ಅಡಿ ಅಗಲವಿರುತ್ತದೆ. ಸೇತುವೆ ಯನ್ನು ಸಂಪರ್ಕಿಸಲು ಎರಡೂ ಕಡೆಗಳಲ್ಲೂ ಸೂಕ್ತ ರಸ್ತೆಗಳಿದ್ದು, ಹೀಗಾಗಿ ಅರ್ಧ ಕಿ.ಮೀ.ಮಾತ್ರ ರಸ್ತೆ ನಿರ್ಮಾಣವಾಗಲಿದೆ.
ಸಂಪರ್ಕ ಸುಲಭವಾಗಲಿದೆ: ಈ ಭಾಗದ ನೇತ್ರಾವತಿ ನದಿಯ ಎರಡೂ ಭಾಗಗಳಲ್ಲಿ ಸೂಕ್ತ ರಸ್ತೆ ಸಂಪರ್ಕವಿದ್ದು, ಸೇತುವೆ ಇಲ್ಲದೆ ಕನಿಷ್ಠ ದೂರವನ್ನು ಸುತ್ತು ಬಳಸಿ ಸಾಗಬೇಕಾದ ಸ್ಥಿತಿ ಇತ್ತು. ಪ್ರಸ್ತುತ ಸೇತುವೆ ನಿರ್ಮಾಣಗೊಂಡರೆ ಬಂಟ್ವಾಳ ತಾಲೂಕಿನ ನಾವೂರ, ಸರಪಾಡಿ, ಮಣಿನಾಲ್ಕೂರು, ಉಳಿ ಭಾಗದ ಜನರು ಪುತ್ತೂರು, ಉಪ್ಪಿನಂಗಡಿ ಸಂಪರ್ಕಿಸಲು ಸುಲಭವಾಗಲಿದೆ.
ಜತೆಗೆ ಕಡೇಶ್ವಾಲ್ಯ ಭಾಗದವರಿಗೂ ಬಂಟ್ವಾಳ ಸಂಪರ್ಕಿಸಲು ಹತ್ತಿರವಾಗಲಿದೆ. ಪ್ರಸ್ತುತ ಉಳಿ-ವಗ್ಗ ರಸ್ತೆಯಿಂದ ಸರಪಾಡಿ-ಮಣಿಹಳ್ಳ ರಸ್ತೆಯನ್ನು ಸಂಪರ್ಕಿಸುವ ಬಜ- ಬಲಯೂರು ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಸೇತುವೆ ನಿರ್ಮಾಣ ಸಂದರ್ಭ ಈ ರಸ್ತೆಯನ್ನೂ ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ಸಚಿವರು “ಉದಯವಾಣಿ’ಗೆ ತಿಳಿಸಿದ್ದಾರೆ.
ಈ ಭಾಗದಲ್ಲಿ ಸೇತುವೆಯೊಂದು ನಿರ್ಮಾಣವಾಗಬೇಕು ಎಂದು ಕಳೆದ ಹಲವು ವರ್ಷಗಳಿಂದ ಜನರು ಬೇಡಿಕೆಯನ್ನಿಟ್ಟಿ ದ್ದರು. ಆದರೆ ಹಿಂದೆ ಅಧಿಕಾರ ನಡೆಸಿದವರು ಭರವಸೆ ಕೊಟ್ಟಿದ್ದರೇ ಹೊರತು ಅನುದಾನ ನೀಡಿರಲಿಲ್ಲ. ಪ್ರಸ್ತುತ 31 ಕೋ.ರೂ. ಬಿಡುಗಡೆಗೊಂಡಿದ್ದು, ಸಂಪರ್ಕ ರಸ್ತೆಯ ಕಾಮಗಾರಿಯೂ ನಡೆಯಲಿದೆ. ಉಳಿ-ವಗ್ಗ ರಸ್ತೆಯ ದೈವಸ್ಥಳದಿಂದ ಕಾಮಗಾರಿ ನಡೆಯಲಿದೆ. – ಬಿ. ರಮಾನಾಥ ರೈ, ಉಸ್ತುವಾರಿ ಸಚಿವರು, ದ.ಕ. ಜಿಲ್ಲೆ. – ಕಿರಣ್ ಸರಪಾಡಿ